ಮಸ್ಕಿ: ‘ಪಂಚಮಸಾಲಿ ಸಮಾಜಕ್ಕೆ 2 (ಎ) ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಳಂಬ ಮಾಡುತ್ತಿರುವ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರು ಕಲಬುರಗಿಯಲ್ಲಿ ಮಾರ್ಚ್ 10 ರಂದು ಕಲ್ಯಾಣ ಕರ್ನಾಟಕ ಭಾಗದ ಪಂಚಮಸಾಲಿಗಳ ಸಮಾವೇಶ ನಡೆಸಲಾಗುತ್ತಿದೆ’ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಪಟ್ಟಣದ ಕಿತ್ತೂರು ಚನ್ನಮ್ಮ ನಗರದಲ್ಲಿ ಭಾನುವಾರ ನಡೆದ ತಾಲ್ಲೂಕು ಪಂಚಮಸಾಲಿ ಸಮಾಜದ ಸಮಾವೇಶ ಹಾಗೂ ಭೂ ಧಾನಿಗಳ ಸನ್ಮಾನ ಸಮಾರಂಭದಲ್ಲಿ ಮಾತನಾಡಿ,‘ಲೋಕಸಭಾ ಚುನಾವಣೆ ಒಳಗೆ ಮೀಸಲಾತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಬೇಕು’ ಎಂದು ಒತ್ತಾಯಿಸಿದರು.
ಪಂಚಮಸಾಲಿಗಳು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರಕ್ಕೆ ಹೆಚ್ಚು ಭೂಮಿ ದಾನ ಮಾಡಿದ್ದಾರೆ ಎಂದರು.
ನಮ್ಮ ಹೋರಾಟದ ಉದ್ದೇಶ ಸಮಾಜ ಸಂಘಟನೆಯಾಗಿದೆ. ಮತ್ತೊಂದು ಸಮಾಜದ ವಿರುದ್ಧ ಅಲ್ಲ. ಬೆಲೆ ಬಾಳುವ ತಮ್ಮ ಅರ್ಧ ಎಕರೆ ಭೂಮಿ ದಾನ ಮಾಡಿದ ಮಲ್ಲಪ್ಪ ನಾಯಿಕೋಡೆ ಮತ್ತು ಅವರ ಕುಟುಂಬ ಹೆಸರು ಉಳಿಸುವ ಕೆಲಸ ಮಾಡಿದೆ ಎಂದು ಹೇಳಿದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಸಂಸದ ಸಂಗಣ್ಣ ಕರಡಿ,‘ಪಂಚಮಸಾಲಿ ಸಮಾಜ ಜಗತ್ತಿಗೆ ಅನ್ನ ಕೊಡುವ ಸಮಾಜ. ಬಸವಣ್ಣನವರ ತತ್ವ–ವಿಚಾರಗಳನ್ನು ಅಳವಡಿಸಿಕೊಂಡ ಸಮಾಜ ಇದಾಗಿದೆ’ ಎಂದರು.
ಗಚ್ಚಿನಮಠದ ವರರುದ್ರಮುನಿ ಸ್ವಾಮೀಜಿ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿದರು.
ಮೌನೇಶ ತಾತಾ, ಚಂದ್ರಮೌನೇಶ ತಾತಾ, ವೀರಭದ್ರಪ್ಪ ತಾತಾ, ಪಂಪನಗೌಡ, ಅಮರಪ್ಪ ಗುಡದೂರು, ಅಮರೇಶ ತಾವರಗೇರಿ, ಚಿನ್ನನಗೌಡ ಗೋನಾಳ, ಬಸವರಾಜ ನಾಯಿಕೋಡೆ, ಮಹಾಂತೇಶ ಪಾಟೀಲ, ಮಲ್ಲನಗೌಡ, ಭೂದಾನಿ ಮಲ್ಲಪ್ಪ ನಾಯಿಕೋಡಿ, ಸುರೇಶ ಪಲ್ಲೇದ್ ಹಾಗೂ ಇತರರು ಉಪಸ್ಥಿತರಿದ್ದರು.
ಭೂ ದಾನಿಗೆ ಸನ್ಮಾನ
ಮಸ್ಕಿ ಪಂಚಮಸಾಲಿ ಸಮಾಜಕ್ಕೆ ಅರ್ಧ ಎಕರೆ ಭೂಮಿ ದಾನ ಮಾಡಿದ ಮಲ್ಲಪ್ಪ ನಾಯಿಕೋಡಿ ಮತ್ತು ಅವರ ಪತ್ನಿಯನ್ನು ಬಸವಜಯ ಮೃತ್ಯುಂಜಯ ಸ್ವಾಮೀಜಿ ಸಂಸದ ಕರಡಿ ಸಂಗಣ್ಣ ಸೇರಿದಂತೆ ಅನೇಕ ಮುಖಂಡರು ಸಮಾಜದ ಪರವಾಗಿ ಸನ್ಮಾನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.