ADVERTISEMENT

ಎನ್‌ಸಿಇಆರ್‌ಟಿ ಲಾಂಛನ ಕರುನಾಡಿನ ಹೆಮ್ಮೆ

ಈರಣ್ಣ ಬೆಂಗಾಲಿ
Published 29 ಡಿಸೆಂಬರ್ 2024, 0:10 IST
Last Updated 29 ಡಿಸೆಂಬರ್ 2024, 0:10 IST
ಎನ್‌ಸಿಇಆರ್‌ಟಿ ಲಾಂಛನ
ಎನ್‌ಸಿಇಆರ್‌ಟಿ ಲಾಂಛನ   

ರಾಯಚೂರು ಅನ್ನ, ಚಿನ್ನ ಮತ್ತು ಬೆಳಕು ನೀಡುವ ಜಿಲ್ಲೆಯಾಗಿದ್ದು, ಈ ನೆಲಕ್ಕಾಗಿ ಇತಿಹಾಸದಲ್ಲಿ ಅನೇಕ ಕದನಗಳು ನಡೆದಿವೆ. ಭವ್ಯ ಇತಿಹಾಸ ಹೊಂದಿರುವ ರಾಯಚೂರು ಜಿಲ್ಲೆಯ ಉದ್ದಗಲಕ್ಕೂ ಸ್ಮಾರಕಗಳನ್ನು, ಕೋಟೆಗಳನ್ನು, ಅವಶೇಷಗಳನ್ನು ಕಾಣಬಹುದು. ಇವುಗಳ ಮಧ್ಯೆ ಜಿಲ್ಲೆಯ ಮಸ್ಕಿ ಪಟ್ಟಣವು ದೇಶವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದೆ. ಮಸ್ಕಿಗೆ ಈ ಹಿಂದೆ ‘ಮೊಸಂಗಿಪುರ’ ಎಂದು ಹೆಸರಿರುವುದನ್ನು ಶಾಸನಗಳ ಮೂಲಕ ತಿಳಿದು ಬಂದಿದ್ದು, ಈ ನೆಲದಲ್ಲಿ ದೊರೆತ ಶಿಲಾಶಾಸನವೊಂದು ಸಾಮ್ರಾಟ ಅಶೋಕನೇ ‘ದೇವನಾಂಪ್ರಿಯ’ ಎಂದು ಜಗಕ್ಕೆ ಅನಾವರಣಗೊಳಿಸಿತು. ಪ್ರಾಗೈತಿಹಾಸಿಕ ನೆಲೆ ಹೊಂದಿದ ಇಲ್ಲಿನ ಬೆಟ್ಟಗುಡ್ಡಗಳ ಬಂಡೆಗಳ ಮೇಲೆ ಶಿಲಾ ರೇಖಾಚಿತ್ರಗಳನ್ನು, ಕೆತ್ತನೆಗಳನ್ನು ಈಗಲೂ ಕಾಣಬಹುದು. ಇತಿಹಾಸ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಮಸ್ಕಿ ಮಹತ್ವವನ್ನು ಪಡೆದಿದೆ. ಇತಿಹಾಸಕ್ಕೆ ತಳುಕು ಹಾಕಿಕೊಂಡ ಶೈಕ್ಷಣಿಕ ಕ್ಷೇತ್ರದಲ್ಲಿಯೂ ಅಪಾರವಾದ ಖ್ಯಾತಿಯನ್ನು ಪಡೆದಿದೆ.

ಮಸ್ಕಿಯ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನವು ಎರಡನೇ ಶ್ರೀಶೈಲ ಎಂದೇ ಖ್ಯಾತಿ ಪಡೆದಿದ್ದು, ಇದೇ ದೇವಸ್ಥಾನದ ದಕ್ಷಿಣ ದಿಕ್ಕಿನ ಎಡಬದಿಯ ಹೊರಗೋಡೆಯ ಮೇಲಿನ ಮೂರು ಮುಖದ ಹಂಸಗಳ ಉಬ್ಬುಶಿಲ್ಪ ಕೆತ್ತನೆಯು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಲಾಂಛನವಾಗಿ ಬಳಕೆಯಾಗಿದೆ. ದೇಶದ ಉದ್ದಕ್ಕೂ ಸಿಬಿಎಸ್‌ಸಿ ಪಠ್ಯಪುಸ್ತಕ ಒದಗಿಸುವ ಭಾರತದ ಏಕೈಕ ಸಂಸ್ಥೆಯಾದ ಎನ್‌ಸಿಇಆರ್‌ಟಿ ತನ್ನ ಪುಸ್ತಕಗಳಲ್ಲಿ ಮೂರು ಮುಖದ ಹಂಸಗಳ ಲಾಂಛನವನ್ನು ನೋಡಬಹುದು. ಈ ಹಿಂದೆ ಇಲ್ಲಿನ ಉತ್ಖನನದಲ್ಲಿ ದೊರೆತ ಮೂರು ಮುಖಗಳ ಹಂಸಗಳ ಉಬ್ಬುಶಿಲ್ಪವನ್ನು ದೇವಾಲಯದ ಗೋಡೆಗೆ ಅಳವಡಿಸಲಾಗಿದೆ. ಲಾಂಛನಲ್ಲಿನ ಮೂರು ಮುಖದ ಹಂಸಗಳು ವೃತ್ತಾಕಾರದಲ್ಲಿ ಪರಸ್ಪರ ಬೆಸೆದು ಕೊಂಡಿವೆ. ಹಂಸಗಳು ಜ್ಞಾನದ ಮತ್ತು ನಿರಂತರತೆಯ ಪ್ರತೀಕವಾಗಿವೆ.

ಏನಿದು ಎನ್‌ಸಿಇಆರ್‌ಟಿ?

ಎನ್‌ಸಿಇಆರ್‌ಟಿಯು ನವದೆಹಲಿಯಲ್ಲಿ 1961 ರಲ್ಲಿ ಸ್ಥಾಪಿತವಾದ ಸ್ವತಂತ್ರ ಸಂಸ್ಥೆ. ಭಾರತದ ಶಾಲಾ ಶಿಕ್ಷಣದ ಪದ್ದತಿಯಲ್ಲಿ ಶೈಕ್ಷಣಿಕ ಗುಣಮಟ್ಟವನ್ನು ಸುಧಾರಣೆ ಮಾಡಲು ಮತ್ತು ಶಿಕ್ಷಣವನ್ನು ಸುಧಾರಿಸುವ ಉದ್ದೇಶವನ್ನು ಹೊಂದಿದೆ. ಸಂಪೂರ್ಣ ಕೇಂದ್ರದ ಸ್ವಾಮ್ಯಕ್ಕೆ ಒಳಪಟ್ಟ ಎನ್‌ಸಿಇಆರ್‌ಟಿಯು ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರಮಟ್ಟದಲ್ಲಿ ನೀತಿ ನಿಯಮಗಳು, ತರಬೇತಿ, ಸಂಶೋಧನೆ ಮುಂತಾದ ಅಗತ್ಯಗಳನ್ನು ರೂಪಿಸುತ್ತದೆ. ದೇಶದ ಶಿಕ್ಷಣ ನೀತಿಯಲ್ಲಿ ಏಕರೂಪತೆ ತರಲು ಕಾರ್ಯ ನಿರ್ವಹಿಸುತ್ತಿದೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಿಕ್ಷಣ ವಿಭಾಗದ ಶೈಕ್ಷಣಿಕ ಭಾಗವೇ ಇದಾಗಿದ್ದು, ಇದರಲ್ಲಿ ನಿರ್ದೇಶಕ, ಜಂಟಿ ನಿರ್ದೇಶಕರು, ಪ್ರಾಧ್ಯಾಪಕರು, ರೀಡರ್, ಉಪನ್ಯಾಸಕರು ಒಳಗೊಂಡಿದ್ದು, ದೇಶದಲ್ಲಿ ನಾಲ್ಕು ಪ್ರಾದೇಶಿಕ ಶಿಕ್ಷಣ ಸಂಸ್ಥೆಗಳು, ಶಿಕ್ಷಕ ತರಬೇತಿ ಹಾಗೂ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿವೆ. ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿ ಎನ್‌ಸಿಇಆರ್‌ಟಿಯ ರಾಷ್ಟ್ರಮಟ್ಟದಲ್ಲಿ ಶೈಕ್ಷಣಿಕ ಸಮಸ್ಯೆಗಳನ್ನು ಕುರಿತು ಸಂಶೋಧನೆಯನ್ನು ಮಾಡುವುದು, ಪಠ್ಯಕ್ರಮ, ಬೋಧನಾ ಸಲಕರಣೆಗಳು, ಬೋಧನಾ ತಂತ್ರಗಳು, ಬೋಧನಾ ವಿಧಾನಗಳು, ಮೌಲ್ಯಮಾಪನ ಮತ್ತು ಬೋಧನೆಗೆ ಸಂಬಂಧಪಟ್ಟ ಎಲ್ಲಾ ವಿಷಯಗಳನ್ನು ನಿರ್ವಹಿಸುವುದು, ರಾಷ್ಟ್ರಮಟ್ಟದಲ್ಲಿ ಶಿಕ್ಷಕರಿಗೆ ತರಬೇತಿ ನೀಡುವುದು, ರಾಷ್ಟ್ರೀಯ ಶಿಕ್ಷಣ ಪದ್ಧತಿಯಲ್ಲಿ ಕಾಲಕಾಲಕ್ಕೆ ಸುಧಾರಿತ ರೀತಿಯ ಬದಲಾವಣೆಗಳನ್ನು ಜಾರಿಗೆ ತುರುವುದು ಅಲ್ಲದೇ ಶಿಕ್ಷಣದ ಪ್ರತಿಯೊಂದು ವಿಭಾಗದಲ್ಲಿ ಸಂಶೋಧನೆ ಕೈಗೊಳ್ಳಲು ನೆರವಾಗುವುದು ಇವುಗಳನ್ನು ಒಳಗೊಂಡಂತೆ ಇನ್ನು ಮುಂತಾದ ಕಾರ್ಯಗಳು, ಕರ್ತವ್ಯಗಳನ್ನು ನಿಭಾಯಿಸುತ್ತದೆ. ಇಂತಹ ಮಹತ್ವದ ಸಂಸ್ಥೆಯು ರಾಷ್ಟ್ರೀಯ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಹೀಗೆ ತನ್ನ ಮೂರು ಧೇಯ್ಯೋದ್ದೇಶಗಳಿಗೆ ಅನುಸಾರವಾಗಿ ಲಾಂಛನ ಹೊಂದಿದ್ದು, ಈ ಲಾಂಛನವನ್ನು ಮಸ್ಕಿಯ ಮಲ್ಲಿಕಾರ್ಜುನ ದೇವಸ್ಥಾನದಿಂದ ತೆಗೆದುಕೊಂಡಿದ್ದು ಎಂದು ಸಂಸ್ಥೆ ಹೇಳಿಕೊಂಡಿದೆ.

ADVERTISEMENT

‘ಮಲ್ಲಿಕಾರ್ಜುನ ದೇವಸ್ಥಾನದ ಮೂರು ಮುಖದ ಹಂಸದ ಶಿಲಾಫಲಕವು ಕ್ರಿ.ಶ. 17 ಅಥವಾ 18ನೇ ಶತಮಾನದ್ದು. ವಿಜಯನಗರ ಸಾಮ್ರಾಜ್ಯದ ನಂತರದ ಕಾಲದ್ದು ಆಗಿರಬಹುದು. ಕಲ್ಯಾಣ ಚಾಲುಕ್ಯರ, ಚೋಳರ, ವಿಜಯನಗರದ ಸಾಮ್ರಾಜ್ಯದ ಕುರುಹುಗಳು ಇಲ್ಲಿದ್ದು, ಪ್ರಾಚೀನ ಕಾಲದ ಇನ್ನೂ ಅನೇಕ ಶಾಸನಗಳು, ಸ್ಮಾರಕಗಳು, ರೇಖಾಚಿತ್ರಗಳು ಈ ಪ್ರದೇಶದ ಬೆಟ್ಟಗುಡ್ಡಗಳಲ್ಲಿ ಇರಬಹುದು. ಅವುಗಳನ್ನು ನಿರಂತರ ಉತ್ಖನನ, ಸಂಶೋಧನೆ ಮೂಲಕ ಹೊರಹಾಕಬೇಕು’ ಎಂದು ಇತಿಹಾಸ ಸಂಶೋಧಕ ಚನ್ನಬಸವ ಮಲ್ಕಂದಿನ್ನಿ ಅವರು ಹೇಳುತ್ತಾರೆ.

‘ದೇಶದ ವಿದ್ಯಾರ್ಥಿಗಳು ಹೆಮ್ಮೆಯಿಂದ ಸಂದರ್ಶಿಸುವ ಶೈಕ್ಷಣಿಕ ಮಹತ್ವದ ತಾಣವಾಗಬಹುದಾದ ಮಸ್ಕಿಯ ಶಿಲಾಶಾಸನ, ಮಲ್ಲಿಕಾರ್ಜುನ ದೇವಾಲಯದ ಗೋಡೆಯ ಎನ್‌ಸಿಇಆರ್‌ಟಿ ಲಾಂಛನ ಮತ್ತು ದೇಶದ ಏಕೈಕ ಕಾರ್ಯನಿರತ ಚಿನ್ನದ ಗಣಿ ಇರುವ ಹಟ್ಟಿ, ಪ್ರಾಗೈತಿಹಾಸಿಕ ನೆಲೆಗಳಿರುವ ಪಿಕಳಿಹಾಳ ಮತ್ತು ಮುದಗಲ್‌ ಕೋಟೆಗಳನ್ನು ಸೇರಿಸಿ ಶೈಕ್ಷಣಿಕ ಪ್ರವಾಸದ ಹಬ್ ಅನ್ನು ಪ್ರವಾಸೋದ್ಯಮ ಇಲಾಖೆ ರೂಪಿಸಬೇಕು. ಅಲ್ಲಿನ ಸ್ಥಳೀಯರಾದರೂ ರಾಷ್ಟ್ರೀಯ ಮಹತ್ವದ ಸ್ಮಾರಕಗಳ ಹತ್ತಿರ ಅವುಗಳ ಮಹತ್ವ ವಿವರಿಸುವ ಫಲಕವನ್ನಾದರೂ ಬರೆಯಿಸಿ ಹಾಕುವ ಮುಂದಡಿ ಇಡಬೇಕಿದೆ’ ಎಂದು ಲೇಖಕ ಚಿದಾನಂದ ಸಾಲಿ ಹೇಳುತ್ತಾರೆ.

ರಾಯಚೂರು ಇತಿಹಾಸದ ಪುಟದಲ್ಲಿ ತನ್ನದೇ ಆದ ಹೆಸರನ್ನು ಹೊಂದಿದ್ದು, ಶೈಕ್ಷಣಿಕ ಕ್ಷೇತ್ರದ ಮಸ್ಕಿಯ ಎನ್‌ಸಿಇಆರ್‌ಟಿ ಲಾಂಛನ ಹೆಸರನ್ನು ತಂದುಕೊಟ್ಟಿದೆ. ಇದು ಕರ್ನಾಟಕಕ್ಕೇ ಹೆಮ್ಮೆ.

ದೇವಸ್ಥಾನದ ಗೋಡೆಯ ಚಿತ್ರ
ಮಲ್ಲಿಕಾರ್ಜುನ ದೇವಸ್ಥಾನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.