ADVERTISEMENT

ಕುರಿಗಾಹಿಗಳಿಗೆ ಪರಿಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2020, 11:51 IST
Last Updated 9 ಅಕ್ಟೋಬರ್ 2020, 11:51 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು  ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಎದುರು  ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಸತ್ತ ಕುರಿಗಳಿಗೆ ಅನುಗ್ರಹ ಯೋಜನೆಯಡಿ ಪರಿಹಾರ ಧನ ನೀಡಬೇಕು. ನಗರ ಕುರಿಗಾಹಿಗಳಿಗೆ ಕುರಿ ಸಾಕಾಣೆಗೆ ಅನುಕೂಲ ಕಲ್ಪಿಸಲು ಸರ್ಕಾರಿ ಗೈರಾಣಿ ಭೂಮಿ ನೀಡಬೇಕು ಎಂದು ಒತ್ತಾಯಿಸಿ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಕುರಿ ಸಾಕಾಣಿಕೆಯನ್ನೆ ಜೀವನಾಧಾರವಾಗಿಸಿಕೊಂಡು ಬದುಕು ಕಟ್ಟಿಕೊಂಡ ಕುರುಬ ಸಮುದಾಯವು ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಸಿದ್ದರಾಮಯ್ಯ ಅವರ ಆಡಳಿತ ಅವಧಿಯಲ್ಲಿ ಕುರಿಗಳಿಗೆ ಪರಿಹಾರ ನೀಡಲಾಗುತ್ತಿತ್ತು. ಪ್ರಸ್ತುತ ಸರ್ಕಾರ ಪರಿಹಾರ ನೀಡುವುದನ್ನು ನಿಲ್ಲಿಸಿದ್ದರಿಂದ ಸಮಸ್ಯೆಯಾಗಿದೆ. ಈಚೆಗೆ ಅನೇಕ ಕುರಿಗಳು ನೀಲುಬಾಯಿ ರೋಗ, ಚರ್ಮರೋಗ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಿ ಸಾವನ್ನಪ್ಪುತ್ತಿದ್ದು ಈ ಬಗ್ಗೆ ಪಶುಸಂಗೋಪನಾ ಇಲಾಖೆ, ಕುರಿ ಮತ್ತು ಉಣ್ಣೆ ನಿಗಮಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ಸತ್ತ ಕುರಿಗಳಿಗೆ ಪರಿಹಾರ ಧನ ನೀಡಬೇಕು. ಮಳೆಗಾಲದಲ್ಲಿ ಕುರಿಗಳ ಮತ್ತು ಕುರಿಗಾಹಿಗಳ ರಕ್ಷಣೆಗಾಗಿ ಸೊಳ್ಳೆಪರದೆ, ಟಾರ್ಚ್ ಸೇರಿದಂತೆ ರಕ್ಷಣಾ ಸಲಕರಣೆಗಳನ್ನು ಒದಗಿಸಬೇಕು. ಕುರಿ ಮತ್ತು ಉಣ್ಣೆ ನಿಗಮಕ್ಕೆ ಹೆಚ್ಚಿನ ಅಧಿಕಾರ ನೀಡಬೇಕು. ಸರ್ಕಾರದಿಂದ ಕುರಿಗಳನ್ನು ಅಥವಾ ಸಾಲವನ್ನು ಒದಗಿಸುವಾಗ ಪರಿಶಿಷ್ಟರಿಗೆ ಮಾತ್ರ ನೀಡುವ ನಿಯಮ ತೆಗೆದು ಹಾಕಿ ಕುರುಬ ಸಮಾಜಕ್ಕೂ ನೀಡಬೇಕು ಎಂದು ಆಗ್ರಹಿಸಿದರು.

ಸಂಘದ ಗೌರವಾಧ್ಯಕ್ಷ ರಾಹುಲ್, ಜಿಲ್ಲಾಧ್ಯಕ್ಷ ಗುರುಪ್ರತಾಪ್, ಸಂಚಾಲಕ ಮಲ್ಲಿಕಾರ್ಜುನ.ಕೆ, ಬೀರಪ್ಪ, ನರಸಣ್ಣ, ಅಜಯಕುಮಾರ, ರಮೇಶ್, ಅಯ್ಯಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.