ಹಟ್ಟಿ ಚಿನ್ನದ ಗಣಿ: ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ವತಿಯಿಂದ ಹಟ್ಟಿ ಗಣಿ ಕಂಪನಿಯ ಸಿಬ್ಬಂದಿ ಹಾಗೂ ಕಾರ್ಮಿಕರ ವಸತಿ ಸಮುಚ್ಚಯ ನಿರ್ಮಾಣದ ಶಂಕುಸ್ಥಾಪನೆಯನ್ನು ಆ.6ರಂದು ಮಧ್ಯಾಹ್ನ 12 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೆರವೇರಿಸಲಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಹೇಳಿದರು.
ಹಟ್ಟಿ ಪಟ್ಟಣದ ಧಾರುವಾಲ ಕ್ರೀಡಾಂಗಣದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮದ ಸ್ಥಳವನ್ನು ಸೋಮವಾರ ಪರಿಶೀಲಿಸಿ ಮಾತನಾಡಿದ ಸಚಿವರು, ‘₹998 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಚಯ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಅದಕ್ಕಾಗಿ ಹಟ್ಟಿ ಚಿನ್ನದ ಗಣಿಯಿಂದ ಸಕಲ ಸಿದ್ಧತೆಗಳು ನಡೆದಿವೆ’ ಎಂದರು.
‘ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ, ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಗಣಿ ಕಂಪನಿ ಅಧ್ಯಕ್ಷ ಜೆ.ಟಿ. ಪಾಟೀಲ, ಶಾಸಕರಾದ ಬಸನಗೌಡ ದದ್ದಲ್, ಆರ್.ಬಸವನಗೌಡ ಪಾಟೀಲ, ಹಂಪನಗೌಡ ಬಾದರ್ಲಿ, ಮಾನಪ್ಪ ವಜ್ಜಲ್, ಹಂಪಯ್ಯ ನಾಯಕ, ಕರೆಮ್ಮ ಜಿ.ನಾಯಕ ಭಾಗವಹಿಸಲಿದ್ದಾರೆ’ ಎಂದರು.
‘ಹಟ್ಟಿ ಪಟ್ಟಣವನ್ನು ತಾಲ್ಲೂಕು ಕೇಂದ್ರ ಮಾಡಲು ಮನವಿ ಇದೆ. 49 ಹೊಸ ತಾಲ್ಲೂಕುಗಳಾಗಿವೆ. ಅವುಗಳ ಅಭಿವೃದ್ಧಿಗೆ ತಲಾ ₹8 ಕೋಟಿ ನೀಡಲಾಗಿದೆ. ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ₹840 ಕೋಟಿ ಆರೋಗ್ಯ ಇಲಾಖೆಗೆ ಹಾಗೂ ಮಿನಿವಿಧಾನಸೌದ ನಿರ್ಮಾಣಕ್ಕೆ ಒದಗಿಸಲಾಗಿದೆ’ ಎಂದರು.
ಕಾರ್ಮಿಕರ ಬಹುದಿನದ ಬೇಡಿಕೆ ಮೆಡಿಕಲ್ ಅನ್‌ಫಿಟ್ ಯೋಜನೆ ಸರ್ಕಾರದ ಮಟ್ಟದಲ್ಲಿ ಇದ್ದು ಜಾರಿ ಮಾಡಲು ಒತ್ತಾಯ ಮಾಡಲಾಗುವುದು ಎಂದರು.
ಗಣಿ ಕಂಪನಿ ವ್ಯವಸ್ಥಾಪಕ ನಿರ್ದೇಶಕಿ ಶಿಲ್ಪಾ ಆರ್., ಕಾರ್ಯನಿರ್ವಾಹಕ ನಿರ್ದೇಶಕ ಪ್ರಕಾಶ, ಪ್ರಭಾರ ಪ್ರಧಾನ ವ್ಯವಸ್ಧಾಪಕ ಸೈಫ್‌ವುಲ್ಲಾಖಾನ್, ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಡಿ. ಸಂಧಾನಿ, ಮಾಜಿ ಶಾಸಕ ಡಿ.ಎಸ್. ಹೂಲಗೇರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯಕ, ಗ್ಯಾರಂಟಿ ಯೋಜನೆ ಅಧ್ಯಕ್ಷ ವೆಂಕಟೇಶ ಗುತ್ತೆದಾರ, ಶಿವಶಂಕರಗೌಡ, ಪ.ಪಂ ಸದಸ್ಯರಾದ ಸಿರಾಜುದ್ದಿನ್, ಇಸ್ಮಾಯಿಲ್ ಗೋರಿ, ಬಾಬು ನಾಯಕೊಡಿ, ರಂಗನಾಥ ಮುಂಡರಗಿ, ಮುಖಂಡರಾದ ಕೆ.ಶಾಂತಪ್ಪ, ರಾಜಶೇಖರ ನಾಯಕ, ಗದ್ದನಗೌಡ, ಬುಜ್ಜನಾಯಕ, ಅಮರೇಶ ಹೆಸರೂರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.