ADVERTISEMENT

ಮಂತ್ರಾಲಯದಲ್ಲಿ ಸಪ್ತ ರಾತ್ರೋತ್ಸವ ಆರಂಭ: ರಾಯರ ಆರಾಧನೆಗೆ ವಿಧ್ಯುಕ್ತ ಚಾಲನೆ

ಬೃಂದಾವನಕ್ಕೆ ವಿಶೇಷ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮದ ಸೊಬಗು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2024, 16:03 IST
Last Updated 18 ಆಗಸ್ಟ್ 2024, 16:03 IST
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದೆ
ಮಂತ್ರಾಲಯದ ರಾಘವೇಂದ್ರ ಸ್ವಾಮಿಗಳ ಮಠ ವಿದ್ಯುತ್‌ ದೀಪಗಳಿಂದ ಝಗಮಗಿಸುತ್ತಿದೆ   

ರಾಯಚೂರು: ರಾಘವೇಂದ್ರ ತೀರ್ಥರ 353ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಆಯೋಜಿಸಿರುವ ಸಪ್ತ ರಾತ್ರೋತ್ಸವಕ್ಕೆ ಭಾನುವಾರ ಬೆಳಿಗ್ಗೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಪೀಠಾಧಿಪತಿ ಸುಬುಧೇಂದ್ರ ತೀರ್ಥರು ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಗೋ ಪೂಜೆ, ಅಶ್ವಪೂಜೆ, ಧಾನ್ಯ ಪೂಜೆ ನೆರವೇರಿಸಿದರು. ನಂತರ ಆರಾಧನಾ ಮಹೋತ್ಸವಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಠದ ಆವರಣದಲ್ಲಿರುವ ಸೇವಾ ಕೇಂದ್ರಗಳ ಕಚೇರಿಗಳ ಪೂಜೆ ನಡೆಯಿತು. ಶ್ರೀಮಠದ ಸಿಬ್ಬಂದಿ ಹಾಗೂ ಸಂಸ್ಕೃತ ಪಾಠ ಶಾಲೆಯ ವಿದ್ಯಾರ್ಥಿಗಳಿಗೆ ವಸ್ತ್ರಗಳನ್ನು ವಿತರಿಸಲಾಯಿತು. ಮಠದ ವ್ಯವಸ್ಥಾಪಕ ಎಸ್.ಕೆ.ಶ್ರೀನಿವಾಸರಾವ್, ಸಹಾಯಕ ವ್ಯವಸ್ಥಾಪಕ ಐ.ಪಿ.ನರಸಿಂಹಾ
ಚಾರ್, ಆಡಳಿತಾಧಿಕಾರಿ ಮಾಧವಶೆಟ್ಟಿ ಸೇರಿದಂತೆ ಪ್ರಮುಖರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಬೆಳಿಗ್ಗೆ 8 ಗಂಟೆಗೆ ಪ್ರಾರ್ಥನೋತ್ಸವ, ಪ್ರಭಾ ಉತ್ಸವ ಹಾಗೂ ಧ್ಯಾನೋತ್ಸವ ನಡೆಯಿತು. 10 ಗಂಟೆಗೆ ಗಂಗಾವತಿಯ ವಿದ್ವಾನ್ ಗೊರೆಬಾಳ ವಾಗೀಶಾಚಾರ ಪ್ರವಚನ ನೀಡಿದರು.

ಸಾಂಸ್ಕೃತಿಕ ಕಾರ್ಯಕ್ರಮ: ಸಂಜೆ ಬೆಂಗಳೂರಿನ ವಿದುಷಿ ರೂಪಶ್ರೀ ಪ್ರಭಂಜನ ಅವರು ದಾಸವಾಣಿ ಪ್ರಸ್ತುತ ಪಡಿಸಿದರು. ವಿದುಷಿ ದೇವಥಾ ಸಹೋದರಿಯರು ಭರತನಾಟ್ಯ ಪ್ರದರ್ಶಿಸಿದರು.

ಬೃಂದಾವನಕ್ಕೆ ವಿಶೇಷ ಪೂಜೆ: ಒಂದು ವಾರ ನಿತ್ಯ ರಾಯರ ಮೂಲ ಬೃಂದಾವನಕ್ಕೆ ವಿಶೇಷ ಪೂಜೆ, ಮೂಲ ರಾಮದೇವರ ಪೂಜೆ, ರಾತ್ರಿ ಪ್ರಾಕಾರದಲ್ಲಿ ಶ್ರೀಪ್ರಹ್ಲಾದರಾಜರಿಗೆ ಪ್ರಭಾ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಪುಷ್ಪಗಳಿಂದ ಬೃಂದಾವನಕ್ಕೆ ಅಲಂಕಾರ ಮಾಡಲಾಗಿದೆ. ಭಕ್ತರು ಭಾರಿ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಿದ್ದಾರೆ. ತುಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ರಾಯರ ದರ್ಶನ ಪಡೆಯುತ್ತಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ. ಅನ್ನಪೂರ್ಣ ಭೋಜನ ಶಾಲೆಯಲ್ಲಿ ಉಪಾಹಾರ ಹಾಗೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿದೆ. ಮಠದ ಸ್ವಯಂ ಸೇವಕರು ಭಕ್ತರಿಗೆ ಎಲ್ಲ ರೀತಿಯ ನೆರವು ಕಲ್ಪಿಸುತ್ತಿದ್ದಾರೆ.

ಆರಾಧನಾ ಮಹೋತ್ಸವ ಅಂಗವಾಗಿ ಮಠದ ಆವರಣದಲ್ಲಿ ಬೃಹತ್‌ ರಂಗೋಲಿ ಬಿಡಿಸಲಾಗಿದೆ. ರಥ ಬೀದಿಯನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಮಂತ್ರಾಲಯ ಮಠ ಬಣ್ಣದ ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದೆ. ಎಲ್ಲೆಡೆ ಭಕ್ತಿಯ ವಾತಾವರಣ ಸೃಷ್ಟಿಯಾಗಿದೆ.

ಮಠದ ಪರಿಸರದಲ್ಲಿ ವ್ಯಾಪಾರ ವಹಿವಾಟು ಜೋರಾಗಿ ನಡೆದಿದೆ. ಭಕ್ತರು ಹೂಮಾಲೆ, ಶಲ್ಯ, ‍ಪಂಚೆ ಹಾಗೂ ಪೂಜಾ ಸಾಮಗ್ರಿಗಳನ್ನು ಖರೀದಿಸಿ ರಾಯರ ಸನ್ನಿಧಿಗೆ ಸಮರ್ಪಿಸುತ್ತಿದ್ದಾರೆ. ಅಕ್ಕಿ, ಬೇಳೆ ಹಾಗೂ ಬೆಲ್ಲದ ದಾನ ಸ್ವೀಕರಿಸಲು ಅಲ್ಲಲ್ಲಿ ಕಪಾಟು ನಿರ್ಮಿಸಲಾಗಿದೆ.

ರಾಘವೇಂದ್ರ ಸ್ವಾಮಿಗಳ ಆರಾಧನೆಯ ಸಪ್ತ ರಾತ್ರೋತ್ಸವ ಕಾರ್ಯಕ್ರಮಕ್ಕೆ ಅನೇಕ ಗಣ್ಯರು, ಅತಿಥಿಗಳು ಹಾಗೂ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ. ರಾಯರ ದರ್ಶನ, ವಸತಿ, ತೀರ್ಥಪ್ರಸಾದ ಹಾಗೂ ಚಿಕಿತ್ಸಾ ವ್ಯವಸ್ಥೆ ಮಾಡಲಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮ: ಆ.19 ರಂದು ಶಾಖೋತ್ಸವ, ಮೈಸೂರಿನ ನಾದಲಹರಿ ಸಂಗೀತ ವಿದ್ಯಾ ವೃಂದದವರು ವಾದ್ಯ ಸಂಗೀತ, ಬೆಂಗಳೂರಿನ ಪುತ್ತೂರು ನರಸಿಂಹ ನಾಯ್ಕ ಅವರು ದಾಸವಾಣಿ ಪ್ರಸ್ತುತ ಪಡಿಸಲಿದ್ದಾರೆ. ಪುತ್ತೂರು ನೃತ್ಯೋಪಾಸನ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶಿಸಲಿದ್ದಾರೆ.

ಶ್ರೀ ರಾಘವೇಂದ್ರ ತೀರ್ಥರ 353 ನೇ ಆರಾಧನಾ ಮಹೋತ್ಸವ ಪ್ರಯುಕ್ತ ಮಂತ್ರಾಲಯದಲ್ಲಿ ಭಾನುವಾರ ತಿರುಪತಿ ತಿರುಮಲ ದೇವಸ್ಥಾನದ ಇಒ ಜೆ.ಶ್ಯಾಮಲಾ ರಾವ್ ಅವರು ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆದರು. ಸುಬುಧೇಂದ್ರ ತೀರ್ಥರು ಉಪಸ್ಥಿತರಿದ್ದರು
ಮಂತ್ರಾಲಯದಲ್ಲಿ ಸಪ್ತ ರಾತ್ರೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಭಕ್ತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.