ADVERTISEMENT

ಸ್ವಯಂ ಉದ್ಯಮದಿಂದ ಅಭಿವೃದ್ಧಿ ಸಾಧಿಸಲು ಕರೆ

ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಆರಂಭ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 14:27 IST
Last Updated 26 ಆಗಸ್ಟ್ 2022, 14:27 IST
ರಾಯಚೂರಿನ ಕನ್ನಡ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ರಾಜೇಶ್ವರಿ ಮಾತನಾಡಿದರು. 
ರಾಯಚೂರಿನ ಕನ್ನಡ ಭವನದಲ್ಲಿ ಶುಕ್ರವಾರ ಏರ್ಪಡಿಸಿದ್ದ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಉದ್ಘಾಟನಾ ಸಮಾರಂಭದಲ್ಲಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ರಾಜೇಶ್ವರಿ ಮಾತನಾಡಿದರು.    

ರಾಯಚೂರು: ಉದ್ಯಮ ಆರಂಭಿಸುವುದಕ್ಕೆ ಎಲ್ಲಾ ರೀತಿಯ ಮಾಹಿತಿ ತಿಳಿದುಕೊಂಡು ಸ್ವಯಂ ಉದ್ಯಮ ಪ್ರಾರಂಭಿಸಿ, ಆರ್ಥಿಕ ಅಭಿವೃದ್ಧಿ ಸಾಧಿಸಬೇಕು ಎಂದು ಸಿಡಾಕ್ ಜಂಟಿ ನಿರ್ದೇಶಕ ಬಿ.ಎಂ.ಗೂಟೂರ ಅವರು ಮಹಿಳೆಯರಿಗೆ ಕರೆ ನೀಡಿದರು.

ನಗರದ ಕನ್ನಡ ಭವನದಲ್ಲಿ ಧಾರವಾಡದ ಕರ್ನಾಟಕ ಉದ್ಯಮ ಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಬೆಂಗಳೂರಿನ ಕೌಶಲ್ಯಾಭಿವೃದ್ಧಿ, ಉದ್ಯಮಶೀತೆ, ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದಿಂದ ಏರ್ಪಡಿಸಿರುವ ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾವಂತರು ಸ್ವಯಂ ಉದ್ಯೋಗ ಪ್ರಾರಂಭಿಸಲು ಮುಂದೆ ಬರಬೇಕು. ಕೈಗಾರಿಕಾ ಮತ್ತು ಸೇವಾ ವಿಭಾಗದಲ್ಲಿ ಉದ್ಯಮ ಪ್ರಾರಂಭಿಸಲು ಅನೇಕ ಅವಕಾಶಗಳಿವೆ. ದೇಶದಲ್ಲಿ ಯುವಜನರು ಹೆಚ್ಚಿನ ಸಂಖೆಯಲ್ಲಿದ್ದು, ಸಣ್ಣ ಪ್ರಮಾಣದ ಉತ್ಪಾದನಾ ಚಟುವಟಿಕೆ ಮತ್ತು ಸೇವಾ ಚಟುವಟಿಕೆಗಳನ್ನು ಸ್ಥಾಪಿಸಲು ಹೆಚ್ಚಿನ ಅವಕಾಶವಿದೆ ಎಂದು ಹೇಳಿದರು.

ADVERTISEMENT

ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಬಸವರಾಜ ಯಂಕಂಚಿ ಮಾತನಾಡಿ, ಸರ್ಕಾರಗಳಿಂದ ಹಲವಾರು ಯೋಜನೆಗಳು ಜಾರಿಗೆ ಬಂದಿದ್ದು, ಅವುಗಳನ್ನು ಸರಿಯಾಗಿ ಬಳಸಿಕೊಂಡು ಆಸಕ್ತಿಯಿಂದ ಉದ್ಯೋಗ ಪ್ರಾರಂಭಿಸಬೇಕು. ಇದಕ್ಕೆ ಬೇಕಾಗುವ ಎಲ್ಲಾ ರೀತಿಯ ಸಹಕಾರವನ್ನು ಸಂಬಂಧಿಸಿದ ಇಲಾಖೆಗಳಿಂದ ಒದಗಿಸಲಾಗುತ್ತದೆ ಎಂದು ಹೇಳಿದರು.

ರಾಯಚೂರಿನ ಎಸ್.ಬಿ.ಐ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ರಾಜೇಶ್ವರಿ ಅವರು ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳು ಈ ಸೌಲಭ್ಯವನ್ನು ಪಡೆಯಬೇಕು. ಇದಕ್ಕಾಗಿ ವಿವಿಧ ಬ್ಯಾಂಕುಗಳು ಸಾಲ ನೀಡಲು ಮುಂದೆ ಬರುತ್ತಿವೆ. ಆಸಕ್ತರು ಬ್ಯಾಂಕ್ ನೆರವಿನೊಂದಿಗೆ ಸ್ವಯಂ ಉದ್ಯೋಗ ಪ್ರಾರಂಭ ಮಾಡಬೇಕು ಎಂದು ತಿಳಿಸಿದರು.

ಸಿಡಾಕ್ ಜಂಟಿ ನಿರ್ದೇಶಕ ಜಿ.ಯು.ಹುಡೇದ್ ಪ್ರಾಸ್ತಾವಿಕವಾಗಿ ಮಾತನಾಡಿ, 10 ದಿನಗಳ ತರಬೇತಿ ಅವಧಿಯಲ್ಲಿ ಸಾಧನಾ ಪ್ರೇರಣಾ ತರಬೇತಿ, ಸ್ವಯಂ ಉದ್ಯಮಗಳ ಸ್ಥಾಪನೆ ಮಾಡುವ ವಿಧಾನ, ಸ್ವಯಂ ಉದ್ಯೋಗಕ್ಕೆ ಇರುವ ಸೌಲಭ್ಯಗಳ ಕುರಿತು ತಿಳಿಸಲಾಗುವುದು ಎಂದು ಮಹಿಳೆಯರಿಗೆ ಹೇಳಿದರು.

ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ರಾಯಣ್ಣ ಕೆ., ರಾಷ್ಟ್ರೀಯ ತರಬೇತುದಾರರಾದ ಬಸವರಾಜ, ಸಿಡಾಕ್ ತರಬೇತುದಾರ ನಾಗರಾಜ್, ಶೃತಿ ಮತ್ತಿತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.