ರಾಯಚೂರು: ‘ಕರ್ನಾಟಕದಲ್ಲಿ ಜಾರಿಗೊಳಿಸಲಾದ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿದವರು ಈಗ ಬಿಹಾರದಲ್ಲಿ ಗ್ಯಾರಂಟಿ ಘೋಷಣೆ ಮಾಡಿದ್ದಾರೆ’ ಎಂದು ರಾಜ್ಯ ಕಾರ್ಮಿಕ ಸಚಿವ ಸಂತೋಷ ಲಾಡ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಬುಧವಾರ ನಡೆದ ಜಿಲ್ಲೆಯ ವಿವಿಧ ವರ್ಗದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ವಿವಿಧ ಯೋಜನೆಗಳ ಕುರಿತ ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಗ್ಯಾರಂಟಿ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದ್ದು, ಬೇರೆ ರಾಜ್ಯಗಳು ಅನುಕರಿಸುತ್ತಿವೆ’ ಎಂದು ತಿಳಿಸಿದರು.
ಇ- ಕಾಮರ್ಸ್ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗಿಗ್ ಕಾರ್ಮಿಕರಿಗೆ ವಿಮಾ ಯೋಜನೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಉದ್ಯೋಗ ಕೊಡುವ ಖಾಸಗಿ ಉದ್ಯೋಗದಾತರಿಗೆ ಮರುಪಾವತಿಯ ಆಶಾದೀಪ ಹಾಗೂ ಕರ್ನಾಟಕ ಸಿನೆಮಾ ಮತ್ತು ಸಾಂಸ್ಮೃತಿಕ ಚಟುವಟಿಕೆಯಲ್ಲಿ ತೊಡಗಿದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ಹೊಸದಾಗಿ ಸಿನಿಮಾ ಕಾರ್ಮಿಕರ ಸುಂಕ ಅಧಿನಿಯಮ ಜಾರಿಯಂತಹ ವಿನೂತನ ಯೋಜನೆಗಳನ್ನು ರಾಜ್ಯ ಕಾರ್ಮಿಕ ಇಲಾಖೆಯು ರೂಪಿಸಿ ಇಡೀ ದೇಶವೇ ಕರ್ನಾಟಕ ರಾಜ್ಯದತ್ತ ನೋಡುವಂತಾಗಿದೆ ಎಂದರು.
‘ರಾಜ್ಯದಲ್ಲಿ 6047 ದಿನಪತ್ರಿಕೆ ವಿತರಣಾ ಕಾರ್ಮಿಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಿಗೆ ₹2 ಲಕ್ಷ ಅಪಘಾತ ಪರಿಹಾರ ಮತ್ತು ₹1 ಲಕ್ಷ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ’ ಎಂದು ಸಚಿವರು ತಿಳಿಸಿದರು.
ಜಾಗೃತಿ ಕಾರ್ಯಕ್ರಮಕ್ಕೆ ಸೂಚನೆ: ‘ಸಮೀಕ್ಷೆಯೊಂದರ ಪ್ರಕಾರ ಪ್ರತಿ 1 ಗಂಟೆಗೆ ಆರು ಜನರು ರಸ್ತೆ ಅಪಘಾತದಲ್ಲಿ ಸಾವಿಗೀಡಾಗುತ್ತಿದ್ದಾರೆ. ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳು ಕಾಳಜಿ ವಹಿಸಿ ಪ್ರತಿ ತಿಂಗಳು ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಕಾರ್ಯಕ್ರಮಗಳನ್ನು ರೂಪಿಸಬೇಕು’ ಎಂದು ಸಚಿವರು ಸೂಚನೆ ನೀಡಿದರು.
ಶಾಸಕ ಹಂಪಯ್ಯ ನಾಯಕ ಮಾತನಾಡಿದರು. ರಾಯಚೂರು ಮಹಾನಗರ ಪಾಲಿಕೆಯ ಮೇಯರ್ ನರಸಮ್ಮ ನರಸಿಂಹಲು ಮಾಡಗಿರಿ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜಶೇಖರ ರಾಮಸ್ವಾಮಿ, ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಪಾಮಯ್ಯ ಮುರಾರಿ, ಕಾರ್ಮಿಕ ಹಾಗೂ ರಾಜ್ಯ ವಿಮಾ ಯೋಜನಾ ವೈದ್ಯಕೀಯ ಸೇವೆಗಳು ಆಯುಕ್ತ ಡಾ.ಎಚ್.ಎನ್. ಗೋಪಾಲಕೃಷ್ಣ, ಜಂಟಿ ಕಾರ್ಮಿಕ ಆಯುಕ್ತ ಎಸ್ ಪಿ ರವಿಕುಮಾರ, ಜಿಲ್ಲಾಧಿಕಾರಿ ನಿತೀಶ್ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಈಶ್ವರಕುಮಾರ ಕಾಂದೂ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಎಂ., ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ, ಜಿಲ್ಲಾ ಕಾರ್ಮಿಕ ಅಧಿಕಾರಿ ಆರತಿ ಪೂಜಾರ, ಜಿಲ್ಲಾ ಕಾರ್ಮಿಕ ಇಲಾಖೆಯ ನಿರೀಕ್ಷಕ ಪ್ರಿಯಾಂಕ ಭಾಸತ್ಕರ್ ಉಪಸ್ಥಿತರಿದ್ದರು. ದಂಡಪ್ಪ ಬಿರಾದಾರ ನಿರೂಪಿಸಿದರು.
ಸಣ್ಣ ಸಣ್ಣ ಕಸುಬು ಮಾಡುವ 101 ವರ್ಗದ ಕಾರ್ಮಿಕರು ದೇಶದ ದುಡಿಯುವ ವರ್ಗದಲ್ಲಿ ಶೇ.83ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಸಂತೋಷ ಲಾಡ್, ರಾಜ್ಯ ಕಾರ್ಮಿಕ ಸಚಿವ
ಇಎಸ್ಐ ಆಸ್ಪತ್ರೆಗೆ ಒತ್ತಾಯ
‘ರಾಯಚೂರು ಜಿಲ್ಲೆಯಲ್ಲಿ ಅಂದಾಜು 400 ಫ್ಯಾಕ್ಟರಿಗಳಿವೆ. ಇಲ್ಲಿ ಕೆಲಸ ಮಾಡುವ ಸಾವಿರಾರು ಸಂಖ್ಯೆಯ ಕಾರ್ಮಿಕರಿಗೆ ಇಎಸ್ಐ ಸೌಕರ್ಯ ಸಿಗುವ ನಿಟ್ಟಿನಲ್ಲಿ ರಾಯಚೂರ ಜಿಲ್ಲೆಗೆ ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆಯನ್ನು ಮಂಜೂರು ಮಾಡಲು ಕಾರ್ಮಿಕ ಸಚಿವರು ಆದೇಶ ಮಾಡಬೇಕು’ ಎಂದು ಕರ್ನಾಟಕ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಒತ್ತಾಯಿಸಿದರು. ‘ಜಿಲ್ಲೆಯಲ್ಲಿ ಇಎಸ್ಐ ಆಸ್ಪತ್ರೆಯ ಮುಖ್ಯ ಶಾಖೆ ಸ್ಥಾಪನೆಗೆ ಪ್ರಯತ್ನಿಸಲಾಗುವುದು’ ಎಂದು ಸಚಿವರು ಭರವಸೆ ನೀಡಿದರು.
‘ಜಿಲ್ಲೆಯಲ್ಲಿ 58240 ಕಾರ್ಮಿಕರ ನೋಂದಣಿ’
‘ಅಂಬೇಡ್ಕರ್ ಕಾರ್ಮಿಕ ಸಹಾಯ ಹಸ್ತ ಯೋಜನೆಯಡಿ 101 ಅಸಂಘಟಿತ ವರ್ಗಗಳ ಸುಮಾರು 30 ರಿಂದ 40 ಲಕ್ಷ ಕಾರ್ಮಿಕರಿಗೆ ಉಚಿತವಾಗಿ ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗಿದೆ. ಈವರೆಗೆ ರಾಜ್ಯದಲ್ಲಿ 2545607 ಕಾರ್ಮಿಕರು ನೋಂದಣಿಯಾಗಿದ್ದು ರಾಯಚೂರು ಜಿಲ್ಲೆಯಲ್ಲಿ 58240 ಕಾರ್ಮಿಕರನ್ನು ನೋಂದಾಯಿಸಿ ಸ್ಮಾರ್ಟ್ ಕಾರ್ಡ್ ವಿತರಿಸಲಾಗುತ್ತಿದೆ’ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.