ADVERTISEMENT

ಕೆವಿಕೆಯಲ್ಲಿ ಮಣ್ಣು, ನೀರು ಪರೀಕ್ಷೆ ಆರಂಭ

ನಿಗದಿತ ಶುಲ್ಕ ಪಾವತಿಸಿ ವರದಿಗಳನ್ನು ಪಡೆಯಬಹುದು

ನಾಗರಾಜ ಚಿನಗುಂಡಿ
Published 10 ಸೆಪ್ಟೆಂಬರ್ 2020, 15:23 IST
Last Updated 10 ಸೆಪ್ಟೆಂಬರ್ 2020, 15:23 IST
ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರ
ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರ   

ರಾಯಚೂರು: ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಣ್ಣು ಹಾಗೂ ನೀರು ಪರೀಕ್ಷಾಲಯವನ್ನು ಪುನರಾರಂಭಿಸಲಾಗಿದೆ.

ಭೂಸತ್ವದ ಆಧಾರದ ಮೇಲೆ ರಸಗೊಬ್ಬರ ಮತ್ತು ಸಾವಯವ ಗೊಬ್ಬರಗಳನ್ನು ಬಳಸುವುದಕ್ಕೆ ಮಣ್ಣು ಪರೀಕ್ಷೆ ಮಾಡಿಸುವುದು ರೈತರಿಗೆ ಅನುಕೂಲವಾಗಲಿದೆ. ದಿನಕ್ಕೆ 15 ರಿಂದ 20 ಮಾದರಿಗಳನ್ನು ಪರೀಕ್ಷೆ ಮಾಡಲಾಗುತ್ತದೆ. ಮಣ್ಣು ಪರೀಕ್ಷೆಗೆ ₹200 ಮತ್ತು ನೀರು ಪರೀಕ್ಷೆ ₹100 ಶುಲ್ಕ ಪಾವತಿಸಬೇಕು.

ಮಣ್ಣಿನ ಭೌತಿಕ, ರಾಸಾಯನಿಕ ಗುಣಧರ್ಮಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಿಸುವುದಕ್ಕಾಗಿ ಪರೀಕ್ಷೆ ನಡೆಸಲಾಗುತ್ತದೆ. ಮಣ್ಣಿನ ಆರೋಗ್ಯವನ್ನು ನಿಖರವಾಗಿ ಪತ್ತೆ ಮಾಡುವುದರಿಂದ ಅದು ನೀರು ಹಿಡಿದಿಟ್ಟುಕೊಳ್ಳುವ ಪ್ರಮಾಣ ಹಾಗೂ ಗಾಳಿ ಆಡುವ ಪ್ರಮಾಣಗಳು ಗೊತ್ತಾಗುತ್ತದೆ. ಮಣ್ಣಿನ ಆರೋಗ್ಯವನ್ನು ಮತ್ತು ಸಾಮರ್ಥ್ಯವನ್ನು ತಿಳಿದುಕೊಳ್ಳದೆ ರಸಗೊಬ್ಬರ ಹಾಗೂ ಸಾವಯವ ಗೊಬ್ಬರಗಳನ್ನು ಬಳಕೆ ಮಾಡಿದರೆ ವ್ಯತಿರೀಕ್ತ ಪರಿಣಾಮ ಉಂಟಾಗುವ ಸಾಧ್ಯತೆಯೇ ಹೆಚ್ಚು.

ADVERTISEMENT

ಯಾವುದೇ ಮಣ್ಣಿನಲ್ಲಿ ಯಾವಯಾವ ಬೆಳೆಗಳನ್ನು ಬೆಳೆಯಬಹುದು ಎಂಬುದನ್ನು ಪರೀಕ್ಷೆ ಮಾಡಿಸಿ ತಿಳಿದುಕೊಂಡಿದ್ದರೆ, ಕೃಷಿಯನ್ನು ಲಾಭಕರವಾಗುವ ರೀತಿಯಲ್ಲಿ ಕೈಗೊಳ್ಳಬಹುದು. ಮಣ್ಣಿಗೆ ತಕ್ಕಂತಹ ಬೆಳೆಗಳನ್ನು ಬೆಳೆದು ಲಾಭ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಮಣ್ಣಿನ ಮಾದರಿ ಸಂಗ್ರಹಿಸುವ ವಿಧಾನ: ಇಡೀ ಜಮೀನು ಪ್ರತಿನಿಧಿಸುವ ರೀತಿಯಲ್ಲಿಯೇ ಮಣ್ಣಿನ ಮಾದರಿ (ಸ್ಯಾಂಪಲ್‌) ಸಂಗ್ರಹಿಸಿಕೊಂಡು ಪರೀಕ್ಷಾಲಯಕ್ಕೆ ತರಬೇಕಾಗುತ್ತದೆ. ಜಮೀನಿನಲ್ಲಿ ನಾಲ್ಕರಿಂದ ಐದು ಕಡೆಗಳಲ್ಲಿ 15 ರಿಂದ 30 ಸೆಂಟಿಮೀಟರ್‌ವರೆಗೂ ಇಂಗ್ಲಿಷ್‌ ‘ವಿ’ ಅಕ್ಷರ ಆಕಾರದಲ್ಲಿ ಗುಂಡಿ ತೆಗೆದು, ಅದರಲ್ಲಿನ ಮಣ್ಣಿನ ಮಾದರಿಯನ್ನು ಒಂದು ಕಡೆ ಸಂಗ್ರಹಿಸಬೇಕು. ಅದರನ್ನು ಚೆನ್ನಾಗಿ ಮಿಶ್ರಣಗೊಳಿಸಿ ಅದನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿ ಒಂದು ಭಾಗವನ್ನು ಮಾತ್ರ ಪರೀಕ್ಷೆಗಾಗಿ ತೆಗೆದುಕೊಂಡು ಬರಬೇಕು.

ಮಣ್ಣಿನ ಸಂಗ್ರಹಿಸಿ ಅದರಲ್ಲಿನ ಕಲ್ಲು, ಬೇರು, ಇತರೆ ಕೊಳೆಗಳನ್ನು ತೆಗೆದು ಹಾಕಬೇಕು. ಅಂತಿಮವಾಗಿ 500 ಗ್ರಾಂವರೆಗೂ ಶುದ್ಧವಾದ ಮಣ್ಣನ್ನು ಒಂದು ಪ್ಲಾಸ್ಟಿಕ್‌ ಪೇಪರ್‌ನಲ್ಲಿ ಹರಡಿ ನೆರಳಿನಲ್ಲಿ ಒಣಗಿಸಬೇಕು. ಆನಂತರ ಪರೀಕ್ಷೆಗಾಗಿ ತೆಗೆದುಕೊಂಡು ಬರಬೇಕು.
ಮಣ್ಣಿನ ವರ್ಣ ಆಧರಿಸಿ ಬೇರೆ ಬೇರೆ ಮಾದರಿಗಳನ್ನು ತರಬೇಕು. ಮಣ್ಣಿನ ಪರೀಕ್ಷಾಲಯವು ಬೆಳಿಗ್ಗೆಯಿಂದ 9 ರಿಂದ ಸಂಜೆ 5 ರವರೆಗೂ ತೆರೆದಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಮಣ್ಣು ವಿಜ್ಞಾನಿ ಡಾ.ಎಸ್‌.ಎನ್‌.ಭಟ್‌ (ಮೊ. ಸಂಖ್ಯೆ 9844488725) ಅವರನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.