ADVERTISEMENT

ಕೊರೊನಾ ಹರಡದಂತೆ ರಾಯಚೂರಿನಲ್ಲಿ ಸ್ವಯಂ ನಿಯಂತ್ರಣ

ಸಿಂಧನೂರು, ಮಾನ್ವಿಯಲ್ಲಿ ಮಧ್ಯಾಹ್ನದಿಂದಲೇ ವಹಿವಾಟು ಸ್ಥಗಿತ

ನಾಗರಾಜ ಚಿನಗುಂಡಿ
Published 10 ಜುಲೈ 2020, 19:30 IST
Last Updated 10 ಜುಲೈ 2020, 19:30 IST
ಕೋವಿಡ್‌ ಸೋಂಕು ಹರಡದಂತೆ ಸಿಂಧನೂರಿನಲ್ಲಿ ಪ್ರತಿದಿನ ಮಧ್ಯಾಹ್ನದಿಂದ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿಕೊಳ್ಳುತ್ತಿದ್ದಾರೆ
ಕೋವಿಡ್‌ ಸೋಂಕು ಹರಡದಂತೆ ಸಿಂಧನೂರಿನಲ್ಲಿ ಪ್ರತಿದಿನ ಮಧ್ಯಾಹ್ನದಿಂದ ವ್ಯಾಪಾರಿಗಳು ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಬಂದ್‌ ಮಾಡಿಕೊಳ್ಳುತ್ತಿದ್ದಾರೆ   

ರಾಯಚೂರು: ಜಿಲ್ಲೆಯಲ್ಲಿ ಕೊರೊನಾ ಸೋಂಕು ತಡೆಗೆ ಮುನ್ನಚ್ಚರಿಕೆ ವಹಿಸುತ್ತಿದ್ದರೂ ಜನದಟ್ಟಣೆ ಆಗುವುದನ್ನು ತಪ್ಪಿಸಲಾಗುತ್ತಿಲ್ಲ. ಸಿಂಧನೂರು, ಮಾನ್ವಿ ಹಾಗೂ ಮುದಗಲ್‌ನಲ್ಲಿ ವ್ಯಾಪಾರಿಗಳು ಪ್ರತಿದಿನ ಮಧ್ಯಾಹ್ನದಿಂದ ಸ್ವಯಂ ಪ್ರೇರಣೆಯಿಂದ ವಹಿವಾಟು ಸ್ಥಗಿತಗೊಳಿಸುತ್ತಿದ್ದಾರೆ. ಕೊರೊನಾ ಸೋಂಕು ಹರಡದಂತೆ ಲಗಾಮು ಹಾಕುತ್ತಿದ್ದಾರೆ.

ಸಿಂಧನೂರು ನಗರದಲ್ಲಿ ಜುಲೈ 5 ರಂದು ಶಾಸಕ ವೆಂಕಟರಾವ್‌ ನಾಡಗೌಡ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಲಾಕ್‌ಡೌನ್‌ಗೆ ತೀರ್ಮಾನಿಸಲಾಗಿದ್ದು, ಜುಲೈ 6 ರಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆಯಿಂದಲೆ ಎಲ್ಲ ವ್ಯಾಪಾರಿ ಮಳಿಗೆಗಳು, ಬೀದಿ ವ್ಯಾಪಾರ ಸ್ಥಗಿತಗೊಳಿಸಲಾಗುತ್ತಿದೆ. ಔಷಧಿ ಅಂಗಡಿಗಳು, ಬಾರ್‌ಗಳು ಮಾತ್ರ ತೆರೆದಿರುತ್ತವೆ. ಸರ್ಕಾರಿ ಬಸ್‌ ಸಂಚಾರವೂ ಇದೆ. ಸಿಂಧನೂರು ತಾಲ್ಲೂಕಿನಲ್ಲಿ ಒಟ್ಟು 29 ಕೋವಿಡ್‌ ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಿಂದ ನಗರಕ್ಕೆ ಮರಳಿದ ಮೂವರಿಗೂ ಕೋವಿಡ್‌ ದೃಢವಾದ ಬಳಿಕ ಆತಂಕ ಹೆಚ್ಚಾಗಿದೆ.

ಮಾನ್ವಿ ಪಟ್ಟಣದ ವ್ಯಾಪಾರಿಗಳು ಜುಲೈ 8 ರಿಂದ ಸ್ವಯಂ ಪ್ರೇರಿತರಾಗಿ ಲಾಕ್‌ಡೌನ್‌ ಮಾಡಿಕೊಳ್ಳುತ್ತಿದ್ದಾರೆ. ಮಾನ್ವಿ ಪಟ್ಟಣದ 23 ವರ್ಷದ ಕೋವಿಡ್‌ ಪಾಜಿಟಿವ್‌ ಮಹಿಳೆಯೊಬ್ಬರು ಜುಲೈ 7 ರಂದು ಮೃತಪಟ್ಟಿದ್ದರಿಂದ ಆತಂಕ ಹೆಚ್ಚಾಗಿದೆ. ಪಟ್ಟಣದಲ್ಲಿಯೆ 16 ಪಾಜಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಶಾಸಕ ರಾಜಾ ವೆಂಕಟಪ್ಪ ನಾಯಕ ಅಧ್ಯಕ್ಷತೆಯನ್ನು ಸಭೆ ನಡೆಸಿದ ವ್ಯಾಪಾರಿಗಳು ಜುಲೈ 8 ರಿಂದ ಮಧ್ಯಾಹ್ನ 2 ಗಂಟೆಯಿಂದ ವಹಿವಾಟು ಬಂದ್‌ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಲಿಂಗಸುಗೂರು ತಾಲ್ಲೂಕಿನ ಮುದಗಲ್‌ ಪಟ್ಟಣದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ 29 ವರ್ಷದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದರು. ಕೋವಿಡ್‌ ದೃಢವಾಗಿರುವ ಸುದ್ದಿಯಿಂದ ಆತಂಕ ಹೆಚ್ಚಾಗಿದ್ದು, ಜುಲೈ 9 ರಿಂದ ಮಧ್ಯಾಹ್ನ 2.30 ರಿಂದ ವ್ಯಾಪಾರ ಸ್ಥಗಿತ ಮಾಡಲಾರಂಭಿಸಿದ್ದಾರೆ.

ಜಿಲ್ಲೆಯಾದ್ಯಂತ ರಾತ್ರಿ 8 ರಿಂದ ಬೆಳಿಗ್ಗೆ 6 ರವರೆಗೂ ಜಿಲ್ಲೆಯಾದ್ಯಂತ ವ್ಯಾಪಾರಿ ಮಳಿಗೆ ತೆರೆಯದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಅದರಂತೆ ಪಾಲನೆ ಆಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.