ADVERTISEMENT

ಪತ್ನಿಗಾಗಿ ಮೊಬೈಲ್‌ ಟವರ್‌ ಏರಿದ ಕುಮಾರ!

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 15:41 IST
Last Updated 9 ಜುಲೈ 2019, 15:41 IST
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿ ಮೊಬೈಲ್‌ ಟವರ್‌ ಏರಿ ಕುಳಿತ್ತಿದ್ದ ಶಾಂತಕುಮಾರ
ರಾಯಚೂರಿನ ನಿಜಲಿಂಗಪ್ಪ ಕಾಲೋನಿಯಲ್ಲಿ ಮೊಬೈಲ್‌ ಟವರ್‌ ಏರಿ ಕುಳಿತ್ತಿದ್ದ ಶಾಂತಕುಮಾರ   

ರಾಯಚೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯು ಇದ್ದಕ್ಕಿದ್ದಂತೆ ಪಾಲಕರ ಮನೆ ಸೇರಿಕೊಂಡು ವಾಪಸ್‌ ಬರದೆ ಇರುವುದಕ್ಕೆ ನೊಂದಿದ್ದ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಕುಳಿತು ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಕೆಲಕಾಲ ಆತಂಕ ಮೂಡಿಸಿದ ಘಟನೆಯೊಂದು ನಗರದ ಬಸವೇಶ್ವರ ಕಾಲೋನಿಯಲ್ಲಿ ಮಂಗಳವಾರ ಬೆಳಿಗ್ಗೆ ನಡೆಯಿತು.

ನಗರದ ಯುವಕ ಶಾಂತಕುಮಾರ, ನಿಜಲಿಂಗಪ್ಪ ಕಾಲೋನಿಯ ಕೆಇಬಿ ಶಾಲೆ ಬಳಿ ಇರುವ ಬಿಎಸ್‌ಎನ್‌ಎಲ್‌ ಬೃಹತ್‌ ಟವರ್‌ನ್ನು ಏರಿ ಕುಳಿತ್ತಿದ್ದ. ಈ ಸುದ್ದಿ ತಿಳಿದು ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯು ಸ್ಥಳಕ್ಕೆ ಧಾವಿಸಿದರು. ಬೇಡಿಕೆ ಈಡೇರಿಸುವುದಾಗಿ ಹೇಳಿ ಬಹಳ ಹೊತ್ತಿನವರೆಗೂ ಮನವೊಲಿಸುವ ಯತ್ನ ನಡೆಸಿದರು. ಶಾಂತಕುಮಾರ ತಾಯಿ ಕೂಡಾ ರೋದಿಸುತ್ತಾ ಕೆಳಗೆ ಬರುವಂತೆ ಕೋರಿದರೂ ಸ್ಪಂದಿಸಲಿಲ್ಲ.

ಕೆಲವು ಗಂಟೆಗಳು ಕಳೆದ ಬಳಿಕ ಪತ್ನಿಯಿಂದಲೇ ಕರೆ ಮಾಡಿಸಿದ ಪೊಲೀಸರು, ಮನೆಗೆ ಬರುವುದಾಗಿ ಹೇಳುವಂತೆ ತಿಳಿಸಿದರು. ಪತ್ನಿಯು ಭರವಸೆ ಕೊಟ್ಟ ಬಳಿಕವಷ್ಟೇ ಶಾಂತಕುಮಾರ ಕೆಳಗೆ ಇಳಿದು ಬಂದ. ಕೂಡಲೇ ಪೊಲೀಸರು ಆತನನ್ನು ವಿಚಾರಿಸುವುದಕ್ಕಾಗಿ ಠಾಣೆಗೆ ಕರೆದುಕೊಂಡು ಹೋದರು. ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೂ ಆತಂಕ ಹುಟ್ಟಿಸಿದ್ದ ಘಟನೆಯೊಂದು ಸುಖಾಂತ್ಯ ಕಂಡಿತು.

ADVERTISEMENT

ಹಿನ್ನೆಲೆ: ನಗರ ವ್ಯಾಪ್ತಿಯ ಅಸ್ಕಿಹಾಳ ಗ್ರಾಮದ ಯುವತಿ ಕವಿತಾಳನ್ನು ಪ್ರೀತಿಸಿದ್ದ ಶಾಂತಕುಮಾರ ಕೆಲವು ತಿಂಗಳುಗಳ ಹಿಂದೆ ಮದುವೆ ಮಾಡಿಕೊಂಡಿದ್ದ. ಯುವತಿಯ ಮನೆಯವರ ವಿರೋಧ ಲೆಕ್ಕಿಸದೆ ಇಬ್ಬರಮದುವೆ ನೆರವೇರಿತ್ತು. ಆನಂತರ, ಕವಿತಾ ಮನೆಗೆ ಬಾರದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಕೆಯ ಪಾಲಕರು ಬೆದರಿಕೆ ಹಾಕಿದ್ದರು. ಇದಕ್ಕೆ ಬೇಸರಪಟ್ಟುಕೊಂಡ ಕವಿತಾ ಪಾಲಕರ ಮನೆಗೆ ಹೋಗಿದ್ದರು. ಆನಂತರ ಮರಳಿ ಶಾಂತಕುಮಾರ ಬಳಿ ಬರುವುದಕ್ಕೆ ನಿರಾಕರಣೆ ಮಾಡಲಾರಂಭಿಸಿದ್ದು, ಈ ಆವಾಂತರ ಸೃಷ್ಟಿಯಾಗುವುದಕ್ಕೆ ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.