ADVERTISEMENT

‘ಕುರುಬರ ಹೋರಾಟಕ್ಕೆ ಆರ್‌ಎಸ್‌ಎಸ್‌ ಬೆಂಬಲವಿಲ್ಲ’

ಹಾಲುಮತ ಸಂಸ್ಕೃತಿ ವೈಭವ–2021 ಮುಕ್ತಾಯ ಇಂದು

​ಪ್ರಜಾವಾಣಿ ವಾರ್ತೆ
Published 13 ಜನವರಿ 2021, 14:18 IST
Last Updated 13 ಜನವರಿ 2021, 14:18 IST
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಜ್‌ ನ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಎರಡನೇ ದಿನವಾದ ಬುಧವಾರ ನಡೆದ ಟಗರ ಜೋಗಿಗಳ–ಹೆಳವರು–ಕಾಡುಸಿದ್ದಸಮಾವೇಶವನ್ನು ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಉದ್ಘಾಟಿಸಿದರು
ಜಾಲಹಳ್ಳಿ ಸಮೀಪದ ತಿಂಥಣಿ ಬ್ರಿಜ್‌ ನ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಎರಡನೇ ದಿನವಾದ ಬುಧವಾರ ನಡೆದ ಟಗರ ಜೋಗಿಗಳ–ಹೆಳವರು–ಕಾಡುಸಿದ್ದಸಮಾವೇಶವನ್ನು ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ ಉದ್ಘಾಟಿಸಿದರು   

ಜಾಲಹಳ್ಳಿ: ‘ಕಳೆದ 20 ವರ್ಷಗಳಿಂದ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಹೋರಾಟ ಮಾಡಿಕೊಂಡು ಬಂದಿದ್ದೇವೆ. ಈ ಹೋರಾಟಕ್ಕೆ ಯಾವುದೇ ಆರ್.ಎಸ್‌.ಎಸ್‌ ಸಂಘಟನೆಯ ಬೆಂಬಲವಿಲ್ಲ. ಕೆಲವರು ತಪ್ಪು ಆರೋಪ ಮಾಡುತ್ತಿದ್ದಾರೆ’ ಎಂದು ಕುರುಬರ ಎಸ್‌ಟಿ ಮೀಸಲಾತಿ ಹೋರಾಟ ಸಮಿತಿ ಅಧ್ಯಕ್ಷ ಕೆ.ವಿರೂಪಾಕ್ಷಪ್ಪ ಹೇಳಿದರು.

ಸಮೀಪದ ತಿಂಥಣಿ ಬ್ರಿಜ್‌ ನ ಕಲಬುರ್ಗಿ ವಿಭಾಗದ ಕನಕಗುರು ಪೀಠದಲ್ಲಿ ಹಮ್ಮಿಕೊಂಡಿರುವ ಹಾಲುಮತ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದ ಎರಡನೇ ದಿನವಾದ ಬುಧವಾರ ನಡೆದ ಟಗರ ಜೋಗಿಗಳ–ಹೆಳವರು–ಕಾಡುಸಿದ್ದಸಮಾವೇಶದಲ್ಲಿ ಮಾತನಾಡಿದರು.

‘ಹೋರಾಟದ ನೇತೃತ್ವ ವಹಿಸಿಕೊಂಡವರು ನಾವು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದೇವೆ. ಬೆಳಗಾವಿಯಲ್ಲಿ ಈ ಹಿಂದೆ ಅಧಿವೇಶನ ನಡೆಯುತ್ತಿರುವ ಸಂದರ್ಭದಲ್ಲಿ ಕುರಿಗಳ ಸಮೇತ ಹೋರಾಟ ಮಾಡಿದ್ದಕ್ಕಾಗಿ ಪ್ರತಿಭಟನಾಕಾರರನ್ನು ಜೈಲಿಗೆ ಕಳುಹಿಸಿದವರು ಯಾರು ಎಂದು ತಿಳಿದುಕೊಳ್ಳಬೇಕಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುರಬರ ಸ್ಥಿತಿ ತುಂಬಾ ಕೆಟ್ಟದಾಗಿದೆ. ವಿನಾಕಾರಣ ಕುರುಬರನ್ನು ಜಾತಿ ನಿಂದನೆಯ ಪ್ರಕರಣದಲ್ಲಿ ಸಿಲುಕಿಸುತ್ತಿದ್ದು, ಅವರು ಊರು ತೊರೆದು ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ’ ಎಂದರು.

ADVERTISEMENT

‘ಕುರುಬರನ್ನು ಎಸ್‌.ಟಿ ಮೀಸಲಾತಿಗೆ ಸೇರಿಸುವುದು ಅವಶ್ಯವಾಗಿದೆ. ನಮ್ಮ ಹಾಗೂ ಸಿದ್ದರಾಮಯ್ಯ ನವರ ನಡುವೆ ಯಾವುದೇ ಬಿನ್ನಾಭಿಪ್ರಾಯವಿಲ್ಲ. ಜನವರಿ 14ರಿಂದ ಪ್ರರಂಭವಾಗುವ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಮನವಿ ಮಾಡಿದರು.

ಸಮಾವೇಶ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಸವರಾಜ ಬೈರತಿ, ‘ಮುಂದಿನ ದಿನಗಳಲ್ಲಿ ಮುಖ್ಯ ಮಂತ್ರಿಗಳ ಗಮನಕ್ಕೆ ತಂದು ಪೀಠದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಕಲ್ಪಿಸಲು ಶಕ್ತಿ ಮೀರಿ ಪ್ರಯತ್ನ ಮಾಡುತ್ತೇನೆ’ ಎಂದು ತಿಳಿಸಿದರು.

ಸಮಾಜದ ಮುಖಂಡ ಎಚ್‌.ಎಂ ರೇವಣ್ಣ ಮಾತನಾಡಿ, ‘ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕುರುಬದ ಮಧ್ಯೆ ವೈಮನಸ್ಸು ಮೂಡದೇ ತಮ್ಮ ನಾಲ್ಕೂ ಪೀಠಗಳ ಶ್ರೀಗಳ ನೇತೃತ್ವದಲ್ಲಿ ಸಮುದಾಯಕ್ಕೆ ಪಡೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಎಲ್ಲಾರೂ ಕೆಲಸ ಮಾಡಬೇಕಾಗಿದೆ. ಕನಕಗುರು ಪೀಠ ಜಾಗದ ಬಗ್ಗೆ ಆರಣ್ಯ ಇಲಾಖೆಯಲ್ಲಿ ಸಮಸ್ಯೆಯಾಗಿದೆ. ಅದನ್ನು ಸರಿಪಡಿಸಬೇಕು ಹಾಗೂ ಮಠದ ಮೆಟ್ಟಿಲು ನಿರ್ಮಾಣ ಮಾಡಬೇಕು’ ಎಂದು ಶಾಸಕ ಶಿವನಗೌಡ ಅವರಿಗೆ ಮನವಿ ಮಾಡಿದರು.

ಶಾಸಕ ಕೆ.ಶಿವನಗೌಡ ನಾಯಕ ಮಾತನಾಡಿ, ‘ರಾಜ್ಯದಲ್ಲಿ ಸಾಮಾಜಿಕ ನ್ಯಾಯದ ಪರವಾಗಿರುವ ಒಬ್ಬ ವ್ಯಕ್ತಿ ಏನಾದರೂ ಇದ್ದರೆ, ಅದೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ನಾವು ಯಾವುದೇ ಪಕ್ಷದಲ್ಲಿ ಇದ್ದರೂ ಅವರನ್ನು ನಾವು ಗೌರವಿಸುತ್ತೇವೆ. ರಾಜ್ಯದಲ್ಲಿ ಸಣ್ಣ,ಪುಟ್ಟ ಸಮೂದಾಯಗಳಿಗೆ ಸರಿ ಸಮಾನವಾದ ಸ್ಥಾನಮಾನಗಳನ್ನು ನೀಡಿ ಅವರನ್ನು ಜೊತೆಗೆ ಕರೆದುಕೊಂಡು ಹೋಗುತ್ತಾರೆ. ತಾಲ್ಲೂಕಿನಲ್ಲಿ ಯಾವುದೇ ತಂಟೆ ಇಲ್ಲದೇ ಅಣ್ಣ ತಮ್ಮಂದಿರಾಗಿ ಎಲ್ಲಾ ಸಮೂದಾಯದರು ಬಾಳಬೇಕಾಗಿದೆ’ ಎಂದು ಹೇಳಿದರು.

ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿದರು. ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ, ಕೆಲ್ಲೋಂಡು ಕನಕಗುರು ಪೀಠದ ಈಶ್ವರನಂದಪುರಿ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ರಾಯಚೂರು ಹೆಚ್ಚುವರಿ ಜಿಲ್ಲಾಧಿಕಾರಿ ದುರುಗೇಶ, ಯಾದಗಿರಿ ಜಿಲ್ಲೆಯ ಸಮಾಜ ಕಲ್ಯಾಣಾಧಿಕಾರಿ ಚನ್ನಬಸಪ್ಪ, ಹೆಳವ ಸಮಾಜದ ರಾಜ್ಯಧ್ಯಕ್ಷ ನಾಗರಾಜ, ಸುಡಗಾಡು ಸಿದ್ದ ರಾಜ್ಯಧ್ಯಕ್ಷ ಲೋಹಿತ್‌, ಅಲೆಮಾರಿ ಮತ್ತು ಬುಡಕಟ್ಟುಗಳ ಒಕ್ಕೂಟದ ರಾಜ್ಯದ್ಯಕ್ಷ ಡಾ. ಮಲ್ಲಿಕಾರ್ಜುನ್‌ ಮಾನ್ಪಡೆ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶೇಖರ ದಮ್ಮೂರು, ಮುಖಂಡರಾದ ಶಾಂತಪ್ಪ, ಮಲ್ಲಣ್ಣ ಪೂಜಾರಿ, ಅಮೃತ್‌ರಾವ್‌ ಚಿಮ್ಕೋಡೆ, ಶರಣಯ್ಯ ಒಡೆಯರ್‌ ಸೇರಿದಂತೆ ಆನೇಕರು ಇದ್ದರು. ಶಿಕ್ಷಕ ಮಹಾತೇಂಶ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.