ADVERTISEMENT

ಸಿಂಧನೂರು | 'ಸ್ತ್ರೀ ಚೇತನ ಅಭಿಯಾನ: ₹ 370 ಸಮಾನ ಕೂಲಿ'

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 8:04 IST
Last Updated 16 ಡಿಸೆಂಬರ್ 2025, 8:04 IST
ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ರೋಜ್‍ಗಾರ ದಿವಸ ಆಚರಣೆಯಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಥಾಮಸ್ ಮಾತನಾಡಿದರು
ಸಿಂಧನೂರು ತಾಲ್ಲೂಕಿನ ಅಲಬನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕನ್ನಾರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ಸೋಮವಾರ ಹಮ್ಮಿಕೊಂಡಿದ್ದ ರೋಜ್‍ಗಾರ ದಿವಸ ಆಚರಣೆಯಲ್ಲಿ ತಾಲ್ಲೂಕು ಐಇಸಿ ಸಂಯೋಜಕ ಥಾಮಸ್ ಮಾತನಾಡಿದರು   

ಸಿಂಧನೂರು: ತಾಲ್ಲೂಕಿನ ಅಲಬನೂರು ಗ್ರಾ.ಪಂ ವ್ಯಾಪ್ತಿಯ ಕನ್ನಾರಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ನರೇಗಾ ಯೋಜನೆಯ ಕೂಲಿ ಕಾರ್ಮಿಕರೊಂದಿಗೆ ರೋಜ್‍ಗಾರ ದಿವಸ್‌ ಆಚರಿಸಿ, ಎನ್‍ಎಂಎಂಎಸ್ ತಂತ್ರಾಂಶದಲ್ಲಿ ಕಡ್ಡಾಯವಾಗಿ ಎರಡು ಬಾರಿ ಹಾಜರಾತಿ ದಾಖಲಿಸುವ ಕುರಿತು ಮಾಹಿತಿ ನೀಡಲಾಯಿತು.

ತಾಲ್ಲೂಕು ಐಇಸಿ ಸಂಯೋಜಕ ಥಾಮಸ್ ಮಾತನಾಡಿ, ‘ನರೇಗಾ ಯೋಜನೆಯಡಿ ದಿನದ ಕೂಲಿ ದರವನ್ನು ₹ 370ಕ್ಕೆ ಹೆಚ್ಚಳ ಮಾಡಿ ಆದೇಶ ಹೊರಡಿಸಿ ಸರ್ಕಾರ ಕೂಲಿಕಾರರಿಗೆ ಸಿಹಿ ಸುದ್ದಿ ನೀಡಿದೆ. ಸ್ತ್ರೀ ಚೇತನ ಅಭಿಯಾನದಡಿ ಗಂಡು ಮತ್ತು ಹೆಣ್ಣಿಗೆ ₹ 370 ಸಮಾನ ಕೂಲಿಯಿದ್ದು, ಗ್ರಾಮೀಣ ಪ್ರದೇಶದ ಪ್ರತಿ ಅರ್ಹ ಕುಟುಂಬಕ್ಕೂ ಒಂದು ಅರ್ಥಿಕ ವರ್ಷದಲ್ಲಿ 100 ದಿನ ಕೆಲಸ ಕೊಡಲಾಗುತ್ತದೆ. ನೂರು ದಿನ ಕೆಲಸ ಮಾಡಿದರೆ ₹ 37 ಸಾವಿರ ಕೂಲಿ ಹಣ ಪಡೆದುಕೊಳ್ಳಬಹುದಾಗಿದೆ’ ಎಂದು ಹೇಳಿದರು.

‘ಸಾಮಾಜಿಕ ಭದ್ರತೆ ಕಲ್ಪಿಸಲು ಯೋಜನೆಯಡಿ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರು ಹಾಗೂ ಗರ್ಭಿಣಿಯರಿಗೆ ಶೇ 50ರಷ್ಟು ಕೆಲಸ ಮಾಡಿದರೂ ಪೂರ್ತಿ ಪ್ರಮಾಣದ ಕೂಲಿ ನೀಡಲಾಗುತ್ತದೆ. 3 ವರ್ಷದೊಳಗಿನ ಮಕ್ಕಳನ್ನು ಶಿಶು ಪಾಲನಾ ಕೇಂದ್ರದಲ್ಲಿ ಬಿಟ್ಟು ಬರಬೇಕು. 18 ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಕರೆದುಕೊಂಡು ಬರಬಾರದು’ ಎಂದು ಹೇಳಿದರು.

ADVERTISEMENT

ಇ-ಕೆವೈಸಿ ಮಾಹಿತಿ ಪಡೆದು ಶೇ 93ರಷ್ಟು ಈಗಾಗಲೇ ಪ್ರಗತಿ ಸಾಧಿಸಿದ್ದು, ಉಳಿದಂತೆ ತಮ್ಮ ಗುರಿಗೆ ಅನುಗುಣವಾಗಿ ಪ್ರಗತಿ ಸಾಧಿಸಿ, ಬಾಕಿ ಉಳಿಯಲು ಕಾರಣಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ವರದಿ ನೀಡಬೇಕು. ಜನರಿಗೆ ಕೆಲಸ ಮುಗಿದ ಕೂಡಲೇ ನಮೂನೆ 6ನ್ನು ಕೊಡಿ, ಮತ್ತೆ ಕೆಲಸ ಕೊಡುತ್ತೇವೆ’ ಎಂದರು.

ಪ್ರಧಾನ ಮಂತ್ರಿ ಭೀಮಾ ಸುರಕ್ಷಾ ಯೋಜನೆ ಮತ್ತು ಪ್ರಧಾನ ಮಂತ್ರಿ ಜೀವನಜ್ಯೋತಿ ಯೋಜನೆ ಬಗ್ಗೆ ಕೂಲಿ ಕಾರ್ಮಿಕರಿಗೆ ಮಾಹಿತಿ ನೀಡಿದರು. ರಾಜೀವ್ ಗಾಂಧಿ ಫೆಲೋ ಧನ್ಯಪ್ರಭು, ಗ್ರಾ.ಪಂ ಡಿಇಒ ಶರಣಪ್ಪ ಸೇರಿದಂತೆ 317 ಕೂಲಿಕಾರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.