ADVERTISEMENT

ಸಮಾಜದಿಂದ ಅಸಂಘಟಿತ ಮಹಿಳೆಯರ ತಾತ್ಸಾರ

ಸ್ಲಂ ಜನಾಂದೋಲನ ಕರ್ನಾಟಕ ರಾಜ್ಯ ಘಟಕದ ಸಂಚಾಲಕ ಎ. ನರಸಿಂಹಮೂರ್ತಿ ಕಳವಳ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2018, 13:23 IST
Last Updated 30 ಅಕ್ಟೋಬರ್ 2018, 13:23 IST
ರಾಯಚೂರಿನ ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಮಂಗಳವಾರ ಏರ್ಪಡಿಸಿದ್ದ ವಿಭಾಗಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಜಾಗೃತಿ ದೇಶಮಾನೆ ಮಾತನಾಡಿದರು
ರಾಯಚೂರಿನ ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ಮಂಗಳವಾರ ಏರ್ಪಡಿಸಿದ್ದ ವಿಭಾಗಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಜಾಗೃತಿ ದೇಶಮಾನೆ ಮಾತನಾಡಿದರು   

ರಾಯಚೂರು: ವಿವಿಧೆಡೆ ಅಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರ ಬಗ್ಗೆ ಸಮಾಜವು ತಾತ್ಸಾರ ಮನೋಭಾವ ಹೊಂದಿದೆ ಎಂದು ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಘಟಕದ ಸಂಚಾಲಕ ಎ. ನರಸಿಂಹಮೂರ್ತಿ ಕಳವಳ ವ್ಯಕ್ತಪಡಿಸಿದರು.

ನಗರದ ಕನ್ನಡ ಭವನದಲ್ಲಿ ಸ್ಲಂ ಜನಾಂದೋಲನ ಕರ್ನಾಟಕ, ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾ ವೇದಿಕೆಯಿಂದ ‘ನಗರ ವಂಚಿತ ಸಮುದಾಯ ಮಹಿಳಾ ಕಾರ್ಮಿಕರ ಮೇಲಿನ ಧೋರಣೆಗಳು ಮತ್ತು ಸೌಲಭ್ಯಗಳು’ ಕುರಿತು ಮಂಗಳವಾರ ಏರ್ಪಡಿಸಿದ್ದ ಹೈದರಾಬಾದ್‌ ಕರ್ನಾಟಕ ವಿಭಾಗಮಟ್ಟದ ಒಂದು ದಿನದ ಕಾರ್ಯಾಗಾರದಲ್ಲಿ ಮಾತನಾಡಿದರು.

ಮನೆಗೆಲಸ ಮಾಡುವ ಮಹಿಳೆಯರು, ಪೌರಕಾರ್ಮಿಕರು, ಬೀದಿ ವ್ಯಾಪಾರದಲ್ಲಿ ತೊಡಗಿಸಿಕೊಂಡ ಮಹಿಳೆಯರು, ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ ಮಹಿಳೆಯರು, ಹಮಾಲಿ ಮಾಡುವ ಮಹಿಳೆಯರು, ಚಿಂದಿ ಆಯುವ ಮಹಿಳೆಯರನ್ನು ಒಗ್ಗೂಡಿಸುವ ಕೆಲಸವನ್ನು ಸ್ಲಂ ಜನಾಂದೋಲನದ ಮೂಲಕ ಮಾಡಲಾಗುತ್ತಿದೆ ಎಂದು ಹೇಳಿದರು.

ADVERTISEMENT

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ ಆಂದೋಲನ ಆರಂಭಿಸಿದ್ದಾರೆ. ವಾಸ್ತವದಲ್ಲಿ ಸ್ವಚ್ಛತೆ ಮಾಡುತ್ತಿರುವವರೆಲ್ಲ ಕೊಳೆಗೇರಿಯಲ್ಲಿದ್ದಾರೆ. ಕೆಲಸ ಮಾಡುವವರು ಒಬ್ಬರು; ಅದರ ಪ್ರಚಾರ ಮಾತ್ರ ಮೋದಿ ಅವರಿಗೆ ಸಿಗುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಶೇ 18 ರಷ್ಟು ಮಹಿಳಾ ಕಾರ್ಮಿಕರು ಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಶೇ 70 ರಷ್ಟು ಮಹಿಳೆಯರು ಅಸಂಘಟಿತರಾಗಿ ಕೆಲಸ ಮಾಡುತ್ತಿದ್ದಾರೆ. ಬದುಕಿನಲ್ಲಿ ಸುರಕ್ಷತೆಯಿಲ್ಲದ ಕ್ಷೇತ್ರದಲ್ಲಿ ಬಹಳಷ್ಟು ಮಹಿಳೆಯರಿದ್ದಾರೆ. ಇವರಿಗಾಗಿ ಯಾವುದೇ ಕಾನೂನುಗಳು ಅನ್ವಯವಾಗದ ಸ್ಥಿತಿ ಇದೆ ಎಂದರು.

ಕಾರ್ಯಾಗಾರ ಉದ್ಘಾಟಿಸಿದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಜಾಗೃತಿ ದೇಶಮಾನೆ ಮಾತನಾಡಿ, ಕೊಳೆಗೇರಿಗಳಲ್ಲಿ ವಾಸಿಸುವ ಮಹಿಳೆಯರು ಊರ ಕಸಗೂಡಿಸುವ ಕೆಲಸ ಮಾಡುತ್ತಾರೆ. ಇಂಥವರು ಮನೆಯ ಸುತ್ತಮುತ್ತಲಿನ ವಾತಾವರಣ ಸ್ವಚ್ಚವಾಗಿಟ್ಟುಕೊಳ್ಳುವ ಕಡೆಗೂ ಗಮನ ಹರಿಸಬೇಕು. ಮೂಢನಂಬಿಕೆಗಳನ್ನು ಇಟ್ಟುಕೊಳ್ಳಬಾರದು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಒದಗಿಸಲು ಗಮನಹರಿಸಬೇಕು ಎಂದು ಬುದ್ಧಿವಾದ ಹೇಳಿದರು.

ಎಷ್ಟೇ ಸಣ್ಣದಾದ ಕೆಲಸವಿದ್ದರೂ ಶಿಕ್ಷಣಕ್ಕಾಗಿ ಸ್ವಲ್ಪ ಹಣ ಮೀಸಲಿಡಬೇಕು. ಮಕ್ಕಳಿಗಾಗಿ ಬಿಡುವು ಮಾಡಿಕೊಂಡು ಒಳ್ಳೆಯ ವಿಚಾರ, ಒಳ್ಳೆಯ ಮಾತು ಹೇಳಿ ಕೊಡಬೇಕು. ಸುತ್ತಲಿನ ವಾತಾವರಣ ಎಷ್ಟೇ ವಿರೋಧವಾಗಿದ್ದರೂ ಶಿಕ್ಷಣ ಕಡೆಗಿನ ಗಮನ ಕದಲಿಸಬಾರದು. ಶಿಕ್ಷಣದಿಂದ ಮಾತ್ರ ಬಡವರು ಸುಂದರ ಬದುಕು ಕಟ್ಟಿಕೊಳ್ಳಲು ಸಾಧ್ಯ. ದುಶ್ಚಟಗಳಿಂದ ದೂರ ಇರಬೇಕು. ಅದೇ ಹಣವನ್ನು ಮಕ್ಕಳ ಭವಿಷ್ಯಕ್ಕಾಗಿ ಕೂಡಿಡಬೇಕು ಎಂದು ತಿಳಿಸಿದರು.

‘ನನ್ನ ಪಾಲಕರು ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಆರು ಹೆಣ್ಣು ಮಕ್ಕಳು, ಒಬ್ಬ ಪುತ್ರನನ್ನು ಬೆಳೆಸಲು ಸಾಕಷ್ಟು ಕಷ್ಟ ಅನುಭವಿಸಿದ್ದಾರೆ. ನೆರೆಹೊರೆ ಜನರು ಏನೇ ಕೊಂಕಿನ ಮಾತುಗಳನ್ನಾಡಿದರೂ ತಾಯಿಯು ಅದನ್ನು ವಿರೋಧಿಸಿ ಶಿಕ್ಷಣ ಕೊಡಿಸಿದ್ದಾರೆ. ಅದರ ಫಲದಿಂದ ನಾವೆಲ್ಲರೂ ಶಿಕ್ಷಣ ಪಡೆದು ಸುಶಿಕ್ಷಿತರಾಗಿದ್ದೇವೆ. ಕಲಬುರ್ಗಿಯ ಬಾಪೂಜಿ ನಗರದ ಕೊಳೆಗೇರಿಯಲ್ಲಿ ಹುಟ್ಟಿದರೂ ಎಲ್ಲರೂ ಇಂದು ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗಿದೆ. ಇದಕ್ಕೆ ತಂದೆ–ತಾಯಿಯ ಒಳ್ಳೆಯ ವಿಚಾರ ಕಾರಣವಾಯಿತು. ಮಕ್ಕಳ ಜೀವನ ಸುಂದರವಾಗಿರಲು ತಂದೆ–ತಾಯಿ ಮೊದಲು ಮನಸ್ಸು ಮಾಡಬೇಕು’ ಎಂದು ಹೇಳಿದರು.
ಮಾದಿಗ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಚಾಲಕ ಅಂಬಣ್ಣ ಅರೋಲಿಕರ್‌ ಅಧ್ಯಕ್ಷತೆ ವಹಿಸಿದ್ದರು. ಸಾವಿತ್ರಿಬಾಯಿ ಫುಲೆ ಮಹಿಳಾ ಸಂಘಟನೆಯ ರೇಣುಕಾ ಸರಡಗಿ, ಸ್ಲಂ ಜನಾಂದೋಲನ ಕರ್ನಾಟಕದ ಪದಾಧಿಕಾರಿಗಳಾದ ಶೇಖರ್‌ಬಾಬು, ಗಣೇಶ ಕಾಂಬ್ಲೇಕರ್‌, ನೂರಜಾನ್‌, ನಾಗರಾಜ ಇದ್ದರು.

ರಾಯಚೂರು ಸ್ಲಂ ನಿವಾಸಿಗಳ ಕ್ರಿಯಾವೇದಿಕೆ ಅಧ್ಯಕ್ಷ ಜನಾರ್ಧನ್‌ ಹಳ್ಳಿ ಬೆಂಚಿ ಸ್ವಾಗತಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಸವರಾಜ ಹೊಸೂರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.