ಸಿರವಾರ: ಮನೆ–ಮನ ಬೆಳಗುವ ದೀಪಗಳ ಹಬ್ಬದ ಪ್ರಮುಖ ಆಕರ್ಷಣೆ ಹಣತೆ. ಅನ್ಯ ರಾಜ್ಯಗಳ ಸಿದ್ಧ ಹಣತೆ ಮತ್ತು ವಿದ್ಯುತ್ ಚಾಲಿತ ಹಣತೆಗಳ ಭರಾಟೆಯಲ್ಲಿ ಗ್ರಾಮೀಣ ಪ್ರದೇಶದ ಕುಂಬಾರರು ತಯಾರಿಸುವ ಸಾಂಪ್ರದಾಯಿಕ ಮಣ್ಣಿನ ಹಣತೆಗಳ ಬೆಳಕು ಮಂದವಾಗಿದೆ.
ಮಣ್ಣಿನ ಹಣತೆಗಳ ಖರೀದಿಗೆ ಗ್ರಾಹಕರು ಹೆಚ್ಚಿನ ಆಸಕ್ತಿ ತೋರದ ಕಾರಣ ದೀಪಗಳು ತಯಾರಕರ ಮನೆ ಬೆಳಗುತ್ತಿಲ್ಲ ಎನ್ನುವುದು ಕುಂಬಾರರ ಕೊರಗು. ತಲೆ ತಲಾಂತರಗಳಿಂದ ಕುಲ ಕಸುಬು ನಂಬಿಕೊಂಡು ಬದುಕು ಸವೆಸುತ್ತಿರುವ ಕುಂಬಾರರಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ದೀಪಾವಳಿ ಹಬ್ಬಕ್ಕೆ ಹಣತೆ ತಯಾರಿಸಿ ಮಾರಾಟ ಮಾಡುತ್ತಿದ್ದ ಕುಂಬಾರರ ಬದುಕಿನಲ್ಲಿ ಕತ್ತಲು ಕವಿಯುವಂತೆ ಮಾಡಿದೆ.
ಅನ್ಯ ರಾಜ್ಯಗಳಿಂದ ಖರೀದಿಸಿ ತಂದು ಮಾರಾಟ ಮಾಡುವವರ ಸಂಖ್ಯೆ ಹೆಚ್ಚಾಗಿ ಮಣ್ಣಿನ ಹಣತೆಗೆ ಬೇಡಿಕೆ ಕಡಿಮೆಯಾಗಿದೆ. ಮೂರು ತಿಂಗಳಿಂದ ತಯಾರಿ ನಡೆಸಿ ಮಣ್ಣಿನಿಂದ ತಯಾರಿಸಿದ ಹಣತೆಗಳಿಗೆ ಬೇಡಿಕೆ ಇಲ್ಲದಂತಾಗಿದೆ ಎಂದು ಕುಂಬಾರರು ಅಳಲು ತೋಡಿಕೊಂಡರು.
ದೀಪಾವಳಿ ಹಾಗೂ ಕಾರ್ತಿಕ ಮಾಸದಲ್ಲಿ ಮಣ್ಣಿನ ಹಣತೆ ಬೆಳಗುವುದು ವಾಡಿಕೆ. ಬದುಕಿನಲ್ಲಿನ ಅಂಧಕಾರ ತೊಡೆದು ಹಾಕಿ ಬೆಳಕು ಮೂಡಿಸುತ್ತದೆ ಎಂದು ನಂಬಲಾಗಿದೆ. ಆಧುನಿಕ ದಿನಗಳಲ್ಲಿ ಮಣ್ಣಿನ ಹಣತೆಗಳು ಕುಂಬಾರರ ಬಾಳಿನಲ್ಲಿ ಬೆಳಕು ಮಾತ್ರ ಮೂಡಿಸುತ್ತಿಲ್ಲ ಎಂದು ಲಕ್ಷ್ಮೀ ಅಮರೇಶ ಅರಿಕೇರಿ ಹೇಳಿದರು.
ಹಬ್ಬ, ಹರಿದಿನಗಳು, ಜಾತ್ರೆ, ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಕುಂಬಾರರು ತಯಾರಿಸುವ ಹಣತೆಗಳಿಗೆ ಅಲ್ಪಸ್ವಲ್ಪ ಬೇಡಿಕೆ ಇರುತ್ತದೆ. ಕುಲಕಸಬನ್ನೇ ನಂಬಿ ಬದುಕಿನ ಬಂಡಿ ಸಾಗಿಸುವವರು ಸದ್ಯದ ಮಟ್ಟಿಗೆ ಒಂದಿಷ್ಟು ಹಣ ಸಂಪಾದಿಸಲೂ ಸಂಕಷ್ಟ ಅನುಭವಿಸುವಂತಾಗಿದೆ.
ಅನ್ಯ ದೇಶದ ಬಗೆ ಬಗೆಯ ರೆಡಿಮೇಡ್ ಹಣತೆಗಳಿಂದ ಮಣ್ಣಿನ ಹಣತೆ ಬಳಕೆ ಕಣ್ಮರೆಯಾಗುತ್ತಿದೆ. ದೀಪಾವಳಿ ಹಾಗೂ ಶುಭಕಾರ್ಯದ ಸಂದರ್ಭದಲ್ಲಿ ಮಾತ್ರ ಹಣತೆಗಳಿಗೆ ಕೊಂಚ ಬೇಡಿಕೆ ಬರುತ್ತದೆ. ಉಳಿದ ಸಮಯದಲ್ಲಿ ಕುಂಬಾರರನ್ನು ನೆನಪಿಸಿಕೊಳ್ಳುವವರೂ ಇಲ್ಲದಂತಾಗಿದೆ. ಕುಲಕಸುಬು ಕೈ ಹಿಡಿಯದ ಕಾರಣ ನಲುಗಿದ ಕುಂಬಾರರು ಕೂಲಿ ಮಾಡಿ ಜೀವನ ಸಾಗಿಸಬೇಕಿದೆ ಎಂದು ಪಾರ್ವತಿ ವೆಂಕಟೇಶ ಅರಿಕೇರಿ ತಿಳಿಸಿದರು.
ಕುಂಬಾರರು ತಾವು ತಯಾರಿಸುವ ಹಣತೆಗಳನ್ನು ಮಾರಾಟ ಮಾಡಲು ವ್ಯವಸ್ಥೆ ಇಲ್ಲದ ಕಾರಣ ಪಟ್ಟಣದ ವ್ಯಾಪಾರಿಗಳಿಗೆ ಮಾರುತ್ತಾರೆ. ವರ್ತಕರು ಕಡಿಮೆ ಬೆಲೆಯಲ್ಲಿ ಖರೀದಿಸಿ ಪಟ್ಟಣ ಮತ್ತು ವಾರದ ಸಂತೆಗಳಲ್ಲಿ ದುಪ್ಪಟ್ಟು ಬೆಲೆಗೆ ವ್ಯಾಪಾರ ಮಾಡುತ್ತಾರೆ. ಇದರಿಂದ ಕುಂಬಾರರ ಶ್ರಮಕ್ಕೆ ಕನಿಷ್ಠ ಬೆಲೆಯೂ ದೊರೆಯುತ್ತಿಲ್ಲ. ಸರ್ಕಾರದಿಂದ ಪ್ರೋತ್ಸಾಹವೂ ದೊರೆಯುತ್ತಿಲ್ಲ.
ಇದೇ ಕಾರಣಕ್ಕೆ ತಾಲ್ಲೂಕಿನಲ್ಲಿಯೂ ಮಡಿಕೆ ಮಾಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇಂದಿಗೂ ಕೂಡ ಈ ಸಮಸ್ಯೆಗಳು ಕುಂಬಾರರನ್ನು ಕಾಡುತ್ತಿದೆ. ಇಷ್ಟೆಲ್ಲ ಸಮಸ್ಯೆ ಇದ್ದರೂ ಕೆಲವರು ತಮ್ಮ ಕುಲಕಸುಬಿನ ಉಳಿವಿಗಾಗಿ ನಷ್ಟದ ನಡುವೆಯೂ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಕಾರಣ ತಯಾರಿಕೆ ಸಾಧ್ಯವಾಗುತ್ತಿಲ್ಲ. ಮಣ್ಣಿನ ಹಣತೆಗಳನ್ನು ಬೇರೆಡೆಯಿಂದ ತಂದು ಮಾರಾಟ ಮಾಡುತ್ತಿದ್ದೇವೆಅಮರೇಶ ಕುಂಬಾರ ಸಿರವಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.