
ಜಾಲಹಳ್ಳಿ: ‘ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಕಲಿಕೆಗೆ ಮಾತ್ರ ಸೀಮಿತಗೊಳಿಸಿ, ಉಳಿದ ಕೆಲಸ ಕಾರ್ಯಗಳಿಂದ ದೂರ ಉಳಿಸಬೇಕು ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಿಲಿ ಹೇಳಿದರು.
ಸೋಮವಾರ ಸಮೀಪದ ತಿಂಥಣಿ ಬ್ರಿಜ್ ನಲ್ಲಿರುವ ಕನಕ ಗುರು ಪೀಠದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗಮಿಸಿದ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದರು.
‘ರಾಜ್ಯದಲ್ಲಿ ಖಾಲಿ ಇರುವ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗಾಗಿ ಸರ್ಕಾರದ ಮೇಲೆ ಒತ್ತಡ ಹಾಕಲು ಫೆಬ್ರವರಿ 19 ರಂದು ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಹಮ್ಮಿಕೊಳ್ಳಲಾಗಿದೆ. ರಾಜ್ಯದಲ್ಲಿ ಗುಣಮಟ್ಟದ ಶಿಕ್ಷಣಕ್ಕಾಗಿ 51 ಸಾವಿರ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಸರ್ಕಾರ ಬೇಗ ತುಂಬಬೇಕು’ ಎಂದು ಒತ್ತಾಯಿಸಿದರು.
‘ಒಳ ಮೀಸಲಾತಿ ಸಮಸ್ಯೆ ಬಗೆ ಹರಿದಿದೆ. ಈಗ ಸದ್ಯ 13000 ಸಾವಿರ ಶಿಕ್ಷಕರನ್ನು ಭರ್ತಿ ಮಾಡುವಾಗ ಕಲ್ಯಾಣ ಕರ್ನಾಟಕ ಭಾಗಕ್ಕೆ 5,500 ಹುದ್ದೆಗಳನ್ನು ತುಂಬಬೇಕು. ಕಳೆದ ತಿಂಗಳು ಟಿಇಟಿ ಪರೀಕ್ಷೆ ಆಗಿದೆ. 1 ಲಕ್ಷ 50 ಸಾವಿರ ಅಭ್ಯರ್ಥಿಗಳು ಸಿಇಟಿ ಬರೆಯಲು ಅರ್ಹರಾಗಿದ್ದಾರೆ. ಬೇಗ ಸಿಇಟಿ ಪರೀಕ್ಷೆ ಮುಗಿಸಿ ಬರುವ ಜೂನ್ ತಿಂಗಳಲ್ಲಿ ಆದೇಶ ಕೊಡಬೇಕು’ ಎಂದರು.
‘ಶಿಕ್ಷಕರ ಕೆಲಸ ಮೇಲೆ ಒತ್ತಡ ಕಡಿಮೆ ಮಾಡಲು ಬಿಸಿಯೂಟ ಜವಾಬ್ದಾರಿ ಹಾಗೂ ಆನ್‌ಲೈನ್ ಕೆಲಸದಿಂದ ಕೈ ಬಿಡಬೇಕು. ಈ ಕೆಲಸಗಳಿಗಾಗಿ ಕಂಪ್ಯೂಟರ್ ಆಪರೇಟರ್ ಹುದ್ದೆಗಳನ್ನು ತುಂಬಬೇಕು. ಎಲ್ಲಾ ಶಿಕ್ಷಕರಿಗೆ ಬಡ್ತಿ ಕೊಡಬೇಕು’ ಎಂದರು.
ರಾಜ್ಯದ ಉತ್ತಮ ಗುಣಮಟ್ಟದ ಶಿಕ್ಷಣಕ್ಕಾಗಿ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕರ ಸಮಸ್ಯೆಗಳ ನಿವಾರಣೆಗಾಗಿ ಬರುವ ಫೆಬ್ರುವರಿ 19ರಂದು ರಾಜ್ಯ ಮಟ್ಟದ ಶೈಕ್ಷಣಿಕ ಸಮಾವೇಶ ಮಾಡಲಾಗಿದೆ. ಅ ಸಮಾವೇಶ ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಅನೇಕ ಶಿಕ್ಷಣ ತಜ್ಞರು ಭಾಗವಹಿಸುವರು’ ಎಂದು ಹೇಳಿದರು.
ಈ ಸಂದರ್ಭದಲ್ಲಿ ದೇವದುರ್ಗ ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ವಿರುಪನಗೌಡ, ರಾಮಣ್ಣ ಸುಬೇದಾರ, ಪ್ರಕಾಶ ಹೊನ್ನಟಗಿ, ಗಂಗಾರೆಡ್ಡಿ ಪಾಟೀಲ, ಅಮತ್ಯಾಪ್ಪ, ರೇವಣ ಸಿದ್ದಪ್ಪ ಪೂಜಾರಿ, ಸಿದ್ದನಗೌಡ, ದೇವರಾಜ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.