ಸಿಂಧನೂರು: ತುಂಗಭದ್ರಾ ಜಲಾಶಯದ ನೀರನ್ನು ಜಲಾಶಯದ ಸುತ್ತಮುತ್ತಲಿನ ಕಾರ್ಖಾನೆಗಳು ಕಳವು ಮಾಡುತ್ತಿವೆ. ಪಕ್ಷಭೇದ ಮರೆತು ಎಲ್ಲ ರಾಜಕೀಯ ಮುಖಂಡರು ಒಗ್ಗಟ್ಟಿನಿಂತ ಜಲಾಶಯ ರಕ್ಷಿಸಲು ಮುಂದಾಬೇಕು ಎಂದು ಸಿಪಿಐಎಂಎಲ್ ಮಾಸ್‍ಲೈನ್ ಆಗ್ರಹಿಸಿದೆ.
ಶನಿವಾರ ಹೇಳಿಕೆ ನೀಡಿರುವ ಪಕ್ಷದ ರಾಜ್ಯ ಘಟಕದ ಕಾರ್ಯದರ್ಶಿ ಡಿ.ಎಚ್.ಪೂಜಾರ, ಜಿಲ್ಲಾ ಘಟಕದ ಕಾರ್ಯದರ್ಶಿ ಬಿ.ಎನ್.ಯರದಿಹಾಳ, ಮುಖಂಡರಾದ ಅಶೋಕ ನಿಲೋಗಲ್, ಚಿಟ್ಟಿಬಾಬು, ರಮೇಶ ಪಾಟೀಲ ಅವರು ‘ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದ ಮೂರು ಕೋಟೆ ಜನರ ಜೀವನಾಡಿಯಾಗಿರುವ ತುಂಗಭದ್ರಾ ನದಿಯ ಶೇ.25 ರಷ್ಟು ನೀರನ್ನು ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರದ ಬೃಹತ್ ಕಾರ್ಖಾನೆಗಳೇ ಬಳಸಿಕೊಳ್ಳುತ್ತಿವೆ. ಮೂರು ಜಿಲ್ಲೆಗಳಲ್ಲಿ ಕೇವಲ 30 ಸಾವಿರ ಉದ್ಯೋಗ ಸೃಷ್ಟಿಸಿ ₹3 ಕೋಟಿ ಜನರ ಬದುಕನ್ನು ಕಂಪನಿಗಳು ಬೀದಿಗೆ ತಳ್ಳಿವೆ’ ಎಂದು ಅವರು ಆರೋಪಿಸಿದ್ದಾರೆ.
ರೈತರ ಎರಡು ಬೆಳೆಗೆ ನೀರಿನ ಸೌಕರ್ಯ ಮತ್ತು ಈ ಭಾಗದ ಜನರಿಗೆ ಲಭಿಸುವ ಕುಡಿಯುವ ನೀರಿನ ಹಕ್ಕನ್ನು ಕಸಿದುಕೊಳ್ಳುವ ಬಲ್ಡೋಟಾ ಬಿಎಸ್‍ಪಿಎಲ್ ಕಂಪನಿಯ ವಿಸ್ತರಣೆಯ ವಿರುದ್ಧ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ವಿವಿಧ ಪಕ್ಷಗಳ ಮುಖಂಡರು ಧ್ವನಿ ಎತ್ತಬೇಕು ಎಂದು ಸಿಪಿಐಎಂಎಲ್ ಮಾಸ್‍ಲೈನ್ ಮುಖಂಡರು ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.