ಸಿಂಧನೂರು: ಖಾಸಗಿ ಶಾಲೆಯ ಬಸ್ ಶಾಲಾ ಮಕ್ಕಳ ಮೇಲೆ ಹರಿದ ಪರಿಣಾಮ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಿಗ್ಗೆ 8 ಗಂಟೆಗೆ ತಾಲ್ಲೂಕಿನ ಸಾಲಗುಂದ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಹಂಚಿನಾಳ ಕ್ಯಾಂಪ್‍ನಲ್ಲಿರುವ ಶ್ರೀಧರ ಪಬ್ಲಿಕ್ ಶಾಲೆಗೆ ಸೇರಿದ ವಾಹನವು, ತಮ್ಮ ಶಾಲೆಗೆ ಮಕ್ಕಳನ್ನು ಕರೆದುಕೊಂಡು ಬರಲು ಸಾಲಗುಂದ ಗ್ರಾಮಕ್ಕೆ ತೆರಳುತ್ತಿತ್ತು. ಮನೆ ಪಾಠಕ್ಕೆ ಮುಗಿಸಿ ಮರಳಿ ಮನೆಗೆ ಬರುವಾಗ ಸರ್ಕಾರಿ ಶಾಲಾ ಮಕ್ಕಳ ಮೇಲೆ ಹರಿದಿದೆ ಎನ್ನಲಾಗಿದೆ.
ಸಾಲಗುಂದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿ ಅಭ್ಯಾಸ ಮಾಡುವ ರೋಸನಿಬಿ ಆರನಬಾಷಾ, ಸಹನಾ ಮಹಿಬೂಬಸಾಬ ಎಂಬ ಎರಡು ಮಕ್ಕಳ ಕಾಲುಗಳು ಮುರಿದಿವೆ. ಚಾಲಕ ಬಸ್ ಬಿಟ್ಟು ಓಡಿ ಹೋಗಿದ್ದಾನೆ. ಮಕ್ಕಳ ಚೀರಾಟ ನೋಡಿದ ಗ್ರಾಮಸ್ಥರು ತಕ್ಷಣ ಅಂಬುಲೆನ್ಸ್‌ಗೆ ಕರೆ ಮಾಡಿ ನಗರದ ಶಾಂತಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಮಕ್ಕಳ ಸ್ಥಿತಿ ಕಂಡು ಪಾಲಕರು ಆಸ್ಪತ್ರೆಯಲ್ಲಿ ಕಣ್ಣೀರು ಹಾಕಿದರು.
ವಿಷಯ ತಿಳಿದು ಗ್ರಾಮೀಣ ಪೊಲೀಸ್ ಠಾಣೆಯ ಸಬ್‍ಇನ್‌ಸ್ಪೆಕ್ಟರ್ ಮಹ್ಮದ್ ಇಸಾಕ್ ಅವರ ಸೂಚನೆ ಮೇರೆಗೆ ಪೊಲೀಸರು ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು. ಬಸ್ ಅನ್ನು ಠಾಣೆಗೆ ತಂದಿದ್ದು ಪಾಲಕರು ದೂರು ನೀಡಿದರೆ ಪ್ರಕರಣ ದಾಖಲು ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.