ADVERTISEMENT

ಸಿಂಧನೂರು | ಬಿರುಗಾಳಿ, ಮಳೆಗೆ ನೆಲಕಚ್ಚಿದ ಭತ್ತ: ರೈತರ ಅಳಲು 

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2025, 14:27 IST
Last Updated 28 ಏಪ್ರಿಲ್ 2025, 14:27 IST
ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದ ಜಮೀನೊಂದರಲ್ಲಿ ಬೆಳೆದ ಭತ್ತದ ಬೆಳೆ ಗಾಳಿಗೆ ನೆಲಕಚ್ಚಿದೆ
ಸಿಂಧನೂರು ತಾಲ್ಲೂಕಿನ ಜವಳಗೇರಾ ಗ್ರಾಮದ ಜಮೀನೊಂದರಲ್ಲಿ ಬೆಳೆದ ಭತ್ತದ ಬೆಳೆ ಗಾಳಿಗೆ ನೆಲಕಚ್ಚಿದೆ   

ಸಿಂಧನೂರು: ಕಟಾವು ವೇಳೆ ಬಿರುಗಾಳಿ ಸಹಿತ ಅಕಾಲಿಕ ಮಳೆ ಸುರಿದ ಪರಿಣಾಮ ತಾಲ್ಲೂಕಿನ ಹಲವು ಗ್ರಾಮಗಳ ರೈತರ ಜಮೀನಿನಲ್ಲಿ ಬೆಳೆದ ಭತ್ತ ನೆಲಕಚ್ಚಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.‌

ಪ್ರತಿ ಹಂಗಾಮಿನಲ್ಲಿ ಬೆಳೆ ಕೊಯ್ಲಿಗೆ ಬಂದಾಗ ಏನಾದರೊಂದು ಅವಘಡಗಳು ಸಂಭವಿಸುತ್ತಲೇ ಇರುತ್ತವೆ. ಕೆಲ ರೈತರು ಕಟಾವು ಮುಗಿಸಿ ಜಮೀನಿನಲ್ಲಿ ಭತ್ತ ರಾಶಿ ಹಾಕಿದ್ದು, ಫಸಲು ಮಾರುಕಟ್ಟೆಗೆ ಸಾಗಿಸುವಷ್ಟರಲ್ಲಿ ಇನ್ನೇನು ಕಾದಿದೆಯೋ ಎಂದು ಆತಂಕದಲ್ಲಿದ್ದಾರೆ.

ಅಕಾಲಿಕ ಮಳೆಗೆ ಗೊರೇಬಾಳ, ಗೊರೇಬಾಳಕ್ಯಾಂಪ್, ಬಸಾಪುರ.ಇ.ಜೆ, ಹೊಸಳ್ಳಿ ಕ್ಯಾಂಪ್, ಕಲ್ಲೂರು, ಮುಳ್ಳೂರು, ಎಲೆಕೂಡ್ಲಿಗಿ, ಜವಳಗೇರಾ, ಸಾಸಲಮರಿ, ತಿಡಿಗೋಳ, ನಿಡಿಗೋಳ, ದಿದ್ದಿಗಿ, ಜಂಗಮರಹಟ್ಟಿ, ಬನ್ನಿಗನೂರು, ಸುಲ್ತಾನಪುರ, ಬೂತಲದಿನ್ನಿ, ದೇವರಗುಡಿ, ಕುನ್ನಟಗಿ ಸೇರಿದಂತೆ ಹಲವು ಗ್ರಾಮಗಳ ಕೆಲ ರೈತರ ಜಮೀನಿನಲ್ಲಿ ಬೆಳೆದ ಭತ್ತ ಬಿರುಗಾಳಿ, ಮಳೆಗೆ ಧರೆಗುರುಳಿದೆ. 

ADVERTISEMENT

ದಿನವೂ ರಾತ್ರಿ ಮಳೆ ಮೋಡ ಕವಿದು ಆಗಾಗ ಬಿರುಗಾಳಿ, ಗುಡುಗು-ಸಿಡಿಲಿನ ಆರ್ಭಟ ಮುಂದುವರಿದು, ತುಂತುರು ಮಳೆಯಾಗುತ್ತಿದ್ದು, ರೈತರು ಇಡೀ ಅಹೋರಾತ್ರಿ ಭತ್ತದ ರಾಶಿ ರಕ್ಷಿಸಲು ಹೆಣಗಾಡುತ್ತಿದ್ದಾರೆ. ಕೆಲವು ರೈತರು ತಾಡಪಾಲ್ ಕೊರತೆ ಅನುಭವಿಸುತ್ತಿದ್ದು, ಜೋರು ಮಳೆ ಬಂದರೆ ರಾಶಿ ಎಲ್ಲಿ ನೀರುಪಾಲಾಗುತ್ತದೆ ಎನ್ನುವ ಭಯ ಅವರನ್ನು ಕಾಡುತ್ತಿದೆ. 

’ತಾಲ್ಲೂಕಿನಲ್ಲಿ 66,662 ಹೆಕ್ಟೇರ್ ನೀರಾವರಿ ಪ್ರದೇಶವಿದ್ದು, ಮುಂಗಾರು ಹಂಗಾಮಿನಲ್ಲಿ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿಯಾಗಿತ್ತು. ಹಿಂಗಾರು ಹಂಗಾಮಿನಲ್ಲಿ 52,036 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.
ಕುಡಿಯುವ ನೀರು ಹಾಗೂ ನಿಂತ ಬೆಳೆ ರಕ್ಷಣೆಗೆ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಯ ಜನಪ್ರತಿನಿಧಿಗಳು ಸೇರಿ ಮುಖ್ಯಮಂತ್ರಿಗಳ ಬಳಿ ನಿಯೋಗ ತೆರಳಿ ಭದ್ರಾ ಜಲಾಶಯದಿಂದ 2 ಟಿಎಂಸಿ ನೀರು ಕಾಲುವೆಗಳಿಗೆ ಏಪ್ರಿಲ್ 10ರವರೆಗೆ ಹರಿಸಲಾಯಿತು. ಆದರೆ ಅಕಾಲಿಕ ಮಳೆಯಿಂದ ಬೆಳೆ ರಕ್ಷಣೆಗೆ ಮಾಡಿದ ಪ್ರಯತ್ನವೂ ಸಾಫಲ್ಯ ಕಾಣದಂತಾಗಿದೆ’ ಎಂದು ಜವಳಗೇರಾ, ಜಂಗಮರ ಹಟ್ಟಿ ಹಾಗೂ ಸುಲ್ತಾನಪುರ ಗ್ರಾಮದ ರೈತರು ಅಳಲು ತೋಡಿಕೊಂಡಿದ್ದಾರೆ.

’ರಾಜ್ಯ ಸರ್ಕಾರ ಆದಷ್ಟು ಶೀಘ್ರ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮರಳಿ ಒತ್ತಾಯಿಸಿದ್ದಾರೆ.

‘ಮುಂಗಾರು ಹಂಗಾಮಿನಲ್ಲಿ ಮಳೆ ಗಾಳಿಗೆ ಭತ್ತ ಹಾನಿ ಸಂಭವಿಸಿತ್ತು. ಹಿಂಗಾರು ಹಂಗಾಮಿಗೆ ನೀರಿನ ಕೊರತೆ ಉಂಟಾಗಿತ್ತು ಈಗ ಬಂದ ಬೆಳೆಯನ್ನು ಹೇಗಾದರೂ ಮಾಡಿ ಕಟಾವು ಮುಗಿಸಿ ಮಾರುಕಟ್ಟೆಗೆ ಸಾಗಿಸಲು ತಯಾರಿ ನಡೆಸುತ್ತಿದ್ದರೆ ಧುತ್ತೆಂದು ಅಕಾಲಿಕವಾಗಿ ಬಿರುಗಾಳಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದೆ. ಇದರಿಂದ ಅಪಾರ ಹಾನಿ ಸಂಭವಿಸಿದೆ
ಶಂಕ್ರಪ್ಪ ಅಡ್ಡಿ ಜಂಗಮರ ಹಟ್ಟಿ ಶರಣಪ್ಪ ಜವಳಗೇರಾ ರೈತರು
- ಬೆಳೆ ಹಾನಿ ಕುರಿತು ಈಗಾಗಲೇ ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆಯಿಂದ ಸಮೀಕ್ಷೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದೇವೆ
ನಜೀರ್ ಅಹ್ಮದ್, ಸಹಾಯಕ ಕೃಷಿ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.