ADVERTISEMENT

ಸಿಂಧನೂರು: ಏ.10 ರವರೆಗೆ ನೀರು ಬಿಟ್ಟರೂ ಪೂರ್ಣ ಪ್ರಮಾಣದ ಬೆಳೆ ಸಾಧ್ಯವಿಲ್ಲ!

ಕೆಳಭಾಗದ ರೈತರಿಗೆ ನೀರು ಸಿಗುವುದು ಕಷ್ಟ | ಶೇ.20 ರಷ್ಟು ಭತ್ತ ನಷ್ಟವಾಗುವ ಆತಂಕ

ಡಿ.ಎಚ್.ಕಂಬಳಿ
Published 5 ಏಪ್ರಿಲ್ 2025, 5:47 IST
Last Updated 5 ಏಪ್ರಿಲ್ 2025, 5:47 IST
ಸಿಂಧನೂರು ತಾಲ್ಲೂಕಿನ ಬರ್ಮಾಕ್ಯಾಂಪ್‌ ರೈತ ಮಲ್ಲಯ್ಯ ಬುಡ್ಡಪ್ಪ ಅವರ ಜಮೀನಿನಲ್ಲಿ ತೆನೆ ಕಟ್ಟುತ್ತಿರುವ ಭತ್ತ
ಸಿಂಧನೂರು ತಾಲ್ಲೂಕಿನ ಬರ್ಮಾಕ್ಯಾಂಪ್‌ ರೈತ ಮಲ್ಲಯ್ಯ ಬುಡ್ಡಪ್ಪ ಅವರ ಜಮೀನಿನಲ್ಲಿ ತೆನೆ ಕಟ್ಟುತ್ತಿರುವ ಭತ್ತ   

ಸಿಂಧನೂರು: ತುಂಗಭದ್ರಾ ಜಲಾಶಯದಿಂದ ಎಡದಂಡೆ ನಾಲೆಗೆ ಏ.10 ರವರೆಗೆ ನೀರು ಬಿಟ್ಟರೂ ಪೂರ್ಣಪ್ರಮಾಣದಲ್ಲಿ ಭತ್ತದ ಬೆಳೆ ಕೈಗೆ ಬರುವುದಿಲ್ಲ. ಇದರಂತೆ ಸಹಸ್ರಾರು ಎಕರೆಯಲ್ಲಿ ಬೆಳೆದ ಭತ್ತ ಒಣಗಿ ನಷ್ಟವಾಗುತ್ತದೆ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ‌

‘54ನೇ ವಿತರಣಾ ಕಾಲುವೆ ವ್ಯಾಪ್ತಿಯ ಪುನರ್ವಸತಿ ಕ್ಯಾಂಪ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ 25 ಎಕರೆ ಭತ್ತ ನಾಟಿ ಮಾಡಿದ್ದೆ. ಆದರೆ ಈ ಹಂಗಾಮಿನಲ್ಲಿ ಕೇವಲ ಒಂದು ಎಕರೆಯಲ್ಲಿ ಮಾತ್ರ ನಾಟಿ ಮಾಡಿದ್ದೇನೆ. ಆದರೂ ಬೆಳೆ ಕೈಗೆ ಬರುತ್ತದೆನ್ನುವ ಗ್ಯಾರಂಟಿಯೂ ಇಲ್ಲ’ ಎನ್ನುವುದು ಬರ್ಮಾಕ್ಯಾಂಪಿನ ಬಸವರಾಜ ಅವರ ವೇದನೆ.

ಸಿಂಧನೂರು ತಾಲ್ಲೂಕಿನಲ್ಲಿ 66,662 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಮುಂಗಾರು ಹಂಗಾಮಿನಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿತ್ತು. ಈ ಹಂಗಾಮಿನಲ್ಲಿ 52,036 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ತಿಳಿಸಿದ್ದಾರೆ.

ADVERTISEMENT

ಕಳೆದ ಐಸಿಸಿ ಸಭೆಯಲ್ಲಿ ಮಾ.31 ರವರೆಗೆ ಎಡದಂಡೆ ನಾಲೆಗೆ ನೀರು ಹರಿಸಲಾಗವುದು ಎಂದು ತೀರ್ಮಾನಿಸಲಾಗಿತ್ತು. ನಂತರ ಎರಡನೇ ಬೆಳೆಗೆ ನೀರಿನ ಅವಶ್ಯಕತೆ ಇದೆ. ಹೀಗಾಗಿ ನೀರು ಹರಿಸುವಂತೆ ರೈತ ಸಂಘಗಳು ಹೋರಾಟ ನಡೆಸಿದ್ದು ಮತ್ತು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ಹಾಕಿದ್ದರಿಂದ ಮತ್ತೆ ಬೆಂಗಳೂರಿನಲ್ಲಿ ಐಸಿಸಿ ಸಭೆ ನಡೆಸಿ ಏ.10 ರವರೆಗೆ ಕುಡಿಯಲು ಹಾಗೂ ಕೃಷಿ ಚಟುವಟಿಗೆ ನೀರು ಹರಿಸಲಾಗುವುದು ಎಂದು ಐಸಿಸಿ ಅಧ್ಯಕ್ಷ ಶಿವರಾಜ ತಂಗಡಗಿ ಪ್ರಕಟಿಸಿದ್ದಾರೆ. ಆದರೂ ಹಿಂಗಾರು ಭತ್ತಕ್ಕೆ ಸಮರ್ಪಕವಾಗಿ ನೀರು ಲಭ್ಯವಾಗುತ್ತದೆಯೋ ಇಲ್ಲವೋ ಎಂಬ ಆತಂಕ ರೈತರನ್ನು ಕಾಡುತ್ತಿದೆ.

ಮುಂಗಾರು ಕೊಯ್ಲು ಆರಂಭವಾಗುವ ಸಮಯದಲ್ಲಿ ಕಣೆನೊಣದ ಹಾವಳಿ ಉಂಟಾಗಿದ್ದರಿಂದ ಕೆಲ ರೈತರು ಹಿಂಗಾರು ಭತ್ತ ನಾಟಿ ಮಾಡಲು ಹಿಂಜರಿದು ವಿಳಂಬವಾಗಿ ಭತ್ತ ನಾಟಿ ಮಾಡಿದ್ದಾರೆ. ಇನ್ನೂ ಕೆಲವರು ಕೆಳಭಾಗಕ್ಕೆ ನೀರು ಲಭಿಸುತ್ತದೆಯೋ ಇಲ್ಲವೋ ಎಂಬ ಅನುಮಾನದಿಂದಲೂ ಭತ್ತ ನಾಟಿ ಮಾಡಲು ತಡ ಮಾಡಿದ್ದಾರೆ. ಅಂತಹ ಬೆಳೆಗಳು ಇದೀಗ ತೆನೆ ಕಟ್ಟುವ ಹಂತದಲ್ಲಿದ್ದು, ಸಮರ್ಪಕವಾಗಿ ನೀರು ಸಿಗದೆ ನಷ್ಟವಾಗುವ ಸಂಭವವಿದೆ ಎಂಬುದು ಅನುಭವಿ ರೈತರ ಅಭಿಪ್ರಾಯ. 

ಏ.10 ರವರೆಗೆ ನೀರು ಪೂರೈಕೆಯಾದರೆ, ಸಿಂಧನೂರು ತಾಲ್ಲೂಕಿನಲ್ಲಿ ಶೇ.20 ರಷ್ಟು ಭತ್ತದ ಬೆಳೆ ನಷ್ಟವಾಗಬಹುದು. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ನಾಲೆಗೆ ನೀರು ಹರಿಸುವ ಮೂಲಕ ಕೆಳಭಾಗದ ರೈತರ ಬೆಳೆಗಳನ್ನು ಉಳಿಸಲು ಮುಂದಾಗಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಒತ್ತಾಯಿಸಿದ್ದಾರೆ.

ಯಾವ ಪ್ರದೇಶದಲ್ಲಿ ಆತಂಕ?

ಸಿಂಧನೂರು ಸೀಮೆ ಸೇರಿದಂತೆ ನಾಲ್ಕುಮೈಲ್ ಕ್ಯಾಂಪ್ ಮೂರುಮೈಲ್ ಕ್ಯಾಂಪ್ ಅರಗಿನಮರ ಕ್ಯಾಂಪ್ ಜವಳಗೇರಾ ಬರ್ಮಾಕ್ಯಾಂಪ್ ದಿದ್ದಿಗಿ ರಾಮತ್ನಾಳ ಯಾಪಲಪರ್ವಿ ಬನ್ನಿಗನೂರು ಉದ್ಬಾಳ ಗೋಮರ್ಸಿ ಮತ್ತಿತರ ಗ್ರಾಮಗಳು ವಿವಿಧ ಕಾಲುವೆಗಳ ಕೆಳಭಾಗದಲ್ಲಿರುವುದರಿಂದ ಆ ಪ್ರದೇಶಗಳಲ್ಲಿ ಬೆಳೆದ ಭತ್ತಕ್ಕೆ ನೀರು ಸಿಗುವ ಸಾಧ್ಯತೆಗಳು ಕಡಿಮೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ ಅವರು ಎಡದಂಡೆ ನಾಲೆಯ ರೈತರ ಪರಿಸ್ಥಿತಿ ಗಮನಿಸಿ ಭದ್ರಾ ಜಲಾಶಯದಿಂದ ಟಿಬಿ ಡ್ಯಾಂಗೆ 2 ಟಿಎಂಸಿ ಅಡಿ ನೀರು ಬಿಡಿಸಿದ್ದಾರೆ. ಇದರಿಂದ ಈ ಭಾಗದ ರೈತರಿಗೆ ನೀರಿನ ಸಮಸ್ಯೆ ಆಗುವುದಿಲ್ಲ
ಹಂಪನಗೌಡ ಬಾದರ್ಲಿ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.