ADVERTISEMENT

ಹಾಸ್ಟೆಲ್‌ ಸಮಸ್ಯೆ ಇದ್ದರೆ ಗಮನಕ್ಕೆ ತನ್ನಿ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2021, 12:13 IST
Last Updated 6 ಫೆಬ್ರುವರಿ 2021, 12:13 IST
ಸತೀಶ ಕೆ.ಎಚ್‌.
ಸತೀಶ ಕೆ.ಎಚ್‌.   

ರಾಯಚೂರು: ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಸತೀಶ ಕೆ.ಎಚ್‌. ಅವರೊಂದಿಗೆ ‘ಪ್ರಜಾವಾಣಿ’ ಫೋನ್‌ ಇನ್‌ ಕಾರ್ಯಕ್ರಮವು ಶನಿವಾರ ಬೆಳಿಗ್ಗೆ 10 ರಿಂದ 11 ರವರೆಗೂ ನಡೆಯಿತು.

ಜಿಲ್ಲೆಯ ವಿವಿಧೆಡೆಯಿಂದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಂಘ–ಸಂಸ್ಥೆಗಳ ಪದಾಧಿಕಾರಿಗಳು ಕರೆಗಳನ್ನು ಮಾಡಿ ಸಮಸ್ಯೆ ಹೇಳಿಕೊಂಡರು. ಪ್ರಶ್ನೆಗಳನ್ನು ವ್ಯವದಾನದಿಂದ ಆಲಿಸಿದ ಅಧಿಕಾರಿ ಸಮಂಜಸವಾಗಿ ಉತ್ತರ ನೀಡಿದರು. ಅಲ್ಲದೆ, ಸಮಸ್ಯೆಗೆ ಸಂಬಂಧಿಸಿದ ದಾಖಲೆಗಳೊಂದಿಗೆ ಕಚೇರಿ ಬಂದು ಭೇಟಿ ಆಗುವಂತೆಯೂ ಮನವರಿಕೆ ಮಾಡಿದರು. ವಿಶೇಷವಾಗಿ ಶಿಷ್ಯವೇತನ ಹಾಗೂ ಹಾಸ್ಟೆಲ್‌ ಆರಂಭಿಸುವ ಕುರಿತಾದ ಪ್ರಶ್ನೆಗಳೇ ಅಧಿಕವಾಗಿದ್ದವು.

ದೇವದಾಸಿಯರ ಮಕ್ಕಳ ಶಿಕ್ಷಣದ ಯೋಜನೆಗಳೇನಿವೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡಿಕೊಳ್ಳುವುದು ಹೇಗೆ ಎನ್ನುವ ಪ್ರಶ್ನೆಗಳನ್ನು ಕೇಳಿದ್ದು ಗಮನ ಸೆಳೆದವು. ಆಯ್ದ ಪ್ರಶ್ನೆ ಹಾಗೂ ಉತ್ತರ ಇಲ್ಲಿವೆ....

ADVERTISEMENT

ಹಾಸ್ಟೆಲ್‌ ಯಾವಾಗ ಆರಂಭವಾಗುತ್ತವೆ?

ವಸತಿ ನಿಲಯಗಳಲ್ಲಿ 10ನೇ ತರಗತಿ ವಿದ್ಯಾರ್ಥಿಗಳಿರುವುದಕ್ಕೆ ಅವಕಾಶ ನೀಡಲಾಗಿತ್ತು. ಫೆಬ್ರುವರಿ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳಿಗೂ ಅವಕಾಶವಿದೆ. ಸರ್ಕಾರದ ನಿಯಮಾವಳಿ ಪ್ರಕಾರವೇ ಹಾಸ್ಟೇಲ್‌ ಆರಂಭಿಸುತ್ತಿದ್ದೇವೆ. ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪ್ರಮಾಣಪತ್ರ ಹಾಗೂ ಐಆರ್‌ಸಿಟಿವಿ ಪರೀಕ್ಷೆ ಮಾಡಿಕೊಂಡ ವರದಿಯನ್ನು ವಾರ್ಡ್‌ಗಳಿಗೆ ತೋರಿಸಬೇಕು.

ಜಾಲಹಳ್ಳಿ ಕಾಲೇಜು ಹಾಸ್ಟೆಲ್‌ ಇದುವರೆಗೂ ಆರಂಭಿಸಿಲ್ಲ ಏಕೆ?

ಹಾಸ್ಟೆಲ್‌ಗೆ ಭೇಟಿನೀಡಿ ಪರಿಶೀಲಿಸಿದ್ದು, ಈಗ ಆರಂಭವಾಗಿದೆ. ಪಾಲಕರಿಂದ ಒಪ್ಪಿಗೆ ಪತ್ರ ಹಾಗೂ ಐಆರ್‌ಸಿಟಿಸಿ ಪರೀಕ್ಷೆ ಮಾಡಿಕೊಂಡಿರುವುದು ಕಡ್ಡಾಯ. ಈಗಲೇ ಹೋಗಿ ಉಳಿದುಕೊಳ್ಳಬಹುದಾಗಿದೆ.

ಮುದಗಲ್‌ ತಾಂಡಾಗಳಲ್ಲಿ ಸೇವಾಲಾಲ ಭವನ ಇನ್ನೂ ಉದ್ಘಾಟಿಸಿಲ್ಲ ಏಕೆ?

ತಾಂಡಾಗಳ ಸೇವಾಲಾಲ ಭವನಕ್ಕೆ ಸಂಬಂಧಿಸಿದಂತೆ ನೋಡಿಕೊಳ್ಳುವುದಕ್ಕೆ ಬೇರೆ ಇಲಾಖೆಯವರು ಇದ್ದಾರೆ. ತಾಂಡಾ ಅಭಿವೃದ್ಧಿ ನಿಗಮದಿಂದ ಮಾಹಿತಿ ಕೊಡಿಸುತ್ತೇವೆ.

ಎರಡು ವರ್ಷಗಳಿಂದ ಶಿಷ್ಯವೇತನ ಬಂದಿಲ್ಲ.

ವೆಬ್‌ಸೈಟ್‌ನಲ್ಲಿ ಸ್ಟೇಟಸ್‌ನಲ್ಲಿ ಚೆಕ್‌ ಮಾಡಿಕೊಳ್ಳಿ. ಶಿಷ್ಯವೇತನದ ಬಗ್ಗೆ ಅವರೇ ತಿಳಿದುಕೊಳ್ಳಬಹುದಾಗಿದೆ. ಅರ್ಜಿ ಸ್ವೀಕೃತವಾಗಿರುವುದು, ತಿರಸ್ಕೃತವಾಗಿರುವುದು ಹಾಗೂ ಪ್ರಕ್ರಿಯೆ ನಡೆಯುತ್ತಿರುವ ಮಾಹಿತಿ ಸಿಗುತ್ತದೆ. ಚೆಕ್‌ ಮಾಡಿಕೊಂಡರೆ ಎಲ್ಲರೂ ತಿಳಿಯುತ್ತದೆ. ಎಸ್‌ಎಸ್‌ಪಿ ಪೋರ್ಟಲ್‌ನಲ್ಲಿ ಬ್ಯಾಂಕ್‌ ಪಾಸ್‌ಬುಕ್‌ ಲಿಂಕ್‌ ಮಾಡುವುದರಲ್ಲಿ ವ್ಯತ್ಯಾಸ ಆಗಿದ್ದರೆ ಅದನ್ನು ನೋಡಿಕೊಳ್ಳಬೇಕು.

ಲಿಂಗಸುಗೂರು ತಾಲ್ಲೂಕಿನ ಆಶಿಹಾಳ ತಾಂಡಾದಲ್ಲಿ ಆಶ್ರಮ ಶಾಲೆಗೆ ಶಿಕ್ಷಕರ ನೇಮಕಾತಿ?

ಸಮಾಜ ಕಲ್ಯಾಣ ಇಲಾಖೆಯಿಂದ ಯಾವುದೇ ನೇಮಕಾತಿ ನಡೆದಿಲ್ಲ. ಒಟ್ಟಾರೆ ಆಶ್ರಮ ಶಾಲೆಗಳ ಬಗ್ಗೆ ಚರ್ಚೆ ಮಾಡುವುದಕ್ಕಾಗಿ ಫೆಬ್ರುವರಿ 10 ರಂದು ಆಯುಕ್ತ ಅಧ್ಯಕ್ಷತೆಯಲ್ಲಿ ಸಭೆ ಮಾಡಿ, ಚರ್ಚಿಸುತ್ತಿದ್ದಾರೆ. ಅಲ್ಲಿಂದ ಬರುವ ಸೂಚನೆ ಆಧರಿಸಿ ಕ್ರಮ ಕೈಗೊಳ್ಳಲಾಗುವುದು. ಕಾಯಂ ಶಿಕ್ಷಕರನ್ನು ತೆಗೆದುಕೊಳ್ಳುತ್ತಿಲ್ಲ. ಹೊರಗುತ್ತಿಗೆ ಆಧಾರದಲ್ಲಿ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲಾಗಿದೆ.

ಶಿಕ್ಷಣ ಇಲಾಖೆಯ ಶಿಕ್ಷಕರನ್ನು ಹಾಸ್ಟೇಲ್‌ಗಳಿಗೆ ವಾರ್ಡ್‌ ಆಗಿ ನೇಮಿಸಿದ್ದರಿಂದ ಎರಡೂ ಕಡೆ ಕೆಲಸ ಮಾಡುತ್ತಿಲ್ಲ.

ಶಾಲೆಯ ಅವಧಿಯಲ್ಲಿ ಶಿಕ್ಷಕರು ಶಾಲೆಯಲ್ಲಿರುತ್ತಾರೆ. ಇನ್ನುಳಿದ ಅವಧಿಯಲ್ಲಿ ಹಾಸ್ಟೇಲ್‌ ನೋಡಿಕೊಳ್ಳಲು ನಿಯೋಜನೆ ಮಾಡಲಾಗಿದೆ. ಈ ಬಗ್ಗೆ ಮತ್ತೊಮ್ಮೆ ನಿರ್ದೇಶನ ಕೊಡಲಾಗುವುದು. ಶಾಲಾ ಅವಧಿಯಲ್ಲಿ ಕಡ್ಡಾಯವಾಗಿ ಶಾಲೆಯಲ್ಲಿರಲು ತಿಳಿಸಲಾಗುವುದು.

ಶಿಷ್ಯವೇತನ ಪಡೆಯುವವರಿಗೆ ಕಾಲೇಜು ಶುಲ್ಕ ಕಟ್ಟುವಂತೆ ಒತ್ತಾಯ ಮಾಡುತ್ತಿದ್ದಾರೆ?

ಶುಲ್ಕ ಕಟ್ಟುವಂತೆ ಒತ್ತಾಯಿಸುವುದು ತಪ್ಪಾಗುತ್ತದೆ. ಶಿಷ್ಯವೇತನದಲ್ಲಿ ಹೆಚ್ಚುವರಿ ಇರುವುದನ್ನು ವಿದ್ಯಾರ್ಥಿಗಳೇ ಕೊಡಬೇಕಾಗುತ್ತದೆ. ಸರ್ಕಾರ ನಿಗದಿ ಪಡಿಸಿದ ಶುಲ್ಕವನ್ನು ಶಿಷ್ಯವೇತನದಲ್ಲಿಯೇ ಕೊಡಲಾಗುವುದು. ಜಮಾ ಆಗುವುದು ವಿಳಂಬವಾದರೂ ವಿದ್ಯಾರ್ಥಿಗಳಿಂದ ಶುಲ್ಕ ಕೇಳುವಂತಿಲ್ಲ. ಅಂತಹ ಕಾಲೇಜುಗಳಿದ್ದರೆ ಇಲಾಖೆಯ ಗಮನಕ್ಕೆ ತರಬೇಕು.

ಲಿಂಗಸುಗೂರಿನಲ್ಲಿ ಅಂಬೇಡ್ಕರ್‌ ಹಾಸ್ಟೆಲ್‌ ಕಟ್ಟಡ ಇದ್ದರೂ ಬಾಡಿಗೆ ಕಟ್ಟಡದಲ್ಲಿ ಹಾಸ್ಟೆಲ್‌ ನಡೆಸುತ್ತಿದ್ದಾರೆ.

ಲಿಂಗಸುಗೂರಿನಲ್ಲಿ ಹಾಸ್ಟೆಲ್‌ ಆರಂಭವಾಗಿದ್ದು, ಸ್ವಂತ ಕಟ್ಟಡ ಇದ್ದರೂ ಬಾಡಿಗೆ ಕಟ್ಟುತ್ತಿರುವುದು ಈಗ ಗಮನಕ್ಕೆ ಬಂದಿದೆ. ಮತ್ತೆ ಪರಿಶೀಲನೆ ಮಾಡಲಾಗುವುದು.

ಕಾಲೇಜುಗಳು ಪ್ರಾರಂಭವಾಗಿ ತಿಂಗಳಾದರೂ, ಪದವಿ ಪ್ರಥಮ ವರ್ಷದವರಿಗೆ ಹಾಸ್ಟೆಲ್‌ ಆರಂಭಿಸಿಲ್ಲ.

ಆರಂಭದಲ್ಲಿ ಪದವಿ ಅಂತಿಮ ವರ್ಷದವರನ್ನು ತೆಗೆದುಕೊಳ್ಳಲು ಸೂಚನೆ ಬಂದಿತ್ತು. ಫೆಬ್ರುವರಿ 1 ರಿಂದ ಪದವಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೂ ಅವಕಾಶ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಎಂಜಿನಿಯರಿಂಗ್‌ ಓದುತ್ತಿದ್ದು, ಈಗ ಶುಲ್ಕ ಕಟ್ಟಿ, ಆಮೇಲೆ ಶಿಷ್ಯವೇತನ ಬರುತ್ತದೆ ಎನ್ನುತ್ತಿದ್ದಾರೆ.

ಸಿಇಟಿ ಮೂಲಕ ಆಯ್ಕೆಯಾಗಿ ಪ್ರವೇಶ ಪಡೆದ ಪರಿಶಿಷ್ಟ ವಿದ್ಯಾರ್ಥಿಗಳು ಶುಲ್ಕ ಕಟ್ಟುವ ಅಗತ್ಯ ಇರುವುದಿಲ್ಲ. ಎಸ್‌ಎಸ್‌ಪಿ ಪೋರ್ಟಲ್‌ ಮೂಲಕ ಆಯಾ ಕಾಲೇಜಿನವರೆ ಅರ್ಜಿ ಸಲ್ಲಿಸುತ್ತಾರೆ. ಒಂದು ವೇಳೆ ಶುಲ್ಕ ಕಟ್ಟಿದ್ದರೆ, ಅರ್ಜಿ ಹಾಕುವಾಗಲೇ ಶುಲ್ಕ ಕಟ್ಟಿರುವ ರಸೀದಿಯನ್ನು ಅಪ್‌ಲೋಡ್‌ ಮಾಡಿರಬೇಕು. ಶಿಷವೇತನದ ಮೊತ್ತವೆಲ್ಲ ವಿದ್ಯಾರ್ಥಿ ಖಾತೆಗೆ ಬರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.