ADVERTISEMENT

ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 9:04 IST
Last Updated 22 ಸೆಪ್ಟೆಂಬರ್ 2025, 9:04 IST
   

ರಾಯಚೂರು: ‘ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2025 ಸೋಮವಾರ ಆರಂಭವಾಯಿತು. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಕೊನೆಯ ಹಂತದ ತರಬೇತಿ ನೀಡಿ ಕಿಟ್‌ಗಳನ್ನು ಕೊಟ್ಟು ಗಣತಿದಾರರನ್ನು ಗಣತಿಗೆ ಕಳಿಸಿಕೊಡಲಾಯಿತು.

ರಾಯಚೂರಿನ ಪಂಡಿತ ಸಿದ್ಧರಾಮ ಜಂಬಲದಿನ್ನಿ ಜಿಲ್ಲಾ ರಂಗ ಮಂದಿರದಲ್ಲಿ ರಾಯಚೂರು ತಾಲ್ಲೂಕಿನ ಗಣತಿದಾರರಿಗೆ ಬೆಳಿ‌ಗ್ಗೆ ಸಭೆ ನಡೆಸಿ ಗಣತಿದಾರರ ಗೊಂದಲಗಳನ್ನು ನಿವಾರಿಸಲಾಯಿತು. ತಹಶೀಲ್ದಾರ್‌ ಸುರೇಶ ವರ್ಮಾ ಅವರು ಗಣತಿದಾರರಿಗೆ ಕೈಪಿಡಿ, ಬ್ಯಾಗ್, ಟೋಪಿ ಮತ್ತು ಸ್ವಯಂ ದೃಢೀಕರಣ ಪತ್ರಗಳನ್ನು ಒಳಗೊಂಡ ಕಿಟ್‌ಗಳನ್ನು ವಿತರಣೆ ಮಾಡಿದರು. ನಂತರ ಗಣತಿಗಾರರು ಮನೆಗಳತ್ತ ಹೆಜ್ಜೆ ಹಾಕಿದರು.

‘ಎಲ್ಲ ಜಾತಿ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಮಾಹಿತಿಯನ್ನು ಅಂಕಿ-ಅಂಶಗಳ ಮೂಲಕ ಸಂಗ್ರಹಿಸುವುದು ಸಮೀಕ್ಷೆಯ ಉದ್ದೇಶವಾಗಿದೆ. ಗಣತಿದಾರರು ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಬೇಕು. ಗೊಂದಲಗಳು ಉಂಟಾದರೆ ಮಾಸ್ಟರ್‌ ಟ್ರೇನರ್‌ಗಳನ್ನು ಸಂಪರ್ಕಿಸಿ ಗೊಂದಲ ನಿವಾರಿಸಿಕೊಳ್ಳಬೇಕು‘ ಎಂದು ತಹಶೀಲ್ದಾರರು ಸಲಹೆ ನೀಡಿದರು.

ADVERTISEMENT

‘ಪ್ರಶ್ನಾವಳಿಯಲ್ಲಿ 60 ಪ್ರಶ್ನೆಗಳಿವೆ. ವ್ಯಾಪಾರ, ಉದ್ಯೋಗ, ವಿದ್ಯಾರ್ಹತೆ, ಕೌಶಲ್ಯ, ತರಬೇತಿ ಅಗತ್ಯತೆ, ಆದಾಯ, ಕುಟುಂಬದ ಸ್ಥಿರ ಮತ್ತು ಚರಾಸ್ತಿ ವಿವರಗಳು, ಧರ್ಮ, ಜಾತಿ, ಉಪಜಾತಿ, ಕುಲಕಸುಬು ಮುಂತಾದ ಮಾಹಿತಿಗಳ ಬಗ್ಗೆ ಪ್ರಶ್ನೆಗಳನ್ನು ಸಂಯಮದಿಂದ ವಿಚಾರಿಸಬೇಕು. ಪಡಿತರ ಚೀಟಿ ಅಥವಾ ಆಧಾರ್ ಸಂಖ್ಯೆಯನ್ನು ದೃಢೀಕರಣ ಪತ್ರವಾಗಿ ಬಳಸಿ ಸಮೀಕ್ಷೆ ಮಾಡಬೇಕು‘ ಎಂದು ತಿಳಿಸಲಾಯಿತು.

150 ಮನೆಗಳ ಸಮೀಕ್ಷೆ ಕಾರ್ಯಕ್ಕೆ ‘ಒಬ್ಬ ಗಣಿತಿದಾರರನ್ನು ನಿಯೋಜಿಸಲಾಗಿದೆ. 10 ಬ್ಲಾಕ್‌ಗಳಿಗೆ ಒಬ್ಬ ಗಣತಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ. ಜಿಲ್ಲಾ ಸಾಂಖ್ಯಿಕ ಇಲಾಖೆಯ ಪ್ರಕಾರ ಜಿಲ್ಲೆಯಲ್ಲಿ 4,75,000 ಕುಟುಂಬಗಳಿವೆ. ಜಿಲ್ಲೆಯಲ್ಲಿ ಒಟ್ಟು 3178 ಗಣಿತಿದಾರರು, 340 ಮೇಲ್ವಿಚಾರಕರು ಸಮೀಕ್ಷೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಇಡಿಎಸ್‌ಎಸ್ ನೆರವಿನೊಂದಿಗೆ ಇಂಧನ ಇಲಾಖೆಯ ಮೀಟರ್ ರೀಡರ್‌ಗಳಿಂದ ಮನೆಮನೆಗೆ ತೆರಳಿ ಜಿಯೋ ಟ್ಯಾಗಿಂಗ್ ಮೂಲಕ ಯುಎಚ್‌ಐಡಿ ಜನರೇಟ್ ಮಾಡಿ ಮತ್ತು ಸ್ಟೀಕರಿಂಗ್ ಅಂಟಿಸಿ ನಂಬರ್ ನಮೂದಿಸಿದರು.

ಶೈಕ್ಷಣಿಕ ಸೌಲಭ್ಯವೂ ಮೀಸಲಾತಿಯ ಲಾಭವೇ ಆಗಿದೆ

ಪರಿಶಿಷ್ಟ ಅಥವಾ ಹಿಂದುಳಿದ ಸಮುದಾಯವರು, ಅವರ ಮಕ್ಕಳು ಮೀಸಲಾತಿ ಕೋಟಾದಲ್ಲಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಪ್ರವೇಶ ಪಡೆದಿದ್ದರೆ ಮೀಸಲಾತಿ ಸೌಲಭ್ಯ ಪಡೆಯಲಾಗಿದೆ ಎಂದರ್ಥ. ಕೇವಲ ಸರ್ಕಾರಿ ನೌಕರಿ ಪಡೆದವರು ಮಾತ್ರ ಮೀಸಲಾತಿ ಲಾಭ ಪಡೆದುಕೊಂಡಿದ್ದಾರೆ ಎನ್ನಲಾಗದು‘ ಎಂದು ತಹಶೀಲ್ದಾರ್ ಸುರೇಶ ವರ್ಮಾ ಸ್ಪಷ್ಟಪಡಿಸಿದ್ದಾರೆ.

ಸಹಾಯವಾಣಿ

ವಿವರಗಳಿಗೆ ಆಯೋಗದ ಸಹಾಯವಾಣಿ ಸಂಖ್ಯೆ: 8050770004ಗೆ ಕರೆ ಮಾಡಬಹುದಾಗಿದೆ. ಅಥವಾ ಆಯೋಗದ ಜಾಲತಾಣ https://kscbc.karnataka.gov.in ಗೆ ಭೇಟಿ ನೀಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.