ADVERTISEMENT

ಯಡಿಯೂರಪ್ಪ ಬಡವರಿಗೆ 4 ಕೆಜಿ ಅಕ್ಕಿ ಕಡಿಮೆ ಮಾಡಿದ್ದಾರೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2021, 11:20 IST
Last Updated 29 ಮಾರ್ಚ್ 2021, 11:20 IST
ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಸಭೆ
ಕಾಂಗ್ರೆಸ್ ಆಯೋಜಿಸಿದ್ದ ಬಹಿರಂಗ ಸಭೆ   

ಮಸ್ಕಿ (ರಾಯಚೂರು): 'ಮಸ್ಕಿ ಉಪಚುನಾವಣೆ ಏಕೆ ಬಂತು ಎಂಬುದು ಜನರಿಗೆ ಗೊತ್ತಿದೆ. ಪ್ರತಾಪಗೌಡ ಪಾಟೀಲ್ ಅವರು ಈಗ ಬಿಜೆಪಿ ಅಭ್ಯರ್ಥಿಯಾಗಿದ್ದು ಅವರು ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಮಾಡಿ, ಲಂಚಕ್ಕೆ ಬಲಿಯಾಗಿ ಸುಮಾರು ₹20ರಿಂದ 30 ಕೋಟಿಗೆ ಮಾರಾಟವಾಗಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ' ಎಂದು ಸಿದ್ದರಾಮಯ್ಯ ಅವರು ವಾಗ್ದಾಳಿ ನಡೆಸಿದರು.

ಪಟ್ಟಣದ ತೇರ ಬೀದಿಯಲ್ಲಿ ಕಾಂಗ್ರೆಸ್ ನಿಂದ ಆಯೋಜಿಸಿದ್ದ ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಿದರು.

'ಪ್ರತಾಪ್ ಗೌಡ ಮೇಲೆ ಮೊದಲೇ ಅನುಮಾನ ಇತ್ತು. 2013ರಲ್ಲಿ ಅಮರೇಗೌಡ ಬಯ್ಯಾಪುರ ಮತ್ತು ಎನ್. ಎಸ್. ಬೋಸರಾಜು ಸೇರಿಕೊಂಡು ಪ್ರತಾಪಗೌಡ ಕಾಂಗ್ರೆಸ್ಸಿಗೆ ಕರೆತಂದರು' ಎಂದರು.

ADVERTISEMENT

'ಎರಡು ಸಲ ಶಾಸಕ ಮಾಡಿದ ಪಕ್ಷಕ್ಕೆ ದ್ರೋಹ ಬಗೆದು ಪ್ರತಾಪಗೌಡ ಪಾಟೀಲ್ ಅವರು ಬಿಜೆಪಿಗೆ ಹೋಗಿದ್ದಾರೆ.

ಅವರನ್ನು ಸೋಲಿಸ ಬೇಕಾಗಿದ್ದು ಮಸ್ಕಿ ಕ್ಷೇತ್ರದ ಜನರ ಕೆಲಸ. ಬಸನಗೌಡ ತುರುವಿಹಾಳ ಅವರನ್ನು ವಿಧಾನಸಭೆ ಕಳಿಸಲು ಮಸ್ಕಿ ವಿಧಾನಸಭಾ ಕ್ಷೇತ್ರ ಜನರು ಈಗಾಗಲೇ ತೀರ್ಮಾನ ಮಾಡಿದ್ದಾರೆ' ಎಂದರು.

'ಗ್ರಾಮ ಗ್ರಾಮಕ್ಕೆ ಬಂದು ಮತದಾರರನ್ನು ಕೇಳುತ್ತೇನೆ. ಬಸನಗೌಡ ಪರ ಮತಯಾಚಿಸುತ್ತೇನೆ' ಎಂದು ಹೇಳಿದರು.

'ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿವೃದ್ಧಿ ಎರಡುವರೆ ಸಾವಿರ ಕೋಟಿ ಅನುದಾನ ಕೊಟ್ಟಿದ್ದೆ. ಎಲ್ಲಾ ಜಾತಿಗಳ ಬಡವರಿಗೆ 7 ಕೆಜಿ ಉಚಿತವಾಗಿ ಅಕ್ಕಿ ಕೊಡುವ ಯೋಜನೆ ಮಾಡಲಾಗಿತ್ತು. ಆದರೆ ಯಡಿಯೂರಪ್ಪ ಬಡವರಿಗೆ ಅಕ್ಕಿ ಕೊಡುವುದನ್ನು 4 ಕೆಜಿ ಕಡಿಮೆ ಮಾಡಿದ್ದಾರೆ. ಜನರ ಹಣ ಜನರಿಗೆ ಕೊಡಲು ಇವರಪ್ಪನ ಮನೆ ಗಂಟೇನು ಹೋಗ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ 10 ಕೆಜಿ ಅಕ್ಕಿ ಉಚಿತವಾಗಿ ಕೊಡಲಾಗುವುದು' ಎಂದು ತಿಳಿಸಿದರು.

'ಯಡಿಯೂರಪ್ಪ ಅಧಿಕಾರಕ್ಕೆ ಬಂದ ನಂತರ ಒಂದೇ ಒಂದು ರೂಪಾಯಿ ಸಾಲ ಮನ್ನಾ ಮಾಡಲಿಲ್ಲ. 2018ನೇ ಸಾಲಿನ ಪ್ರಣಾಳಿಕೆಯಲ್ಲಿ 1 ಲಕ್ಷದವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದರು. ಆದರೆ ಸಾಲ ಮನ್ನಾ ಮಾಡಿಲ್ಲ. ಇಂಥವರಿಗೆ ನೀವು ಕೊಡ್ತೀರಾ' ಎಂದು ಜನರನ್ನು ಪ್ರಶ್ನಿಸಿದರು.

'ಪ್ರತಾಪ್ ಗೌಡರಂತಹ ಪಕ್ಷ ದ್ರೋಹಿಗಳಿಗೆ ಕರ್ನಾಟಕ ರಾಜಕೀಯದಲ್ಲಿ ಬೆಳೆಯಲು ಬಿಡಬಾರದು. ತಕ್ಕ ಪಾಠ ಕಲಿಸಬೇಕು. ಸ್ವಾಭಿಮಾನ ಇಲ್ಲದ ದುಡ್ಡಿಗೋಸ್ಕರ ಮಾಡಿಕೊಳ್ಳುವಂತಹ ರಾಜಕಾರಣಿಗಳಿಗೆ ಅವಕಾಶ ನೀಡಬಾರದು' ಎಂದರು.

'ಅಗತ್ಯವಸ್ತುಗಳ ಬೆಲೆ, ಇಂಧನ ಬೆಲೆ ಹಾಗೂ ತರಕಾರಿಗಳ ಬೆಲೆಗಳು ಗಗನಕ್ಕೇರಿವೆ. ಇಂತಹ ಸಂದರ್ಭದಲ್ಲಿ ಬಡವರು ಬದುಕಲು ಸಾಧ್ಯವಿಲ್ಲ. ಕಾಂಗ್ರೆಸ್ ಎಲ್ಲ ಜನರ ಪಕ್ಷವಾಗಿದ್ದು, ಬಸನಗೌಡ ಅವರನ್ನು ಆಯ್ಕೆಗೊಳಿಸಿ' ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.