ADVERTISEMENT

ಮಂತ್ರಮಾಂಗಲ್ಯಕ್ಕೆ ಸಾಕ್ಷಿಯಾದ ಸಿಂಧನೂರು

ಕುವೆಂಪು ಪರಿಕಲ್ಪನೆಯಲ್ಲಿ ತಾಯಪ್ಪ – ಗಂಗಾ ಸರಳ ವಿವಾಹ

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 15:28 IST
Last Updated 26 ಜೂನ್ 2022, 15:28 IST
ಸಿಂಧನೂರಿನ ಎಪಿಎಂಸಿ ಸಮುದಾಯ ಭವನದಲ್ಲಿ ಕುವೆಂಪುರವರ ಆಶಯದಡಿ ತಾಯಪ್ಪ ಮತ್ತು ಗಂಗಾ ಅವರ ಮಂತ್ರಮಾಂಗಲ್ಯ ಸರಳವಾಗಿ ವಿವಾಹವಾದರು, ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಮಂತ್ರ ಮಾಂಗಲ್ಯದ ಪ್ರತಿಜ್ಞೆಯನ್ನು ಬೋಧಿಸಿದರು
ಸಿಂಧನೂರಿನ ಎಪಿಎಂಸಿ ಸಮುದಾಯ ಭವನದಲ್ಲಿ ಕುವೆಂಪುರವರ ಆಶಯದಡಿ ತಾಯಪ್ಪ ಮತ್ತು ಗಂಗಾ ಅವರ ಮಂತ್ರಮಾಂಗಲ್ಯ ಸರಳವಾಗಿ ವಿವಾಹವಾದರು, ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಮಂತ್ರ ಮಾಂಗಲ್ಯದ ಪ್ರತಿಜ್ಞೆಯನ್ನು ಬೋಧಿಸಿದರು   

ಸಿಂಧನೂರು: ಅಲ್ಲಿ ಮಂತ್ರೋಚ್ಛಾರಣೆ ಇಲ್ಲ, ವಾಲಗದ ಸದ್ದಿಲ್ಲ, ಶಾಸ್ತ್ರಾಚಾರಗಳ ಗೊಡವೆಯಿಲ್ಲ, ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದಡಿ, ಯಾವ ಕಾಲದ ಶಾಸ್ತ್ರವೇನು ಹೇಳಿದರೇನು, ಎದೆಯದನಿಗೂ ಮಿಗಿಲು ಶಾಸ್ತ್ರವಿಹುದೇನು ಎನ್ನುವ ಕುವೆಂಪು ಅವರ ಆಶಯದಡಿ ತಾಯಪ್ಪ ಮತ್ತು ಗಂಗಾ ಅವರ ಮಂತ್ರಮಾಂಗಲ್ಯ ನಗರದ ಎಪಿಎಂಸಿ ಸಮುದಾಯ ಭವನದಲ್ಲಿ ಭಾನುವಾರ ನೆರವೇರಿತು.

ಭವನದಲ್ಲಿ ನೆರೆದಿದ್ದ ಪ್ರಗತಿಪರ ಸಂಘಟನೆಗಳ ಮುಖಂಡರು, ವಿವಿಧ ಸಮುದಾಯಗಳ ಗಣ್ಯರು, ಬಂಧುಗಳು, ಹಿತೈಷಿಗಳು ಸೇರಿದಂತೆ ಇನ್ನಿತರರು ಸಮತಾ ಸಮಾಜದ ಆಶಯದಂತೆ ಅಂತರ್ಜಾತಿ ವಿವಾಹವಾಗಿ ಮಾದರಿ ನಡೆ ಅನುಸರಿಸಿದ ನವ ಜೋಡಿಗಳನ್ನು ಹರಸಿ ಹಾರೈಸಿದರು.

ಪ್ರಗತಿಪರ ಚಿಂತಕ ಮಾರೆಪ್ಪ ವಕೀಲ ಮಾತನಾಡಿ, ‘ಆದಿವಾಸಿ ಜನಾಂಗದ ಪರಂಪರೆ ತಳ ಸಮುದಾಯದ ಜನಾಂಗಗಳಲ್ಲಿದೆ. ಮಹಿಳೆಯರಿಗೆ ಗೌರವ ಕೊಡುವ ಪದ್ಧತಿಯಿದೆ. ಬ್ರಾಹ್ಮಣ್ಯದ ನಿಯಮಗಳು ಜಾರಿಗೆ ಬಂದ ಕಡೆಗೆಲ್ಲ ಅನಿಷ್ಟಗಳು ತಲೆದೂರಿವೆ. ಮಹಿಳೆಯರನ್ನು ವಿವಿಧ ರೂಪದಲ್ಲಿ ಶೋಷಿಸುವ ಕ್ರೂರ ನಿಯಮಗಳು ವೈದಿಕಶಾಹಿಯಲ್ಲಿವೆ. ಇಂಥ ನಿಯಮಗಳಿಂದ ಆಚರಿಸುವ ಮದುವೆಗಳಿಂದ ಪರಿಶಿಷ್ಟ ಜಾತಿ ಸಮುದಾಯ ದೂರವಿದ್ದು ಪ್ರಗತಿಪರವಾಗಿ ಸಾಗಬೇಕಾಗಿದೆ’ ಎಂದು ಹೇಳಿದರು.

ADVERTISEMENT

ಮಹಿಳಾ ನಾಯಕಿ ಶಕುಂತಲಾ ದೇವೇಂದ್ರಗೌಡ ಮಾತನಾಡಿ, ಸರಳ ಮತ್ತು ಅಂತರ್ಜಾತಿ ವಿವಾಹವಾದ ಯಾವುದೇ ಜೋಡಿಗೆ ಹೊಸತರದಲ್ಲಿ ಸ್ವಲ್ಪ ಹಿಂಜರಿಕೆ, ಆತಂಕ ಇರುತ್ತದೆ. ಅದನ್ನು ನಮ್ಮ ಮನೋಬಲದಿಂದ ಎದುರಿಸಬೇಕು. ಬರಬರುತ್ತ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಕುಟುಂಬದ ಮನಸ್ಸುಗಳನ್ನು ಬೆಸೆಯಬೇಕು. ಅಲ್ಲದೇ ತಂದೆ–ತಾಯಿ ಮತ್ತು ಪೋಷಕರನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳಬೇಕು’ ಎಂದರು.

ಉಪನ್ಯಾಸಕರಾದ ಚಂದ್ರಶೇಖರ ಗೊರಬಾಳ, ಶಂಕರ ವಾಲಿಕಾರ, ದಲಿತ ಸಾಹಿತ್ಯ ಪರಿಷತ್‍ ಅಧ್ಯಕ್ಷ ಡಾ.ಹುಸೇನಪ್ಪ ಅಮರಾಪುರ ಮಾತನಾಡಿದರು. ಬಸವಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ವೀರಭದ್ರಪ್ಪ ಕುರಕುಂದಿ ಮಂತ್ರ ಮಾಂಗಲ್ಯದ ಪ್ರತಿಜ್ಞೆಯನ್ನು ಬೋಧಿಸಿದರು. ಶಂಕರ ಗುರಿಕಾರ ನಿರೂಪಿಸಿದರು. ಬಸವರಾಜ ಬಾದರ್ಲಿ ಸಮತಾ ಗೀತೆ ಹಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.