ADVERTISEMENT

ಸಿಂಧನೂರು: ನೀರಿನ ಸಮಸ್ಯೆ ಪರಿಹರಿಸಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2020, 3:59 IST
Last Updated 5 ಸೆಪ್ಟೆಂಬರ್ 2020, 3:59 IST
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಆರ್‌ವೈಎಫ್ ಕಾರ್ಯಕರ್ತರು ಶುಕ್ರವಾರ ಇಒ ಪವನಕುಮಾರಗೆ ಮನವಿ ಪತ್ರ ಸಲ್ಲಿಸಿದರು
ಸಿಂಧನೂರಿನ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಆರ್‌ವೈಎಫ್ ಕಾರ್ಯಕರ್ತರು ಶುಕ್ರವಾರ ಇಒ ಪವನಕುಮಾರಗೆ ಮನವಿ ಪತ್ರ ಸಲ್ಲಿಸಿದರು   

ಸಿಂಧನೂರು: ತಾಲ್ಲೂಕಿನ ಕಲಮಂಗಿ ಗ್ರಾಮದ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯದವರು ವಾಸಿಸುವ ಏರಿಯಾದಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ, ಗ್ರಾಮಕ್ಕೆ ಮೂಲಸೌಕರ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಕ್ರಾಂತಿಕಾರಿ ಯುವಜನ ರಂಗ ತಾಲ್ಲೂಕು ಘಟಕ ಶುಕ್ರವಾರ ಸ್ಥಳೀಯ ತಾಲ್ಲೂಕು ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿತು.

ಎಸ್‌ಸಿ, ಎಸ್‌ಟಿ ಸಮುದಾಯದವರು ವಾಸಿಸುವ ಏರಿಯಾಕ್ಕೆ ನೀರು ಪೂರೈಸಲು ಕಲ್ಮಂಗಿ ಗ್ರಾಮ ಪಂಚಾಯಿತಿಯಿಂದ ರೈತರೊಬ್ಬರ ಹೊಲದಲ್ಲಿ ಈ ಹಿಂದೆ ಕೊಳವೆಬಾವಿ ಕೊರೆಯಿಸಲಾಗಿತ್ತು. ಆದರೆ ಹೊಲದ ಮಾಲೀಕರು ತಕರಾರು ತೆಗೆದು, ನೀರು ಪೂರೈಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಸರಬರಾಜು ಸ್ಥಗಿತಗೊಂಡಿದೆಎಂದು ಆರ್‌ವೈಎಫ್ ಸಂಚಾಲಕ ನಾಗರಾಜ್ ಪೂಜಾರ್ ದೂರಿದರು.

ಇದರಿಂದಾಗಿ ಕಳೆದ 8 ದಿನಗಳಿಂದ ಈ ಏರಿಯಾದಲ್ಲಿ ನೀರಿನ ಅಭಾವ ಉಂಟಾಗಿದೆ. ಜನರು ಕಿ.ಮೀ ತೆರಳಿ ಬೋರ್‌ವೆಲ್‌ನಿಂದ ನೀರೊತ್ತು ತರುವಂತಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಗಮನಕ್ಕೆ ತಂದಾಗ್ಯೂ ಸ್ಪಂದಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದರು.

ADVERTISEMENT

ಗ್ರಾಮದಲ್ಲಿ ಬಹಳಷ್ಟು ಜನರು ಕೆಲಸವಿಲ್ಲದೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದು, ಆದರೆ ಅವರಿಗೆ ಸಕಾಲಕ್ಕೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ದೊರೆಕಿಸಿಕೊಡಬೇಕು. ಇಲ್ಲಿನ ರಸ್ತೆಗಳು ಮಳೆ ಬಂದರೆ ಕೆಸರು ಗದ್ದೆಗಳಂತಾಗುತ್ತವೆ. ರಸ್ತೆ ದುರಸ್ತಿ ಮಾಡಬೇಕು ಎಂದು ಆಗ್ರಹಿಸಿದರು.

ಮನವಿ ಪತ್ರ ಸ್ವೀಕರಿಸಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಪವನಕುಮಾರ, ‘ಶೀಘ್ರದಲ್ಲಿಯೇ ಗ್ರಾಮಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆ ಪರಿಶೀಲಿಸಿ ಬಗೆಹರಿಸಲಾಗುವುದು’ ಎಂದು ಭರವಸೆ ನೀಡಿದರು.

ಮುಖಂಡರಾದ ಬಿ.ಎನ್.ಯರದಿಹಾಳ, ಬಸವರಾಜ ಏಕ್ಕಿ, ಆರ್.ಎಚ್.ಕಲಮಂಗಿ, ಮಲ್ಲಿಕಾರ್ಜುನ ಕುರುಗೋಡು, ಹುಸೇನಪ್ಪ ತಿಡಿಗೋಳ, ಹನುಮಂತ, ಶರಣಬಸವ, ನಾಗರಾಜ, ಹುಲಿಗೇಶ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.