ADVERTISEMENT

ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ಮನವಿ

ಪೌರಾಡಳಿತ ಸಚಿವರಿಗೆ ಪೌರಸೇವಾ ನೌಕರರ ಸಂಘದ ಮುಖಂಡರ ಆಗ್ರಹ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2022, 4:24 IST
Last Updated 30 ಅಕ್ಟೋಬರ್ 2022, 4:24 IST
ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಮುಖಂಡರು ರಾಯಚೂರಿನ ಗಂಜ್ ವೃತ್ತದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜರಿಗೆ ಶನಿವಾರ ಮನವಿ ಸಲ್ಲಿಸಿದರು.
ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಮುಖಂಡರು ರಾಯಚೂರಿನ ಗಂಜ್ ವೃತ್ತದಲ್ಲಿ ಪೌರಾಡಳಿತ ಸಚಿವ ಎಂ.ಟಿ.ಬಿ ನಾಗರಾಜರಿಗೆ ಶನಿವಾರ ಮನವಿ ಸಲ್ಲಿಸಿದರು.   

ರಾಯಚೂರು: ಪೌರಕಾರ್ಮಿಕರ ಹುದ್ದೆ ಭರ್ತಿ ಮಾಡಬೇಕು. ವಾಹನ ಚಾಲಕರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಿನಗೂಲಿ ಮತ್ತು ಗುತ್ತಿಗೆ ಪೌರಸೇವಾ ನೌಕರರ ಸಂಘ ಮುಖಂಡರು ಪೌರಾ
ಡಳಿತ ಸಚಿವ ಎಂ.ಟಿ.ಬಿ ನಾಗರಾಜ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ನೇರವೇತನ, ಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರನ್ನು ಕಾಯಂಗೊಳಿಸಲು ಒತ್ತಾಯಿಸಿ ಕಳೆದ ಜುಲೈ 1ರಿಂದ 4ರವರೆಗೆ ರಾಜ್ಯದಾದ್ಯಂತ ಪೌರಕಾರ್ಮಿಕರು ಹೋರಾಟ ನಡೆಸಿದ್ದರು. ರಾಜ್ಯ ಸರ್ಕಾರ ಸಮಿತಿ ರಚಿಸಿತ್ತು. ಸಮಿತಿಯ ಶಿಫಾರಸ್ಸಿನಂತೆ 54 ಸಾವಿರ ನೇರವೇತನ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು, ವಾಹನ ಚಾಲಕರನ್ನು ಕಾಯಂಗೊಳಿಸಲು ಶಿಫಾರಸ್ಸು ಮಾಡಿದರೂ ರಾಜ್ಯ ಸರ್ಕಾರ ಕೇವಲ 11,338 ಪೌರಕಾರ್ಮಿಕರ ಹುದ್ದೆಗಳ ಭರ್ತಿಗೆ ತೀರ್ಮಾನಿಸಿ ಏಳು ದಿನಗಳ ಆಕ್ಷೇಪಣೆಗೆ ಒಳಪಟ್ಟು ಸೆಪ್ಟಂಬರ್ 26ರಂದು ರಾಜ್ಯಪತ್ರ ಪ್ರಕಟಿಸಿತ್ತು. 20 ದಿನಗಳಾದರೂ ಅಂತಿಮ ರಾಜ್ಯ ಪತ್ರ ಪ್ರಕಟಿಸದೇ ವಿಳಂಬ ಮಾಡುತ್ತಿದ್ದು ಖಂಡನೀಯ. ಕೂಡಲೇ ರಾಜ್ಯಪತ್ರ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸುಪ್ರಿಂಕೋರ್ಟ್‌ನ ಉಮಾದೇವಿ ಪ್ರಕರಣದಂತೆ ದಿನಗೂಲಿ ಕಾರ್ಮಿಕರನ್ನು ಸಕ್ರಮಗೊಳಿಸುವ ನೆಪದಲ್ಲಿ ಪೌರ ಕಾರ್ಮಿಕರಲ್ಲದ 80 ಜನರನ್ನು ಕಾನೂನುಬಾಹಿರವಾಗಿ 2017ರ ಏಪ್ರಿಲ್ 10ರಂದು ರಾಯಚೂರು ಜಿಲ್ಲಾಧಿಕಾರಿ ನೇಮಕ ಮಾಡಿದ್ದು, ಜಿಲ್ಲಾಧಿಕಾರಿಯ ಆದೇಶ ರದ್ದುಪಡಿಸಲು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ರಾಯಚೂರು ನಗರಸಭೆಗೆ 364 ಪೌರಕಾರ್ಮಿಕರಿಗೆ ಮಂಜೂರಾಗಿದ್ದು, 225 ಹುದ್ದೆಗಳೆಂದು ತಪ್ಪು ಮಾಹಿತಿ ನೀಡಿದ್ದು 364 ಪೌರಕಾರ್ಮಿಕರ ಮಂಜೂರಾದ ಹುದ್ದೆಗಳೆಂದು ಪರಿಗಣಿಸಲು ರಾಯಚೂರು ನಗರಸಭೆಗೆ ಆದೇಶಿಸಬೇಕು. ರಾಜ್ಯದಲ್ಲಿರುವ ಎಲ್ಲಾ ವಾಹನ ಚಾಲಕರನ್ನು ಕೂಡಲೇ ಕಾಯಂಗೊಳಿಸಬೇಕು. ಮರಣ ಹೊಂದಿದ 5 ಜನ, ನಿವೃತ್ತಿ ಹೊಂದಿದ 3 ಜನ ನೇರವೇತನ ಪೌರಕಾರ್ಮಿಕರ ಕುಟುಂಬಗಳಿಗೆ ನಷ್ಟ ಪರಿಹಾರ ಮತ್ತು ಅವರ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯಾಧ್ಯಕ್ಷ ಎಸ್.ಮಾರೆಪ್ಪ, ಜಿಲ್ಲಾಧ್ಯಕ್ಷ ಉರುಕುಂದಪ್ಪ, ಆರ್.ಹನುಮಂತು, ಶ್ರೀನಿವಾಸ ಕಲವಲದೊಡ್ಡಿ, ಅಬ್ರಹಾಂ ಕಮಲಾಪೂರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.