ಸಿಂಧನೂರು: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ಶೂ ಎಸೆಯಲು ಯತ್ನಿಸಿದ ರಾಕೇಶ್ ಕಿಶೋರ್‌ನನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿ ಸಂವಿಧಾನ ರಕ್ಷಣಾ ಹೋರಾಟ ಸಮಿತಿ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಸ್ಥಳೀಯ ಎಪಿಎಂಸಿ ಗಣೇಶ ದೇವಸ್ಥಾನ ಬಳಿ ಚಿಂತಕ ಶಿವಸುಂದರ ಹಾಗೂ ಸಾಹಿತಿ ನರಸಿಂಹಪ್ಪ ಜನತಾ ಕಾಲೊನಿ ನೀಲಿ ಧ್ವಜ ಬೀಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಮೆರವಣಿಗೆಯು ಪ್ರಮುಖ ವೃತ್ತಗಳಲ್ಲಿ ಸಂಚರಿಸಿ, ಮಹಾತ್ಮಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದ ಪ್ರತಿಭಟನಕಾರರು, ದುಷ್ಕರ್ಮಿ ರಾಕೇಶ್ ಕಿಶೋರ್ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮೆರವಣಿಗೆಯುದ್ದಕ್ಕೂ ಅಂಬೇಡ್ಕರ್ ಭಾವಚಿತ್ರ, ಸಂವಿಧಾನ ಪೀಠಿಕೆ, ನೀಲಿ ಧ್ವಜಗಳು ರಾರಾಜಿಸಿದವು.
ಚಿಂತಕ ಶಿವಸುಂದರ ಮಾತನಾಡಿ, ‘ಜಾತಿವಾದಿ ಮತ್ತು ಮನುಷ್ಯತ್ವ ವಿರೋಧಿ ಮನಸ್ಥಿತಿಯ ವ್ಯಕ್ತಿಯಿಂದ ನ್ಯಾಯಮೂರ್ತಿ ಮೇಲೆ ದಾಳಿ ನಡೆದಿರುವುದು ಅತ್ಯಂತ ಆಘಾತಕಾರಿ ಸಂಗತಿ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಹುನ್ನಾರ ಅದರ ಹಿಂದಿದೆ. ಇದೇ ದಾಳಿಯನ್ನು ರಾಕೇಶ್ ಕಿಶೋರ್ ಬದಲಿಗೆ ರಶೀದ್ ಖಾನ್ ಮಾಡಿದ್ದರೆ, ಸವರ್ಣಿಯ ನ್ಯಾಯಮೂರ್ತಿ ಚಂದ್ರಚೂಡ್ ಮೇಲೆ ನಡೆದಿದ್ದರೆ ಇಷ್ಟೊತ್ತಿಗೆ ದೇಶ ಹೊತ್ತಿ ಉರಿಯುತ್ತಿತ್ತು’ ಎಂದು ಹೇಳಿದರು.
ಎಸ್‍ಐಒ ರಾಜ್ಯ ಘಟಕದ ಅಧ್ಯಕ್ಷ ಜಿಶಾನ ಸಿದ್ದಿಕಿ, ಮಕ್ಕಳ ತಜ್ಞ ಡಾ.ಕೆ.ಶಿವರಾಜ, ಸಂಚಾಲಕ ಚಂದ್ರಶೇಖರ ಗೊರಬಾಳ, ಶೇಖರಪ್ಪ ಧುಮತಿ ವಕೀಲ, ಗ್ರಾಮೀಣ ಕೂಲಿಕಾರರ ಸಂಘದ ಸಂಚಾಲಕಿ ವಿರೂಪಮ್ಮ, ಛಲವಾದಿ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಮಣ್ಣ ಗೋನವಾರ, ಜಾತಿ ನಿರ್ಮೂಲನಾ ಚಳವಳಿಯ ಅಧ್ಯಕ್ಷ ಎಚ್.ಎನ್.ಬಡಿಗೇರ್ ಮಾತನಾಡಿದರು.
ಎಂ.ಗಂಗಾಧರ್ ಹಾಗೂ ಬಸವರಾಜ ಬಾದರ್ಲಿ ಸಂಗಡಿಗರು ಅಂಬೇಡ್ಕರ್ ಗೀತೆಗಳನ್ನು ಹಾಡಿದರು.
ಮುಖಂಡರಾದ ಡಿ.ಎಚ್.ಪೂಜಾರ, ಬಾಷುಮಿಯ, ರುದ್ರಪ್ಪ ಪಗಡದಿನ್ನಿ, ಕರೇಗೌಡ ಕುರುಕುಂದಿ, ಬಾಬರ್‍ಪಾಷಾ, ಕೆ.ಜಿಲಾನಿಪಾಷ, ಟಿ.ಹುಸೇನ್‍ಸಾಬ, ಮರಿಯಪ್ಪ ಜಾಲಿಹಾಳ, ಆರ್.ಅಂಬ್ರೋಸ್, ಹಾರೂನ್ ಪಾಷಾ ಜಾಗೀರದಾರ, ಬಸವಂತರಾಗೌಡ ಕಲ್ಲೂರು, ನಾಗರಾಜ ಪೂಜಾರ, ಮಂಜುನಾಥ ಗಾಂಧಿನಗರ, ನಿರುಪಾದೆಪ್ಪ ಗುಡಿಹಾಳ ವಕೀಲ, ಎಚ್.ಎಫ್. ಮಸ್ಕಿ, ಹನುಮಂತಪ್ಪ ಗೋಮರ್ಸಿ, ಅಮೀನ್‍ಪಾಷಾ ದಿದ್ದಿಗಿ, ನಾರಾಯಣ ಬೆಳಗುರ್ಕಿ, ಅಮರೇಶ ಗಿರಿಜಾಲಿ, ಬಾಬರ್ ಬೇಗ, ವೀರಭದ್ರಗೌಡ ಅಮರಾಪುರ ಹಾಜರಿದ್ದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಜೈ ಭೀಮ್ ಎಂದು ಅಧಿಕಾರ ಸ್ವೀಕರಿಸಿದ ಮೊದಲಿಗರು. ಅದನ್ನು ಸನಾತನವಾದಿಗಳು ಸಹಿಸುತ್ತಿಲ್ಲ. ಪ್ರಸ್ತುತ ಜೈ ಭೀಮ್ ಮತ್ತು ಜೈ ಶ್ರೀರಾಮ ನಡುವೆ ಕದನ ನಡೆಯುತ್ತಿದ್ದು ಹಂಚಿ ಹೋಗಿರುವ ನಾವೆಲ್ಲರೂ ಸಂಘಟಿತ ಹೋರಾಟ ನಡೆಸಬೇಕಾಗಿದೆಶಿವಸುಂದರ, ಚಿಂತಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.