ADVERTISEMENT

ಸಿಂಧನೂರು| ಮುಂಗಾರು ಜೋಳ ನೋಂದಣಿ, ಖರೀದಿ ಕೇಂದ್ರ ತಕ್ಷಣವೇ ಆರಂಭಿಸಿ: ರೈತರ ಆಗ್ರಹ

​ಪ್ರಜಾವಾಣಿ ವಾರ್ತೆ
Published 21 ಜನವರಿ 2026, 4:40 IST
Last Updated 21 ಜನವರಿ 2026, 4:40 IST
ಸಿಂಧನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು
ಸಿಂಧನೂರಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು   

ಸಿಂಧನೂರು: ಮುಂಗಾರು ಜೋಳ ನೋಂದಣಿ ಮತ್ತು ಜೋಳ ಖರೀದಿ ಕೇಂದ್ರವನ್ನು ತಕ್ಷಣವೇ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಆರಂಭಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲ್ಲೂಕು ಘಟಕ ಮಂಗಳವಾರ ಸ್ಥಳೀಯ ಮಿನಿವಿಧಾನಸೌಧ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅರುಣ್ ಎಚ್.ದೇಸಾಯಿ ಅವರಿಗೆ ಮನವಿ ಪತ್ರ ಸಲ್ಲಿಸಿತು.

ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಬಸವರಾಜ ಗೋಡಿಹಾಳ ಮಾತನಾಡಿ, ‘ರಾಯಚೂರು ಜಿಲ್ಲೆಯಲ್ಲಿ ಕೆಳಭಾಗದ ರೈತರು ಅತಿಹೆಚ್ಚು ಜೋಳದ ಬೆಳೆಯ ಅವಲಂಬಿತರಾಗಿದ್ದು, ಈ ವರ್ಷ ಸಿಂಧನೂರು, ಮಾನ್ವಿ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಮೀಕ್ಷೆಯಾಗಿದೆ. ಅನೇಕ ಹೋರಾಟದ ಫಲವಾಗಿ ನೋಂದಣಿ ಕಾರ್ಯ ಪ್ರಾರಂಭಿಸಿ ಅಧಿಕಾರಿಗಳು ಎರಡೇ ದಿನದಲ್ಲಿ ಮುಕ್ತಾಯ ಮಾಡಿರುವುದು ರೈತರಿಗೆ ಮಾಡಿದ ದೊಡ್ಡ ದ್ರೋಹವಾಗಿದೆ. ತಾಲ್ಲೂಕಿನಲ್ಲಿ 50 ಪ್ರತಿಶತ ರೈತರು ನೋಂದಣಿಯಿಂದ ವಂಚಿತರಾಗಿದ್ದಾರೆ. ಕೂಡಲೇ ಮುಂಗಾರು ಮರು ನೋಂದಣಿ ಪ್ರಕ್ರಿಯೆ ಆರಂಭಿಸಿ ರೈತರಿಗೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಬೇರೆ ಬೇರೆ ತಾಲ್ಲೂಕಿನ ರೈತರ ನೋಂದಣಿ ಸಿಂಧನೂರಿನಲ್ಲಿ ಅತಿಹೆಚ್ಚು ಆಗಿದ್ದು, ಅದನ್ನು ಸಂಪೂರ್ಣವಾಗಿ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಆಯಾ ತಾಲ್ಲೂಕಿನ ರೈತರು ಹೋಬಳಿ ಮಟ್ಟದಲ್ಲಿ ನೋಂದಣಿ ಮಾಡಿಸಬೇಕು. ಜೊತೆಗೆ ಖರೀದಿ ಕೇಂದ್ರ ಆರಂಭಿಸಬೇಕು. ನಿರ್ಲಕ್ಷ್ಯ ವಹಿಸಿದರೆ ರೈತರೊಂದಿಗೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ADVERTISEMENT

ತಾಲ್ಲೂಕು ಘಟಕದ ಅಧ್ಯಕ್ಷ ನಾಗರಾಜ ಬಿಂಗಿ, ಉಪಾಧ್ಯಕ್ಷ ಯಮನಪ್ಪ ಪಗಡದಿನ್ನಿ, ಕಾರ್ಯಾಧ್ಯಕ್ಷ ನಿರುಪಾದೆಪ್ಪ ಅಡ್ಡಿ, ನಗರ ಘಟಕದ ಅಧ್ಯಕ್ಷ ರವಿ ಬಸಾಪುರ ಇಜೆ, ಉಪಾಧ್ಯಕ್ಷ ರಾಮು ನಾಯಕ ಪುಲದಿನ್ನಿ, ವಿದ್ಯಾರ್ಥಿ ಘಟಕದ ಉಪಾಧ್ಯಕ್ಷ ಸಿದ್ದನಗೌಡ ಗೋನವಾರ, ಸದಸ್ಯರಾದ ದುರುಗಪ್ಪ ಸಂಗಾಪುರ, ಹನುಮಂತಪ್ಪ ಪುಲದಿನ್ನಿ, ಮಾಳಪ್ಪ ಪೂಜಾರಿ ಸುಕಾಲಪೇಟೆ, ಹಿರೇಲಿಂಗಪ್ಪ ಹಂಚಿನಾಳ, ನಿಂಗಪ್ಪ ಬಿಂಗಿ ಸುಕಾಲಪೇಟೆ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.