ರಾಯಚೂರು: ‘ದೇಶದ ಮಹಾಗ್ರಂಥಗಳಾದ ಮಹಾಭಾರತ ಮತ್ತು ರಾಮಾಯಣದಲ್ಲೂ ವೈಜ್ಞಾನಿಕ ಅಂಶಗಳನ್ನು ಉಲ್ಲೇಖಿಸಲಾಗಿದೆ’ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಜಂಟಿ ನಿರ್ದೇಶಕ ಎಂ. ವಿಜಯಕುಮಾರ ಹೇಳಿದರು.
ಯರಮರಸ್ ಕ್ಯಾಂಪ್‌ನ ಆಪ್ತಾಬ್ ಶಿಕ್ಷಣ ಸಂಸ್ಥೆಯಲ್ಲಿ ಜಿಲ್ಲಾ ಶಿಕ್ಷಣ ಸಂಸ್ಥೆ ಮತ್ತು ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ಕಲಬುರಗಿ ವಿಭಾಗ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು.
‘ಶ್ರೀ ಕೃಷ್ಣನು ಚಕ್ರವ್ಯೂಹ ಭೇದಿಸುವ ಕಥೆಯನ್ನು ಹೇಳುತ್ತಿದ್ದಾಗ ಸಹೋದರಿ ಸುಭದ್ರೆ ನಿದ್ರೆಯಲ್ಲಿದ್ದರೂ, ಗರ್ಭದಲ್ಲಿರುವ ಶಿಶು ಕಥೆಯನ್ನು ಕೇಳುತ್ತಿತ್ತು. ಸುಭದ್ರೆ ನಿದ್ರೆಗೆ ಜಾರಿದ ನಂತರ ಪ್ರತಿಕ್ರಿಯಿಸತೊಡಗಿತು ಎನ್ನುವ ಉಲ್ಲೇಖವಿದೆ’ ಎಂದು ಹೇಳಿದರು.
‘ಮಕ್ಕಳಿಗೆ ಸ್ಪರ್ಧೆಯ ಅರ್ಥವನ್ನು ವಿವರಿಸಿ ಗೆದ್ದವರು ಸೋತವರಿಗೆ ಅಭಿನಂದನೆಗಳನ್ನು ಸಲ್ಲಿಸಬೇಕು. ಏಕೆಂದರೆ ನಿಮ್ಮ ಗೆಲುವಿನಲ್ಲಿ ಅವರ ತ್ಯಾಗವಿದೆ. ಅದೇ ರೀತಿ ಸೋತವರು ಗೆದ್ದವರಿಗೆ ರಾಜ್ಯ ಮಟ್ಟದಲ್ಲಿ ನಮ್ಮ ಕಲಬುರಗಿ ವಿಭಾಗವನ್ನು ಪ್ರಥಮ ಸ್ಥಾನದಲ್ಲಿ ಬರುವಂತೆ ಶುಭಕೋರಬೇಕು’ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಡಯಟ್ ಪ್ರಾಚಾರ್ಯ ಚಂದ್ರಶೇಖರ ಭಂಡಾರಿ ಮಾತನಾಡಿ, ‘ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳುವ ನಿಟ್ಟಿನಲ್ಲಿ ಮಾನವ ಕುಲದ ಒಳಿತಿಗೆ ವಿಜ್ಞಾನ ಮತ್ತು ತಂತ್ರಜ್ಞಾನ ಬಳಸಿಕೊಳ್ಳಬೇಕಿದೆ’ ಎಂದು ಹೇಳಿದರು.
ಮುಖಂಡ ಆರ್‌ಡಿಎ ನಿಕಟ ಪೂರ್ವ ಸದಸ್ಯ ಗೋವಿಂದ ರೆಡ್ಡಿ ಮಾತನಾಡಿದರು. ಆಪ್ತಾಬ್ ಸಂಸ್ಥೆಯ ಅಧ್ಯಕ್ಷ ಸಿರಾಜ್ ತಮ್ಮ ಅನುಭವ ಹಂಚಿಕೊಂಡರು.
ನಾಟಕ ಸ್ಪರ್ಧೆಯ ನಿರ್ಣಾಯಕರಾಗಿ ಮರ್ಚಡ್ ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕ ವೀರೇಂದ್ರ ಪಾಟೀಲ, ಮಲ್ಕಾಪುರ ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಸಂಗಮೇಶ ಕೋಟೆ ಭಾಗವಹಿಸಿದ್ದರು.
ನೋಡಲ್ ಅಧಿಕಾರಿ ಮುರಳೀಧರರಾವ ಕುಲಕರ್ಣಿ, ಗದ್ದಿ ಬಸಪ್ಪ ಹಾಗೂ ಡಯಟ್ ಉಪನ್ಯಾಸಕಿ ಸುಜಾತಾ ಹಾಜರಿದ್ದರು. ಶಿಕ್ಷಣ ಸಂಯೋಜಕ ಮಂಜುನಾಥ ಹಾಗೂ ಕೋದಂಡ ರೆಡ್ಡಿ ನಿರೂಪಿಸಿದರು. ಶಿಕ್ಷಕಿ ಸಾಜೀದ್ ಫಾತಿಮಾ ವಂದಿಸಿದರು.
ಸ್ಪರ್ಧೆಯಲ್ಲಿ ಕಲಬುರಗಿ ವಿಭಾಗದ ಬೀದರ್, ಕಲಬುರಗಿ, ಯಾದಗಿರಿ ಮತ್ತು ರಾಯಚೂರು, ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳ ನಾಟಕ ತಂಡಗಳು ಹಾಗೂ ಮಾರ್ಗದರ್ಶಿ ಶಿಕ್ಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.