ADVERTISEMENT

ರಾಯಚೂರು: ಜಿಲ್ಲೆಯ ಶಾಲಾ ಪ್ರಾರಂಭೋತ್ಸವ ಸಂಭ್ರಮ

ಮಕ್ಕಳಲ್ಲಿ ಅಕ್ಷರ ಕಲಿಕೆಯ ತುಡಿತ; ಸರ್ಕಾರಿ ಶಾಲೆಗಳಲ್ಲಿ ಹಬ್ಬದ ವಾತಾವರಣ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 13:56 IST
Last Updated 6 ಜೂನ್ 2019, 13:56 IST
   

ರಾಯಚೂರು:ಜಿಲ್ಲೆಯಾದ್ಯಂತ ಸರ್ಕಾರಿ, ಅನುದಾನಿತ, ಹಾಗೂ ಖಾಸಗಿ ಶಾಲೆಗಳಲ್ಲಿ ಗುರುವಾರ ಸಂಭ್ರಮ ಮನೆ ಮಾಡಿತ್ತು. ರಜೆ ಮುಗಿಸಿಕೊಂಡು ಮೊದಲ ದಿನದಂದು ಮಕ್ಕಳು ಶಾಲೆಗೆ ಪ್ರವೇಶಿಸುವ ಸುಸಂದರ್ಭ ವಿಶೇಷವಾಗಿತ್ತು.

ಸರ್ಕಾರಿ ಶಾಲೆಗಳಲ್ಲಿ ತಳೀರು, ತೋರಣಗಳನ್ನು ಕಟ್ಟಿದ್ದರು. ಕೆಲವೆಡೆ ಡೊಳ್ಳಿನ ವಾದ್ಯ ಸಹಿತ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಶಿಕ್ಷಕರು ಬರಮಾಡಿಕೊಂಡರು. ಮುಖದಲ್ಲಿ ಹರುಷ ತುಂಬಿಕೊಂಡಿದ್ದ ಮಕ್ಕಳು ಸಂಭ್ರಮಿಸುವುದನ್ನು ಕಣ್ಮುಂಬ ನೋಡಲು ಪಾಲಕರು ಕೂಡಾ ಶಾಲಾ ಆವರಣದ ಅಕ್ಕಪಕ್ಕದಲ್ಲಿ ನಿಂತಿದ್ದರು.

ಸರ್ಕಾರಿ ಶಾಲೆಗಳಲ್ಲಿ ಇಡೀ ದಿನ ಸಂಭ್ರಮವೋ ಸಂಭ್ರಮ. ಶಾಲೆಗೆ ಬಂದಿದ್ದ ಮಕ್ಕಳಿಗೆ ಹೊಸ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಲಾಯಿತು. ಹೊಸತನದಲ್ಲಿ ಮಿಂದಿದ್ದ ಮಕ್ಕಳು ಪುಸ್ತಕಗಳನ್ನು ಕಾತುರದ ಕಣ್ಣುಗಳಿಂದ ತೆರೆದು ನೋಡುತ್ತಾ ಕುಳಿತಿದ್ದರು.

ADVERTISEMENT

ಹೊಸದಾಗಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳ ನೋಂದಣಿ ಕಾರ್ಯ ಕೂಡಾ ಭರದಿಂದ ನಡೆದಿತ್ತು. ಗ್ರಾಮೀಣ ಭಾಗದ ಶಾಲೆಗಳ ಶಿಕ್ಷಕರು ಮಕ್ಕಳನ್ನು ನೋಂದಾಯಿಸಿಕೊಳ್ಳಲು ಗ್ರಾಮದಾದ್ಯಂತ ಸಂಚರಿಸಿ, ವಿಚಾರಿಸಿದರು. ಶಾಲೆಗೆ ಬರದೆ ಇರುವ ಮಕ್ಕಳ ಪಾಲಕರೊಂದಿಗೆ ಚರ್ಚಿಸಿ, ಶಾಲೆಗೆ ಕಳುಹಿಸುವಂತೆ ಮನವರಿಕೆ ಮಾಡಿದರು.

ಒಂದನೇ ವರ್ಗಕ್ಕಾಗಿ ಶಾಲೆಗೆ ಅಡಿ ಇಡುತ್ತಿದ್ದ ಮಗುವಿನ ಪಾಲಕರು ಕಣ್ಣಾಲೆಗಳು ತುಂಬಿದ್ದ ಚಿತ್ರಣವು ಕೆಲವು ಖಾಸಗಿ ಶಾಲೆಗಳು, ಕಾನ್ವೆಂಟ್‌ ಪರಿಸರದಲ್ಲಿ ಕಂಡುಬಂತು. ಶಾಲಾ ಶುಲ್ಕ ಭರಿಸುವುದು, ಪಠ್ಯಪುಸ್ತಕಗಳನ್ನು ಖರೀದಿಸುವುದು, ಶಾಲಾ ವಾಹನಗಳ ಬಗ್ಗೆ ವಿಚಾರಣೆ ಹಾಗೂ ಸಮವಸ್ತ್ರ ಎಲ್ಲಿ ಖರೀದಿಸುವುದು ಇತ್ಯಾದಿ ಮಾಹಿತಿಯನ್ನು ಪಡೆಯುವುದಕ್ಕೆ ಪಾಲಕರು ಶಾಲಾ ಆಡಳಿತ ಕಚೇರಿಗಳಲ್ಲಿ ಮುಗಿಬಿದ್ದಿರುವ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.