ADVERTISEMENT

ಕೊರೊನಾ ವೈರಸ್‌: ರಿಮ್ಸ್‌ನಲ್ಲಿ ವಿಶೇಷ ವಾರ್ಡ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2020, 14:26 IST
Last Updated 8 ಫೆಬ್ರುವರಿ 2020, 14:26 IST
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ರಿಮ್ಸ್) ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ವೈರಸ್‌ ಕಾಯಿಲೆ ತಪಾಸಣೆಗಾಗಿ ಪ್ರತ್ಯೇಕ ಕೇಂದ್ರ ಆರಂಭಿಸಲಾಗಿದೆ
ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯ (ರಿಮ್ಸ್) ಆಸ್ಪತ್ರೆಯಲ್ಲಿ ಶಂಕಿತ ಕೊರೊನಾ ವೈರಸ್‌ ಕಾಯಿಲೆ ತಪಾಸಣೆಗಾಗಿ ಪ್ರತ್ಯೇಕ ಕೇಂದ್ರ ಆರಂಭಿಸಲಾಗಿದೆ   

ರಾಯಚೂರು: ಕೊರೊನಾ ವೈರಸ್‌ ಕಾಯಿಲೆ ಕುರಿತಾಗಿ ಶಂಕಿತ ರೋಗಿಗಳಿದ್ದರೆ ತಪಾಸಣೆ ಕೈಗೊಳ್ಳಲು ಹಾಗೂ ರೋಗ ಹರಡದಂತೆ ಮುಂಜಾಗ್ರತೆ ವಹಿಸಿರುವ ಜಿಲ್ಲಾ ಆರೋಗ್ಯ ಇಲಾಖೆಯು, ರಿಮ್ಸ್‌ನಲ್ಲಿ ರೋಗ ತಪಾಸಣೆಗೆ ವಿಶೇಷ ವಿಭಾಗ ಆರಂಭಿಸಿದೆ.

ರಿಮ್ಸ್‌ ಆಸ್ಪತ್ರೆಯ ರಕ್ತನಿಧಿ ಕೇಂದ್ರ ಹತ್ತಿರದ ಕೋಣೆಯಲ್ಲಿ ಎಂಟು ಹಾಸಿಗೆಯುಳ್ಳ ಕೇಂದ್ರ ತೆರೆಯಲಾಗಿದೆ. ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಿದ್ದು, ವೆಂಟಿಲೇಟರ್, ಆಕ್ಸಿಜನ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ರೋಗದ ಲಕ್ಷಣಗಳುಳ್ಳ ಜನ ಆಸ್ಪತ್ರೆಗೆ ಬಂದಲ್ಲಿ ರಕ್ತದ ಮಾದರಿ ಪಡೆದು ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.

ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಎರಡು ಬೆಡ್‌ಗಳನ್ನು ವಿಶೇಷ ಚಿಕಿತ್ಸೆಗಾಗಿ ಅಳವಡಿಸಲಾಗಿದೆ. ಉಸಿರಾಟ ಸಮಸ್ಯೆ, ಜ್ವರ, ಆಯಾಸ ಸೇರಿದಂತೆ ಇನ್ನಿತರ ಸಮಸ್ಯೆ ಇರುವ ರೋಗಿಗಳು ಬಂದರೆ ತಕ್ಷಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಅಂಥ ಯಾವುದೇ ಲಕ್ಷಣಗಳುಳ್ಳ ರೋಗಿಗಳು ಬಂದಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ADVERTISEMENT

ರಿಮ್ಸ್‌ ನಿರ್ದೇಶಕ ಡಾ.ಬಸವರಾಜ ಪೀರಾಪುರ ಹೇಳುವಂತೆ, ಕೊರೊನಾ ವೈರಸ್‌ ಕಾಯಿಲೆ ಹರಡದಂತೆ ರಾಜ್ಯದಾದ್ಯಂತ ಎಲ್ಲ ಆಸ್ಪತ್ರೆಗಳಲ್ಲೂ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ರಿಮ್ಸ್‌ನಲ್ಲೂ ವಿಶೇಷ ತಪಾಸಣಾ ಕೇಂದ್ರ ಆರಂಭಿಸಲಾಗಿದ್ದು, ರೋಗದ ಲಕ್ಷಣ ಕಂಡುಬಂದಲ್ಲಿ ರಕ್ತದ ಮಾದರಿ ಪಡೆದು ಮಣಿಪಾಲ್‌ನ ಕೆಎಂಸಿ, ಬೆಂಗಳೂರಿನ ನಿಮಾನ್ಸ್ ಇಲ್ಲವೇ ಪುಣೆಯ ಎನ್‌ಐವಿ ಆಸ್ಪತ್ರೆಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗುವುದು. ಒಂದು ವಾರದೊಳಗೆ ವರದಿ ಬರಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.