ADVERTISEMENT

ರಾಯಚೂರು | ಜಿಲ್ಲೆಯಾದ್ಯಂತ ಸಂಕ್ರಾಂತಿ ಸಂಭ್ರಮ

ಮಹಿಳೆಯರಿಂದ ರಂಗೋಲಿ ಸಂಭ್ರಮ, ಯುವಕರಿಂದ ಗಾಳಿಪಟ ಉತ್ಸವ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 7:17 IST
Last Updated 15 ಜನವರಿ 2026, 7:17 IST
ರಾಯಚೂರಿನ ಮಡಿವಾಳನಗರದ ಮನೆಯ ಮುಂದೆ ವಿಜ್ಞೇಶ್ವರಿ ಮಲ್ಲಿಕಾರ್ಜುನ ಬಿಡಿಸಿದ ಆಕರ್ಷಕ ರಂಗೋಲಿ
ರಾಯಚೂರಿನ ಮಡಿವಾಳನಗರದ ಮನೆಯ ಮುಂದೆ ವಿಜ್ಞೇಶ್ವರಿ ಮಲ್ಲಿಕಾರ್ಜುನ ಬಿಡಿಸಿದ ಆಕರ್ಷಕ ರಂಗೋಲಿ   

ರಾಯಚೂರು: ಜಿಲ್ಲೆಯಾದ್ಯಂತ ಬುಧವಾರ ಮಕರ ಸಂಕ್ರಾಂತಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಮಹಿಳೆಯರು ಬೆಳಗಿನ ಜಾವ ಮನೆಯಂಗಳ ಸ್ವಚ್ಛಗೊಳಿಸಿ ಸಗಣಿಯಿಂದ ಸಾರಿಸಿ ಅಂದವಾದ ರಂಗೋಲಿಯ ಚಿತ್ತಾರ ಮೂಡಿಸಿದರು. ಕೆಲವರು ಚುಕ್ಕಿ ರಂಗೋಲಿ ಇಟ್ಟರೆ, ಕೆಲವರು ಬಣ್ಣದ ರಂಗೋಲಿ ಪುಡಿ ಬಳಿಸಿ ಕಬ್ಬು ಬೆಲ್ಲ, ಎತ್ತುಗಳು ಹಾಗೂ ರೈತನ ಚಿತ್ರ ಬಿಡಿಸಿ ನೋಡುಗರ ಗಮನ ಸೆಳೆಯುವಂತೆ ಮಾಡಿದರು.

ಅನೇಕ ಜನರು ಮಂತ್ರಾಲಯ, ನಾರದಗಡ್ಡೆ, ದತ್ತಪೀಠ, ತಿಂಥಣಿ, ಚಿಕ್ಕಲಪರವಿ, ದಡೇಸಗೂರಲ್ಲಿ ನದಿಗಳಲ್ಲಿ ಪುಣ್ಯ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳ ಮೈತೊಳೆದು ಅಲಂಕಾರ ಮಾಡಿ ಮೆರವಣಿಗೆ ಮಾಡಲಾಯಿತು. ಮಹಿಳೆಯರು ವಿಶೇಷ ಖಾದ್ಯ ಸಿದ್ಧಪಡಿಸಿ ದೇವಸ್ಥಾನಗಳಿಗೆ ತೆರಳಿ ದೇವರಿಗೆ ನೈವೇದ್ಯ ಸಮರ್ಪಿಸಿದರು. ರೈತರು ಹಾಗೂ ಕೃಷಿ ಹಿನ್ನೆಲೆ ಯುಳ್ಳವರು ಕುಟುಂಬದ ಸದಸ್ಯರೊಂದಿಗೆ ತೋಟಗಳಿಗೆ ತೆರಳಿ ಸಾಮೂಹಿಕವಾಗಿ ಭೋಜನ ಮಾಡಿದರು. ನಗರದ ಪ್ರದೇಶದ ಜನ ಸಹ ಉದ್ಯಾನ ಹಾಗೂ ಪ್ರವಾಸಿ ತಾಣಗಳಿಗೆ ತೆರಳಿ ಸಾಮೂಹಿಕ ಭೋಜನ ಮಾಡಿ ಸಂಭ್ರಮಿಸಿದರು.

ಕಡ್ಲೆಬೇಳೆ ಮತ್ತು ಬೆಲ್ಲದ ಹೂರಣವನ್ನು ತುಂಬಿಸಿ ತಯಾರಿಸಿದ ಹೋಳಿಗೆ, ಶೇಂಗಾ ಹೋಳಿಗೆ, ಪಾಯಸ, ಸಾವಿಗೆ, ತಾಜಾ ಕಾಳುಗಳನ್ನು ಬಳಸಿ ತಯಾರಿಸಿದ ವಿಶೇಷ ಸಾರು, ಪಲ್ಯ ಸೇವಿಸಿದರು

ಸಂಜೆ ವೇಳೆ ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ತೆರಳಿ ಎಳ್ಳುಬೆಲ್ಲ ವಿತರಿಸಿ ಹಬ್ಬದ ಶುಭಾಶಯ ಕೋರಿದರು. ಯುವಕರು ಹಾಗೂ ಬಾಲಕರು ಮೈದಾನಗಳಲ್ಲಿ ಗಾಳಿಪಟ ಹಾರಿಸಿ ಸಂಭ್ರಮಿಸಿದರು.

ರಾಯಚೂರಿನಲ್ಲಿ ಮಹಿಳೆಯೊಬ್ಬರು ಮನೆ ಮುಂದೆ ರಂಗೋಲಿ ಬಿಡಿಸಿದರು
ರಾಯಚೂರಿನಲ್ಲಿ ಮಕರ ಸಂಕ್ರಮಣದ ದಿನ ಕಂಡು ಬಂದ ಆಕರ್ಷಕ ರಂಗೋಲಿ
ಮಕರ ಸಂಕ್ರಮಣದ ದಿನ ರಾಯಚೂರಿನಲ್ಲಿ ಸಾಗಿದ ಕೋಲೆ ಬಸವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.