
ಸಿಂಧನೂರು: ಇಲ್ಲಿನ ಕಾಟಿಬೇಸ್ ಬಡಾವಣೆಗೆ ಹೊಂದಿಕೊಂಡಿರುವ ಅಂಗಡಿಗಳಲ್ಲಿ ಗುರುವಾರ ರಾತ್ರಿ ಅಗ್ನಿ ಅನಾಹುತ ಸಂಭವಿಸಿ ₹1.20 ಕೋಟಿ ಮೌಲ್ಯದ ವಸ್ತುಗಳು ಭಸ್ಮವಾಗಿವೆ.
ಗುರುವಾರ ರಾತ್ರಿ ಸುಮಾರು 12.15ಕ್ಕೆ ದೆಹಲಿ ಬಜಾರ್ ಮಳಿಗೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಬಳಿಕ ಬೆಂಕಿಯ ಕೆನ್ನಾಲಿಗೆ ಹತ್ತಿರದ ಎರಡು ಬಟ್ಟೆ ಅಂಗಡಿಗಳು, ಹಗ್ಗ ಮಾರಾಟದ ಅಂಗಡಿ, ಕೀಟನಾಶಕ ಸಿಂಪಡಣೆ ಯಂತ್ರದ ದುರಸ್ತಿ ಶಾಪ್, ಚಿಕನ್ ಮಾರಾಟದ ಅಂಗಡಿಗೂ ಚಾಚಿದೆ.
ಬೆಂಕಿಯ ತೀವ್ರತೆಗೆ ಅಂಗಡಿಗಳು ಅಕ್ಷರಶಃ ಉರಿದು ಹೋಗಿವೆ. ಅಂಗಡಿಗಳ ಪಕ್ಕದ ರಸ್ತೆ ಹಾಗೂ ವಿಭಜಕ ಕಾದು ಕಾವಲಿಯಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸಾರ್ವಜನಿಕರ ಮಾಹಿತಿ ಮೇರೆಗೆ ರಾತ್ರಿ 12.45ಕ್ಕೆ ಅಗ್ನಿಶಾಮಕ ಸಿಬ್ಬಂದಿ ಬಂದು ಬೆಳಿಗ್ಗೆ 4 ಗಂಟೆಯವರೆಗೂ ಬೆಂಕಿ ನಂದಿಸಲು ಹರಸಾಹಸಪಟ್ಟರು. ಸಾರ್ವಜನಿಕರು ಸಹ ಸಹಕಾರ ನೀಡಿದರು. ಬೆಳಿಗ್ಗೆ ಮಾಲೀಕರು ಅಂಗಡಿಗಳ ಸಾಮಗ್ರಿ ತೆಗೆಯುತ್ತಿದ್ದ ವೇಳೆ ಬೆಂಕಿ ಇನ್ನೂ ಹಾರಿರಲಿಲ್ಲ. ಆಗ ಪುನಃ ಅಗ್ನಿಶಾಮಕಕ್ಕೆ ಕರೆ ಮಾಡಿದ್ದರಿಂದ ಸ್ಥಳಕ್ಕೆ ಬಂದು ಸಿಬ್ಬಂದಿ ಬೆಂಕಿ ನಂದಿಸಿದರು.
ಕಾಳಪ್ಪ ಅವರ ಹಗ್ಗ ಮಾರಾಟ ಅಂಗಡಿಯಲ್ಲಿ ₹70 ಲಕ್ಷ, ಮಹ್ಮದ್ ಸುಲೇಮಾನರ ಬಟ್ಟೆ ಅಂಗಡಿ ₹12 ಲಕ್ಷ, ದೆಹಲಿ ಬಜಾರ್ ಮಳಿಗೆಯಲ್ಲಿ ₹20 ಲಕ್ಷ, ಫಯಾಜ್ ಅವರ ಬಟ್ಟೆ ಅಂಗಡಿ ₹5 ಲಕ್ಷ, ರಬ್ಬಾನಿ ಅವರ ಕೀಟನಾಶಕ ಸಿಂಪಡಣೆ ಯಂತ್ರದ ದುರಸ್ತಿ ಶಾಪ್‌ನಲ್ಲಿ ₹8 ಲಕ್ಷ, ಅಜ್ಮೀರ್ ಅವರ ಸಿತಾರ್ ಚಿಕನ್ ಸೆಂಟರ್‌ನಲ್ಲಿ ₹3 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ ಎಂದು ಅಂದಾಜಿಸಲಾಗಿದೆ.
‘ಅಗ್ನಿ ಅನಾಹುತದಿಂದ ಬದುಕು ಬೀದಿಗೆ ಬಂದಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಬಂದು ಪರಿಶೀಲಿಸಿಲ್ಲ. ಪರಿಹಾರ ಸಿಗುವ ಭರವಸೆ ಇಲ್ಲ’ ಎಂದು ಅಂಗಡಿಗಳ ಮಾಲೀಕರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.