ADVERTISEMENT

ನಿರಂತರ ಮಳೆ: ನೆಲಕ್ಕುರುಳಿದ ಭತ್ತ

ವೈರಸ್‌ ಕಾಟದ ನಡುವೆ ಮತ್ತೊಂದು ಕಂಟಕ; ಇಳುವರಿ ಕುಂಠಿತದ ಆತಂಕ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2025, 7:56 IST
Last Updated 26 ಅಕ್ಟೋಬರ್ 2025, 7:56 IST
ಸಿಂಧನೂರು ತಾಲ್ಲೂಕಿನ ಹೆಡಗಿನಾಳ ಗ್ರಾಮದಲ್ಲಿ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಬಿದ್ದ ಭತ್ತದ ಬೆಳೆಯನ್ನು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಶನಿವಾರ ವೀಕ್ಷಿಸಿದರು
ಸಿಂಧನೂರು ತಾಲ್ಲೂಕಿನ ಹೆಡಗಿನಾಳ ಗ್ರಾಮದಲ್ಲಿ ಮಳೆ ಮತ್ತು ಗಾಳಿಯಿಂದ ನೆಲಕ್ಕೆ ಬಿದ್ದ ಭತ್ತದ ಬೆಳೆಯನ್ನು ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಶನಿವಾರ ವೀಕ್ಷಿಸಿದರು   

ಸಿಂಧನೂರು: ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿದ ಸ್ವಾತಿ ಮಳೆಯಿಂದ ತಾಲ್ಲೂಕಿನ ಹಲವಾರು ಕಡೆಗಳಲ್ಲಿ ತೆನೆ ಕಟ್ಟಿ ನಿಂತ ಭತ್ತದ ಬೆಳೆ ನೆಲಕ್ಕುರುಳಿ ಬಿದ್ದಿದೆ.

ಒಂದು ತಿಂಗಳಿನಿಂದ ವೈರಸ್ ರೋಗ ಬಂದು ಕಾಳು ಕಟ್ಟುವ ಹಂತದಲ್ಲಿದ್ದ ಭತ್ತ ಇದೀಗ ಮಳೆ-ಗಾಳಿಯಿಂದ ನೆಲಕ್ಕುರುಳಿ ಬಿದ್ದು ಅಪಾರ ನಷ್ಟವಾಗಿದೆ. 

‘ಕಳೆದ ವರ್ಷ ತಂದಿದ್ದ ಗೊಬ್ಬರ ಮತ್ತು ಕ್ರಿಮಿನಾಶಕದ ಸಾಲ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಾವತಿಯಾಗಿಲ್ಲ. ಈಗ ವೈರಸ್ ಮತ್ತು ಭತ್ತ ನೆಲಕ್ಕೆ ಬಿದ್ದಿರುವುದರಿಂದ ಎಕರೆಗೆ 20 ಕ್ವಿಂಟಲ್ ಆದರೂ ಇಳುವರಿ ಬರುತ್ತದೆಯೋ ಇಲ್ಲವೋ ಎಂಬ ಆತಂಕ ಎದುರಿಸುತ್ತಿದ್ದೇವೆ’ ಎಂದು ಜಂಗಮರಹಟ್ಟಿಯ ನಿಂಗಪ್ಪ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಭತ್ತದ ಎಲೆಗೆ ಸಣ್ಣ ಪ್ರಮಾಣದಲ್ಲಿ ಚಿಕ್ಕ ಚಿಕ್ಕದಾಗಿ ಕಂದುಬಣ್ಣದ ಚುಕ್ಕೆ ಕಾಣಿಸಕೊಂಡಿತ್ತು. ಆಗ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವು. ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಇದರಿಂದ ರೋಗ ಉಲ್ಭಣಗೊಂಡಿತು. ನಂತರ ಕೃಷಿ ವಿಜ್ಞಾನಿಗಳು ಬಂದು ಅತಿವೃಷ್ಟಿಯಿಂದ ಬೆಳೆಯ ಮೇಲೆ ದುಷ್ಪರಿಣಾಮ ಬೀರಿದೆ ಮತ್ತು ಕಳಪೆ ಮಟ್ಟದ ಬೀಜದಿಂದಲೂ ಈ ರೀತಿ ವೈರಸ್ ಬರುವ ಸಾಧ್ಯತೆ ಇದೆ ಎಂದು ಹೇಳಿ ಕೈ ಚೆಲ್ಲಿದರು. ಹೀಗಾದರೆ ರೈತರಿಗೆ ಯಾರು ಸಲಹೆ ಕೊಡಬೇಕು, ಬೆಳೆಯನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂಬುದೇ ಜಟಿಲ ಸಮಸ್ಯೆಯಾಗಿದೆ’ ಎಂದು ಮಲ್ಕಾಪುರ ಗ್ರಾಮದ ಮಲ್ಲಪ್ಪ ಸರ್ಕಾರಿ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಭತ್ತಕ್ಕೆ ತಗುಲಿದ ವೈರಸ್ ರೋಗ ಮತ್ತು ಮಳೆಯಿಂದ ಕೈಗೆ ಬಂದ ಬೆಳೆ ನೆಲಕ್ಕುರಳಿರಿವುದರಿಂದ ಸರ್ಕಾರ ತಕ್ಷಣ ರೈತರ ನೆರವಿಗೆ ಧಾವಿಸಬೇಕು ಸೂಕ್ತ ಪರಿಹಾರ ಕೊಡಬೇಕು. ಇಲ್ಲದಿದ್ದರೆ ಅನಿವಾರ್ಯವಾಗಿ ಬೀದಿಗಿಳಿದು ಹೋರಾಟ ಮಾಡಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಎಚ್ಚರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.