ADVERTISEMENT

ಸಕಲ ಜೀವಿಗಳಿಗೆ ಆಧಾರ ಸ್ಥಂಭ ಮಣ್ಣು: ಕೊಟ್ರೆಪ್ಪ

ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಮಣ್ಣು ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 13:44 IST
Last Updated 7 ಡಿಸೆಂಬರ್ 2021, 13:44 IST
ರಾಯಚೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೊಟ್ರೆಪ್ಪ ಬಿ. ಕೊರೆರ್ ಉದ್ಘಾಟಿಸಿದರು
ರಾಯಚೂರು ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮವನ್ನು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೊಟ್ರೆಪ್ಪ ಬಿ. ಕೊರೆರ್ ಉದ್ಘಾಟಿಸಿದರು   

ರಾಯಚೂರು: ಮಣ್ಣು ಸಸ್ಯಗಳಿಗೆ ಬೇಕಾದ ಪೋಷಕಾಂಶಗಳನ್ನು ಒದಗಿಸುವ ಜೀವಂತ ವಸ್ತು. ಸಕಲ ಜೀವಿಗಳಿಗೆ ಆಧಾರ ಸ್ಥಂಭವಾಗಿದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ಕೊಟ್ರೆಪ್ಪ ಬಿ. ಕೊರೆರ್ ಹೇಳಿದರು.

ರಾಯಚೂರು ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಕೋರಮಂಡಲ್ ಇಂಟರ್‌ನ್ಯಾಷನಲ್ ಲಿ., ರಿಲಯನ್ಸ್ ಫೌಂಡೇಷನ್ ಹಾಗೂ ಮೈರಾಡ್‌ನಿಂದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಉತ್ಪಾದನೆ ಸುಸ್ಥಿರವಾಗಿರಬೇಕಾದರೆ ಮಣ್ಣಿನ ಪಾತ್ರ ಪ್ರಮುಖವಾದುದು. ಪ್ರತಿವರ್ಷ ಸುಮಾರು 5 ಮಿಲಿಯನ್ ಟನ್‌ಗಳಷ್ಟು ಮಣ್ಣು ಸವಕಳಿಗೆ ತುತ್ತಾಗುತ್ತಿದ್ದು, ಇದನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಹಾಗೂ ಅಚ್ಚುಕಟ್ಟು ಪ್ರದೇಶದಲ್ಲಿ ಏರುತ್ತಿರುವ ಸವಳು ಮತ್ತು ಕ್ಷಾರ ಮಣ್ಣಿನ ಕುರಿತು ರೈತರು ಕೃಷಿ ವಿಜ್ಞಾನ ಕೇಂದ್ರದ ತಜ್ಞರಿಂದ ಮಾಹಿತಿ ಪಡೆದು ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ADVERTISEMENT

ವಿಶೇಷ ಉಪನ್ಯಾಸ ನೀಡಿದ ರಾಯಚೂರು ಕೃಷಿ ವಿಶ್ವವಿದ್ಯಾಲಯದ ನಿವೃತ್ತ ಸಹ ಸಂಶೋಧನಾ ನಿರ್ದೇಶಕ ಆರ್. ಎ. ಶೆಟ್ಟಿ ಮಾತನಾಡಿ, ಬೆಳೆ ತ್ಯಾಜ್ಯಗಳನ್ನು ಸುಡುವುದರ ಬದಲು ರೋಟೊವೇಟರ್ ಬಳಸಿ ಭೂಮಿಗೆ ಮರುಕಳಿಸಬೇಕು. ಬದುಗುಂಟ ಗೊಬ್ಬರದ ಗಿಡಗಳನ್ನು ನೆಡಬೇಕು. ಭತ್ತದಲ್ಲಿ ನೀರು ನಿರ್ವಹಣೆಯನ್ನು ವೈಜ್ಞಾನಿಕ ಮಾಡಿ ನೀರಿನ ಮಿತ ಬಳಕೆ ಮತ್ತು ಸವಳು ಮಣ್ಣಿನ ಉಗಮವನ್ನು ನಿಯಂತ್ರಿಸಬೇಕು ಎಂದು ರೈತರಿಗೆ ತಿಳಿಸಿದರು.

ಕೃಷಿ ಇಲಾಖೆಯ ಪ್ರಭಾರಿ ಜಂಟಿ ನಿರ್ದೇಶಕ ನಯೀಮ್ ಹುಸೇನ್ ಮಾತನಾಡಿ, ವಿಶ್ವದಲ್ಲಿ ಶೇ 11 ರಷ್ಟು ಭೂಮಿ ಉಳುಮಿಗೆ ಯೋಗ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಕೃಷಿಕರು ಶಿಫಾರಸಿಗಿಂತ ಅತಿಹೆಚ್ಚು ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದಾರೆ. ಇದರಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ. ಆದ್ದರಿಂದ, ಕೊಟ್ಟಿಗೆ ಗೊಬ್ಬರ, ಜೈವಿಕ ಗೊಬ್ಬರವನ್ನು ಬಳಸಿ ಸುಸ್ಥಿರ ಕೃಷಿಯನ್ನು ಮಾಡಿ ಮಣ್ಣಿನ ಆರೋಗ್ಯವನ್ನು ಹೆಚ್ಚಿಸಬೇಕು ಎಂದು ತಿಳಿಸಿದರು.

ಕೊಪ್ಪಳದ ಬಿಯಾಂಡ ರೆಸ್ಪಾನ್ಸಿಬಲಿಟಿ ಫಾರ್ಮಿಂಗ್ ಸಂಸ್ಥಾಪಕ ಡಾ. ಶೇಷಗಿರಿ ಗುಬ್ಬಿ ಮಾತನಾಡಿ, ಭೂಮಿಯಲ್ಲಿ ಸಾವಯವ ಇಂಗಾಲದ ಪ್ರಮಾಣ ಕುಸಿಯುತ್ತಿದ್ದು ಇದನ್ನು ಹೆಚ್ಚಿಗೆ ಮಾಡಲು ರೈತರು ಕಾರ್ಯಪ್ರವೃತ್ತರಾಗಬೇಕು. ಅತಿಯಾಗಿ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಣ್ಣಿನ ಆರೋಗ್ಯ ಕೆಡುತ್ತಿದೆ. ವಿಜ್ಞಾನಿಗಳ ಸಲಹೆ ಮೇರೆಗೆ ಬೆಳೆಗಳಿಗೆ ರಾಸಾಯನಿಕ ಗೊಬ್ಬರಗಳನ್ನು ಬಳಸಿ, ಮಣ್ಣಿನ ಋಣ ತಾಯಿಯ ಋಣದಂತೆ, ನಮ್ಮ ಪೂರ್ವಜರು ನಮಗೆ ಆರೋಗ್ಯವಾದ ಮಣ್ಣನ್ನು ನೀಡಿದ್ದಾರೆ. ನಾವು ಮುಂದಿನ ಪೀಳಿಗೆಗೆ ಯೋಗ್ಯವಾದ ಮಣ್ಣನ್ನು ನೀಡಬೇಕು. ಸಸ್ಯಗಳಿಗೆ ಗೊಬ್ಬರ ಹಾಗೂ ನೀರು ಎಷ್ಟು ಬೇಕು ಅಷ್ಟು ಮಾತ್ರ ಬೆಳೆಗಳಿಗೆ ಒದಗಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಎಸ್.ಎನ್. ಭಟ್ ಪ್ರಾಸ್ತಾವಿಕ ಮಾತನಾಡಿ, ಥೈಲಿಂಡಿನ ದೊರೆ ಭೂಮಿ ಬೋಲ್ ಅಡಿಲಾದೀಚ್ ಇವರ ಜನ್ಮ ದಿನದ ಸ್ಮರಣಾರ್ಥ ವಿಶ್ವ ಮಣ್ಣು ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರಾದ ತ್ರಿವಿಕ್ರಮ ಜೋಶಿ, ಸುನೀಲಕುಮಾರ ವರ್ಮ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಾ. ಡಿ.ಎಂ. ಚಂದರಗಿ ಮಾತನಾಡಿದರು.

ರಾಯಚೂರು ತಾಲ್ಲೂಕಿನ ಹೆಂಬರಾಳ ಗ್ರಾಮದ 20 ರೈತರಿಗೆ ಸಾಂಕೇತಿಕವಾಗಿ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಯಿತು. ಸಹಾಯಕ ಕೃಷಿ ನಿರ್ದೇಶಕಿ ದೀಪಾ ಎಲ್., ರಿಲಯನ್ಸ್‌ ಫೌಂಡೇಷನ್‌ ಕಾರ್ಯಕ್ರಮ ವ್ಯವಸ್ಥಾಪಕ ಮಂಜುನಾಥ ಮೊಕಾಶಿ, ಮೈರಾಡ್‌ ಸಂಸ್ಥೆಯ ದುರ್ಗಪ್ಪ, ಕೋರಮಂಡಲ್ ಇಂಟರ್‌ನ್ಯಾಷನಲ್ ಲಿ., ಬೇಸಾಯ ತಜ್ಞ ಸುನೀಲ, ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಪ್ರಹ್ಲಾದ ಇದ್ದರು.

ತೋಟಗಾರಿಕೆ ವಿಜ್ಞಾನಿ ಡಾ. ಹೇಮಲತಾ ಕೆ.ಜೆ., ಸ್ವಾಗತಿಸಿದರು, ಕೀಟಶಾಸ್ತ್ರ ವಿಜ್ಞಾನಿ ಡಾ. ಶ್ರೀವಾಣಿ ಜಿ.ಎನ್., ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.