ADVERTISEMENT

ಸಿರವಾರ | ಕಿಟ್ ವಿತರಣೆ ವಿಳಂಬ: ಇಂದಿನಿಂದ ಸಮೀಕ್ಷೆ

ಸಮರ್ಪಕವಾಗಿ ಸಮೀಕ್ಷೆ ನಡೆಯುವಂತೆ ನೋಡಿಕೊಳ್ಳಿರಿ: ಗಜಾನನ ಬಾಳೆ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2025, 5:30 IST
Last Updated 23 ಸೆಪ್ಟೆಂಬರ್ 2025, 5:30 IST
ಸಿರವಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಗಜಾನನ ಬಾಳೆ ಮಾತನಾಡಿದರು
ಸಿರವಾರದಲ್ಲಿ ನಡೆದ ಕಾರ್ಯಾಗಾರದಲ್ಲಿ ಉಪವಿಭಾಗಾಧಿಕಾರಿ ಗಜಾನನ ಬಾಳೆ ಮಾತನಾಡಿದರು   

ಸಿರವಾರ: ‘ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕುರಿತು ಸರಿಯಾಗಿ ತಿಳಿದುಕೊಂಡು ಸಮರ್ಪಕವಾಗಿ ಸಮೀಕ್ಷೆ ನಡೆಯುವಂತೆ ನೋಡಿಕೊಳ್ಳಬೇಕು’ ಎಂದು ಉಪವಿಭಾಗಾಧಿಕಾರಿ ಗಜಾನನ ಬಾಳೆ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯ ಕಿಟ್ ವಿತರಣೆ ಮತ್ತು ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.

‘ಗಣತಿದಾರರು ಗಣತಿ ವೇಳೆ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಬೇಕು. ಗೊಂದಲಗಳಿದ್ದಲ್ಲಿ ತಮ್ಮ ಮೇಲಧಿಕಾರಿಗಳನ್ನು ಸಂಪರ್ಕಿಸಬೇಕು. ಧರ್ಮ, ಜಾತಿ, ಉಪಜಾತಿ, ಕುಟುಂಬದ ಸದಸ್ಯರ ವಿದ್ಯಾರ್ಹತೆ, ವ್ಯಾಪಾರ, ಉದ್ಯೋಗಕ್ಕೆ ಸಂಬಂಧಿಸಿದಂತೆ 60 ಪ್ರಶ್ನೆಗಳನ್ನು ನೀಡಿದ್ದು ಗಣತಿದಾರರು ಸಂಯಮದಿಂದ ವಿಚಾರಿಸಿ ಮಾಹಿತಿ ಪಡೆಯಬೇಕು’ ಎಂದರು.

ADVERTISEMENT

‘ಪ್ರತಿಯೊಬ್ಬರ ಆಧಾರ್‌ ಕಾರ್ಡ್, ರೇಷನ್ ಕಾರ್ಡ್ ಮಾಹಿತಿ ಪಡೆಯುವುದು ಕಡ್ಡಾಯ. ಗಣತಿ ಮಾಡುವವರು ರಜೆ ಕೇಳದೆ ಕೊಟ್ಟ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸಬೇಕು’ ಎಂದು ಸೂಚಿಸಿದರು.

ಒಟಿಪಿ ಗೊಂದಲ: ಸಮೀಕ್ಷೆ ವೇಳೆ ಮನೆಯ ಪ್ರತಿ ಕುಟುಂಬದ ಮುಖ್ಯಸ್ಥನ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಮಳೆಗಾಲವಾಗಿದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ರೈತರು ಬೆಳಿಗ್ಗೆಯಿಂದ ಸಂಜೆಯವರೆಗೂ ಜಮೀನಿನಲ್ಲಿ ಕೆಲಸ ಮಾಡುವುದರಿಂದ ಒಟಿಪಿ ಪಡೆಯಲು ತೊಂದರೆಯಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸಿದ ಉಪವಿಭಾಗಾಧಿಕಾರಿ,‘ಕುಟುಂಬದ ಬದಲಿಗೆ ಕೂಡು ಕುಟುಂಬದ ಯಾರಾದರೂ ಒಬ್ಬ ಮುಖ್ಯಸ್ಥರ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸ ಲು ಅವಕಾಶ ನೀಡವಂತೆ ರಾಜ್ಯ ಹಿಂದುಳಿದ ಆಯೋಗಕ್ಕೆ ಮನವಿ ಮಾಡಲಾಗುವುದು’ ಎಂದರು.

ಸಮೀಕ್ಷೆಯ ಕಿಟ್ ವಿತರಣೆ ವಿಳಂಬವಾದ ಕಾರಣ ಸಮೀಕ್ಷೆಯನ್ನು ಒಂದು ದಿನ ಮುಂದೂಡಿಕೆ ಮಾಡಿ ಮಂಗಳವಾರದಿಂದ ಸಮೀಕ್ಷೆ ಕಾರ್ಯ ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ವೈ.ಭೂಪನಗೌಡ, ಉಪಾಧ್ಯಕ್ಷೆ ಲಕ್ಷಿ ಆದೆಪ್ಪ, ತಹಶೀಲ್ದಾರ್ ಅಶೋಕ ಪವಾರ್, ತಾಲ್ಲೂಕು ಪಂಚಾಯಿತಿ ಇಒ ಶಶಿಧರ ಸ್ವಾಮಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಆರೀಫ್ ಮಿಯಾ ಸೇರಿದಂತೆ ಗಣತಿದಾರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.