ಲಿಂಗಸುಗೂರು: ‘ಎಸ್‌ಎಸ್‌ಎಲ್‌ಸಿ ಪಾಸಾಗಲು ಲಿಖಿತ ಪರೀಕ್ಷೆ, ಆಂತರಿಕ ಮೌಲ್ಯಮಾಪನ ಎರಡೂ ಸೇರಿ ಶೇ 33ರಷ್ಟು ಅಂಕ ಪಡೆದರೆ ಸಾಕು ಎಂದು ರಾಜ್ಯ ಸರ್ಕಾರ ಹೊರಡಿಸಿರುವ ಕರಡು ನಿಯಮಾವಳಿ ಶಿಕ್ಷಣ ವ್ಯವಸ್ಥೆಗೆ ಮಾರಕವಾಗಿದೆ’ ಎಂದು ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಹೇಳಿದರು.
ಪಟ್ಟಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಈವರೆಗೆ ಉತ್ತೀರ್ಣಕ್ಕೆ ಶೇ 35 ಅಂಕ ಪಡೆಯುವುದು ಕಡ್ಡಾಯವಾಗಿತ್ತು. ಈಗ ಅದನ್ನು ಶೇ 33ಕ್ಕೆ ಇಳಿಸಿ ನಿಯಾಮ ವಳಿ ರೂಪಿಸಲಾಗಿದೆ. ಇದನ್ನು ರಾಜ್ಯ ಸರ್ಕಾರ ವಾಪಸ್ ಪಡೆದು ಮೊದಲು ಇರುವಂತೆ ಶೇ35 ಅಂಕ ಮುಂದುವರಿಸಬೇಕು’ ಎಂದರು.
‘ಮಕ್ಕಳ ಗುಣಮಟ್ಟದ ಶಿಕ್ಷಣ ಸುಧಾರಣೆಗೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕೆ ವಿನಾಃ ಅಂಕ ಕಡಿಮೆಗೊಳಿಸುವುದು ಸರಿಯಲ್ಲ. ಈಗಿನ ಸರ್ಕಾರ ಶೇ 33 ಮಾಡಿದೆ. ಮುಂದಿನ ಸರ್ಕಾರ ಶೇ 20 ಮಾಡುತ್ತದೆ. ಹೀಗೆ ಮಾಡುತ್ತಾ ಹೋದರೆ ಮಕ್ಕಳ ಶಿಕ್ಷಣ ಯಾವ ಹಂತಕ್ಕೆ ತಲಪುತ್ತದೆ ಎಂಬುದರ ಕುರಿತು ಸರ್ಕಾರ ಚಿಂತನೆ ಮಾಡಬೇಕಾಗಿದೆ’ ಎಂದು ಹೇಳಿದರು.
‘ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪದ್ಧತಿಯಲ್ಲಿ ಬದಲಾವಣೆ ತಂದರೆ ಅದು ದೌರ್ಭಾಗ್ಯವಾಗಿದೆ. ಇದು ಉತ್ತರ ಕರ್ನಾಟಕದ ಜಿಲ್ಲೆಗಳ ಮಕ್ಕಳ ಮೇಲೆ ದುಷ್ಪರಿಣಾಮ ಬೀರಲಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲು ಸರ್ಕಾರ 15 ದಿನ ಕಾಲಾವಕಾಶ ನೀಡಿದೆ. ಸಾರ್ವಜನಿಕರು ಮುಕ್ತವಾಗಿ ಈ ಬಗ್ಗೆ ಧ್ವನಿ ಎತ್ತಬೇಕು’ ಎಂದರು.
ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಭೂಪನಗೌಡ ಕರಡಕಲ್, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಪಾಮಯ್ಯ ಮುರಾರಿ ಹಾಗೂ ಚೆನ್ನಾರೆಡ್ಡಿ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.