
ಸಿಂಧನೂರು: ಇಲ್ಲಿನ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ನೂರು ಹಾಸಿಗೆಯ ಸಾಮಥ್ರ್ಯ ಹೊಂದಿದ್ದು ಪ್ರತಿನಿತ್ಯ ಸುಮಾರು 450 ಒಳ ಮತ್ತು ಹೊರ ರೋಗಿಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಯಾವ ರೋಗಕ್ಕೂ ಔಷಧಿ ಲಭ್ಯ ಇಲ್ಲದಿರುವುದರಿಂದ ವೈದ್ಯಾಧಿಕಾರಿಗಳಿಗೆ ನಿತ್ಯ ಶಾಪ ಹಾಕುತ್ತಿರುವುದು ಮಾತ್ರ ಸಾಮಾನ್ಯವಾಗಿದೆ.
‘ಮುಲಾಮು ಬರೆದುಕೊಟ್ಟರೆ ಫಾರ್ಮಸಿ ಅಧಿಕಾರಿಗಳು ತಮ್ಮಲ್ಲಿ ಸಂಗ್ರಹವಿಲ್ಲ ಎಂದು ವಾಪಾಸ್ ಕಳುಹಿಸುತ್ತಾರೆ. ಚರ್ಮ ಕಾಯಿಲೆಗಳಿಗೆ ಮುಲಾಮು ಲೇಪಿಸದಿದ್ದರೆ ವಾಸಿ ಆಗುವುದಿಲ್ಲ. ರೋಗಿಗಳಿಗೆ ಮುಲಾಮು ಹಚ್ಚುವಂತೆ ಸಲಹೆ ನೀಡಿ ಹೊರಗಡೆ ಬರೆದು ಕೊಟ್ಟರೆ ಸರ್ಕಾರಿ ಆಸ್ಪತ್ರೆ ಇರುವುದೇಕೆ, ಔಷಧ ಇಲ್ಲವೆಂದು ಬರೆದು ಕೊಡಿ ಎಂದು ರೋಗಿಗಳು ತಗಾದೆ ತೆಗೆಯುತ್ತಾರೆ. ಪ್ರತಿದಿನ ರೋಗಿಗಳೊಂದಿಗೆ ಜಗಳ ಆಡುವುದೇ ಕೆಲಸವಾಗಿದೆ’ ಎಂದು ಚರ್ಮ ರೋಗ ತಜ್ಞ ಡಾ.ಗಂಗಾಧರ್ ಬುರಡೆ ಬೇಸರ ವ್ಯಕ್ತಪಡಿಸುತ್ತಾರೆ.
ಹೃದಯರೋಗ, ಎಲುಬು ಮತ್ತು ಕೀಲು, ಕಿವಿ, ಗಂಟಲು, ಮೂಗು ರೋಗಗಳ ವೈದ್ಯರ ಸ್ಥಿತಿಯೂ ಇದೇ ರೀತಿಯಾಗಿದೆ.
‘ರೋಗಿಗಳು ಕಾಯಿಲೆಯ ಸಮಸ್ಯೆ ಇಟ್ಟುಕೊಂಡು ಆಸ್ಪತ್ರೆಗೆ ಬರುತ್ತಾರೆ. ಅವರಿಗೆ ಕೇವಲ ಬಾಯಿ ಮಾತಿನ ಉಪಚಾರ ಹೇಳಿದರೆ ರೋಗ ವಾಸಿಯಾಗುವುದಿಲ್ಲ. ಸೂಕ್ತ ಔಷಧಿ ಕೊಡಬೇಕಾಗುತ್ತದೆ. ಆದರೆ ಆಸ್ಪತ್ರೆಯಲ್ಲಿ ಔಷಧಿಯೇ ಇಲ್ಲದಂತಾಗಿದೆ. ಹೀಗಾದರೆ ನಾವು ರೋಗಿಗಳ ಸಮಸ್ಯೆಯನ್ನು ಬಗೆಹರಿಸಲು ಹೇಗೆ ಸಾಧ್ಯ’ ಎಂದು ಹೆಸರೇಳಲು ಇಚ್ಛಿಸದ ವೈದ್ಯರೊಬ್ಬರು ಅಸಹಾಯಕತೆಯನ್ನು ತೋರಿದರು.
‘ಮೈಯೆಲ್ಲ ತುರಿಕೆ ಆಗುತ್ತಿರುವ ಕಾರಣ ಸರ್ಕಾರಿ ಆಸ್ಪತ್ರೆಯ ಚರ್ಮ ರೋಗದ ವೈದ್ಯರ ಬಳಿ ಬಂದು ತೋರಿಸಿದ್ದರಿಂದ ಮುಲಾಮು ಬರೆದುಕೊಟ್ಟರು. ಆದರೆ ಔಷಧಾಲಯದಲ್ಲಿ ಮುಲಾಮು ಖಾಲಿಯಾಗಿದೆಂದು ವಾಪಸ್ ಕಳುಹಿಸಿದರು’ ಎಂದು ಜನತಾಕಾಲೊನಿಯ ಯಂಕಪ್ಪ ದೂರಿದರು.
‘ನಾನು ಹಮಾಲಿ ಕೆಲಸ ಮಾಡಿ ದಿನಾಲು₹300 ರಿಂದ ₹400 ದುಡಿತೀನಿ. ಇದರಲ್ಲಿ ಜೀವನ ನಡಿಸೋದೇ ಕಷ್ಟ. ಇಂತ ಸಂದರ್ಭದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಮತ್ತು ಔಷಧ ದೊರೆಯುತ್ತದೆ ಎಂದು ತೋರಿಸಿಕೊಳ್ಳಲು ಬಂದರೆ ಆಸ್ಪತ್ರೆಯಲ್ಲಿ ಗುಳಿಗೆ ಇಲ್ಲ ಎನ್ನುತ್ತಾರೆ. ನಾವು ಕೇಳಿದರೆ ಔಷಧ ಇಲ್ಲ ಎನ್ನುತ್ತಾರೆ. ಆದರೆ ಹಲವಾರು ಡಾಕ್ಟರ್ ಸಾಯಂಕಾಲ ಸಣ್ಣ ಬ್ಯಾಗ್‍ನಲ್ಲಿ ಔಷಧಗಳನ್ನು ತುಂಬಿಕೊಂಡು ಹೋಗುತ್ತಾರೆ’ ಎಂದು ಮಹಿಬೂಬಿಯಾ ಕಾಲೊನಿಯ ಕರಿಬಸಪ್ಪ ಸಂಕನೂರು ಆರೋಪಿಸಿದರು.
ಸಮಸ್ಯೆಗಳ ಆಗರ: ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಗಳ ಕೊರತೆಯಷ್ಟೇ ಅಲ್ಲ, ವೈದ್ಯರು ಹಾಗೂ ಸಿಬ್ಬಂದಿಗೂ ಶೌಚಾಲಯಗಳು ಇಲ್ಲ. ಶುದ್ಧ ಕುಡಿಯುವ ನೀರಿಗಾಗಿ ರೋಗಿಗಳು ಮತ್ತು ಅವರ ಸಂಬಂಧಿಕರು ಹೋಟೆಲ್‍ಗಳಿಗೆ ಅಲೆದಾಡಬೇಕಾಗಿದೆ. ಆಸ್ಪತ್ರೆಯ ಆವರಣದಲ್ಲಿರುವ ಆರ್‌ಒ ಪ್ಲಾಂಟ್ ಕೆಟ್ಟು ವರ್ಷಗಳೇ ಉರುಳಿವೆ. ಸೊಳ್ಳೆ ಪರದೆಗಳು ಇಲ್ಲ. ಕೆಲ ಪ್ಯಾನ್‍ಗಳು ಕೆಟ್ಟು ನಿಂತಿವೆ. ಸ್ವಚ್ಛಯಂತೂ ಮಾಯವಾಗಿದ್ದು, ಎಲ್ಲೆಂದರಲ್ಲಿ ಗುಟ್ಕಾ ತಿಂದು ಊಗುಳಲಾಗಿದೆ.
ಇಷ್ಟೆಲ್ಲ ಸಮಸ್ಯೆಗಳಿರುವ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದರೆ ಮತ್ತಷ್ಟು ರೋಗ್ಯಕ್ಕೆ ತುತ್ತಾಗಬೇಕಾಗುತ್ತದೆ ಎಂಬ ಭಯ ಸಾರ್ವಜನಿಕರನ್ನು ಕಾಡುತ್ತಿದೆ. ಆದ್ದರಿಂದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಆಸ್ಪತ್ರೆಯ ಅವ್ಯವಸ್ಥೆ ಸುಧಾರಣೆ ಬಗ್ಗೆ ಕ್ರಮ ವಹಿಸಬೇಕು ಎಂದು ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಬಾಷುಮಿಯಾ ಹಾಗೂ ಮನುಜಮತ ಬಳಗದ ಪ್ರಧಾನ ಕಾರ್ಯದರ್ಶಿ ಬಸವರಾಜ ಬಾದರ್ಲಿ ಒತ್ತಾಯಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಟ್ರಾಮ್ ಕೇರ್ ವ್ಯವಸ್ಥೆ ಕೊನೆ ಹಂತಕ್ಕೆ ತಲುಪಿದೆ. ಇದು ಪೂರ್ಣಗೊಂಡರೆ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ. ಈಗಲೂ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ.- ಡಾ.ಸುರೇಶಗೌಡ, ಮುಖ್ಯ ವೈದ್ಯಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.