ADVERTISEMENT

ಲಿಂಗಸುಗೂರು: ಪೊಲೀಸ್ ಅಧಿಕಾರಿಗಳ ಅಮಾನತಿಗೆ ಆಗ್ರಹ

ಪರಿಶಿಷ್ಟರ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2021, 2:56 IST
Last Updated 30 ನವೆಂಬರ್ 2021, 2:56 IST
ಲಿಂಗಸುಗೂರಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಲಿಂಗಸುಗೂರಲ್ಲಿ ದಲಿತ ಮತ್ತು ಜನಪರ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಲಿಂಗಸುಗೂರು: ತಾಲ್ಲೂಕಿನ ಮುದಗಲ್ ಪೊಲೀಸ್‍ ಠಾಣೆ ವ್ಯಾಪ್ತಿಯ ಕಿಲ್ಲಾರಹಟ್ಟಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಅಪ್ರಾಪ್ತ ಬಾಲಕಿಯ ಅಪಹರಣ ಮತ್ತು ಪರಿಶಿಷ್ಟ ಜಾತಿಯ ಬೈಲಪ್ಪನ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣಗಳಲ್ಲಿ ನಿರ್ಲಕ್ಷ್ಯ ವಹಿಸಿದ ಪೊಲೀಸ್‍ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿ ದಲಿತ ಹಾಗೂ ಜನಪರ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ತಹಶೀಲ್ದಾರ್ ಶಾಲಂಸಾಬ ಮೂಲಕ ಪೊಲೀಸ್‍ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು,‘ಕಿಲ್ಲಾರಹಟ್ಟಿಯಲ್ಲಿ ಒಂದು ವರ್ಷದಿಂದ ಪರಿಶಿಷ್ಟರ ಮೇಲೆ ದೌರ್ಜನ್ಯಗಳು ನಡೆಯುತ್ತಿವೆ. ಎಲ್ಲ ಪ್ರಕರಣಗಳ ಆರೋಪಿಗಳ ಮೇಲೆ ದೂರು ದಾಖಲಾಗಬೇಕು. ಪ್ರಕರಣದಲ್ಲಿನ ಎಲ್ಲ ಆರೋಪಿತರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಈ ಪ್ರಕರಣಗಳಲ್ಲಿ ಉದ್ದೇಶಪೂರ್ವಕವಾಗಿ ವಿಳಂಬ ನೀತಿ ಅನುಸರಿಸಿದ ಪೊಲೀಸ್‍ ಅಧಿಕಾರಿಗಳು ಅಮಾನತುಗೊಳಿಸಬೇಕು’ ಎಂದು ಒತ್ತಾಯಿಸಿದರು.

ಕಿಲ್ಲಾರಹಟ್ಟಿ ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತೆಯ ಕುಟುಂಬಸ್ಥರಿಗೆ ಶಾಸನ ಬದ್ಧ ಪರಿಹಾರ ನೀಡಬೇಕು. ಕುಟುಂಬ ಸದಸ್ಯರಿಗೆ ಸೂಕ್ತ ರಕ್ಷಣೆ ನೀಡಬೇಕು. ಅಸ್ಪೃಶ್ಯತೆ, ಅಸಮಾನತೆ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನೀಡದಂಥ ಹೀನ ಕೃತ್ಯಗಳು ನಡೆಯುತ್ತಿವೆ. ಅವುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.

ADVERTISEMENT

ಅಸ್ಪೃಶ್ಯತೆ, ಜಾತಿ ತಾರತಮ್ಯದ ಕುರಿತು ಜಿಲ್ಲೆಯಾದ್ಯಂತ ಪೊಲೀಸ್‍ ಮತ್ತು ಸಂಬಂಧಿಸಿದ ಇಲಾಖೆಗಳು ಜಾಗೃತಿ ಅಭಿಯಾನ ನಡೆಸಬೇಕು. ಭೂ ರಹಿತ ಪರಿಶಿಷ್ಟ ಜಾತಿಯವರ ಸಮೀಕ್ಷೆ ನಡೆಸಿ ಭೂಮಿ ಮಂಜೂರು ಮಾಡಿಸಬೇಕು. ಅಸ್ಪೃಶ್ಯತೆ, ಜಾತಿ ತಾರತಮ್ಯದಂಥ ಕೊಳಕು ಮೌಲ್ಯಗಳನ್ನು ಎತ್ತಿ ಹಿಡಿಯುವ ಸಂಘಟನೆಗಳು ಹಾಗೂ ಸಾಹಿತ್ಯವನ್ನು ನಿಷೇಧಿಸಬೇಕು. ಇದೇ ಸ್ಥಿತಿ ಮುಂದುವರಿದರೆ ರಾಜ್ಯವ್ಯಾಪಿ ಹೋರಾಟ ಚುರುಕುಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮುಖಂಡರಾದ ಬಾಲಸ್ವಾಮಿ ಕೊಡ್ಲಿ, ದೊಡ್ಡಪ್ಪ ಮಸ್ಕಿ, ದಾನಪ್ಪ ಮಸ್ಕಿ, ಚಿನ್ನಪ್ಪ ಕೊಟ್ರಿಕಿ, ಎಚ್‍.ಎಂ ಬಡಿಗೇರ, ಅಂಬಣ್ಣ ಅರೋಲಿ, ಹನುಮಂತಪ್ಪ ಕುಣಿಕೆಲ್ಲೂರು, ಹನುಮಂತಪ್ಪ ವೆಂಕಟಾಪುರ, ಮಲ್ಲಯ್ಯ ಬಳ್ಳಾ, ಬಸವರಾಜ ಸಾಸಲಮರಿ, ಅನಿಲಕುಮಾರ, ಕುಪ್ಪಣ್ಣ ಹೊಸಮನಿ, ಪ್ರಭುಲಿಂಗ ಮೇಗಳಮನಿ, ಲಿಂಗಪ್ಪ ಪರಂಗಿ, ಚಿನ್ನಪ್ಪ ಕಂದಳ್ಳಿ, ಮಲ್ಲನಗೌಡ ರಾಂಪುರ, ದುರುಗಪ್ಪ ಅಗ್ರಹಾರ, ನಾಗಪ್ಪ ಈಚನಾಳ, ರಮೇಶ ಗೋಸ್ಲೆ, ಯಂಕಪ್ಪ ಚಿತ್ತಾಪುರ, ಉಮೇಶ ಹುನಕುಂಟಿ, ಯಲ್ಲಾಲಿಂಗ, ತಿಪ್ಪರಾಜ, ಹುಲಗಪ್ಪ ಕೆಸರಹಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.