
ಸಿಂಧನೂರು: 2025-26ನೇ ಶೈಕ್ಷಣಿಕ ಸಾಲಿನ ಸಿಂಧನೂರು ತಾಲ್ಲೂಕಿನ ಎಸ್‍ಎಸ್‍ಎಲ್‍ಸಿ ಫಲಿತಾಂಶದಲ್ಲಿ ನೂರರಷ್ಟು ಸಾಧನೆ ಮಾಡಬೇಕು’ ಎಂದು ತಹಶೀಲ್ದಾರ್ ಅರುಣ್ ಎಚ್. ದೇಸಾಯಿ ಸೂಚಿಸಿದರು.
ಇಲ್ಲಿನ ನಗರಸಭೆಯ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿಯಿಂದ ಎಸ್‍ಎಸ್‍ಎಲ್‍ಸಿ ಫಲಿತಾಂಶ ಸುಧಾರಣೆಯ ಕುರಿತು ತಾಲ್ಲೂಕಿನ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
‘ತಾಲ್ಲೂಕಿನ ವಸತಿ ಶಾಲೆಗಳು ಕಡ್ಡಾಯವಾಗಿ ಶೇಕಡ ನೂರರಷ್ಟು ಫಲಿತಾಂಶ ಸಾಧಿಸಲೇಬೇಕು. ಇನ್ನುಳಿದ ಶಾಲೆಗಳು ಶೇ 90 ರಷ್ಟು ಫಲಿತಾಂಶ ಗಳಿಸಬೇಕು. ಈಗಾಗಲೇ ಜಿಲ್ಲೆಯಲ್ಲಿ ತಾಲ್ಲೂಕಿನ ಫಲಿತಾಂಶ ಉತ್ತಮವಾಗಿದ್ದು, ಮುಂದಿನ ವರ್ಷವೂ ವಿಭಾಗದಲ್ಲಿಯೂ ಉತ್ತಮ ಫಲಿತಾಂಶ ನೀಡುವ ಮೂಲಕ ದಾಖಲೆ ನಿರ್ಮಿಸಬೇಕು’ ಎಂದು ತಿಳಿಸಿದರು.
ಲಿಂಗಸಗೂರು ಉಪವಿಭಾಗದ ಸಹಾಯಕ ಆಯುಕ್ತ ಬಸವಣ್ಣೆಪ್ಪ ಕಲಶೆಟ್ಟಿ ಮಾತನಾಡಿ, ‘10ನೇ ತರಗತಿ ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿಯನ್ನು ಶಾಲೆಯ ಎಲ್ಲ ವಿಷಯಗಳ ಶಿಕ್ಷಕರು ನಿರಂತರವಾಗಿ ಗಮನಿಸಿ ಎಲ್ಲರೂ ಉತ್ತೀರ್ಣರಾಗುವಂತೆ ಕಾರ್ಯೋನ್ಮುಖರಾಗಬೇಕು’ ಎಂದರು.
ಸಮಿತಿಯ ತಾಲ್ಲೂಕು ಅಧ್ಯಕ್ಷ ರೈಲ್ವೆ ಇಲಾಖೆ ವಿಶೇಷ ಭೂ ಸ್ವಾಧೀನ ಅಧಿಕಾರಿ ಕೆ.ಶ್ರುತಿ ಮಾತನಾಡಿ, ‘ಮುಂದಿನ ದಿನಗಳಲ್ಲಿ ತಾಲ್ಲೂಕಿನ ಎಲ್ಲ ವಸತಿ ಶಾಲೆಗಳ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ನಿಲಯ ಪಾಲಕರ ಸಭೆ ಕರೆಯಲಾಗುವುದು. ಜತೆಗೆ ತಾಲ್ಲೂಕಿನಲ್ಲಿ ಶೇ 85 ಮತ್ತು ಅದಕ್ಕಿಂತ ಹೆಚ್ಚಿಗೆ ಸಾಧಿಸಿದ ಶಾಲೆಗಳ ಮುಖ್ಯಶಿಕ್ಷಕರ ಸಮಕ್ಷಮದಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಗಳ ಸಭೆ ಕರೆದು, ಶಾಲೆಗಳು ಮಾಡಿರುವ ಉತ್ತಮ ಅಂಶ ಪಡೆದು ಕ್ರಿಯಾ ಯೋಜನೆ ರೂಪಿಸಲು ಅನುವಾಗುವಂತೆ ಇನ್ನೊಂದು ಸಭೆ ನಡೆಸಲಾಗುವುದು. ಕಳೆದ ಸಾಲಿನಲ್ಲಿ ಶೇ 50ಕ್ಕಿಂತ ಕಡಿಮೆ ಸಾಧನೆ ಮಾಡಿದ ಶಾಲೆಗಳ ಮುಖ್ಯಶಿಕ್ಷಕರು ವಿಷಯವಾರು ಕ್ರಿಯಾ ಯೋಜನೆ ರೂಪಿಸಿ ಟಾಸ್ಕ್ ಫೋರ್ಸ್ ಸಮಿತಿಗೆ ಸಲ್ಲಿಸಬೇಕು’ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಮಾತನಾಡಿ, ‘ಈಗಾಗಲೇ ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯಿಂದ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆಗಳು ಹಾಗೂ ನೀಲ ನಕಾಶೆ ಬಿಡುಗಡೆಗೊಳಿಸಿದ್ದು, ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಜತೆಗೆ ಈ ವರ್ಷ ಬಿಡುಗಡೆಗೊಳಿಸಿರುವ ಪಾಠ ಆಧಾರಿತ ಮೌಲ್ಯಾಂಖನ ಪ್ರಶ್ನೋತ್ತರ, ಪ್ರಶ್ನೆಕೋಠಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಅಕ್ಷರ ದಾಸೋಹ ಬಿಸಿಯೂಟ ಯೋಜನೆ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ, ತಾಲ್ಲೂಕು ದೈಹಿಕ ಶಿಕ್ಷಣ ವಿಷಯ ಪರೀಕ್ಷಕ ಸೋಮಲಿಂಗಪ್ಪ, ಎಸ್‍ಎಸ್‍ಎಲ್‍ಸಿ ಪರೀಕ್ಷೆ ತಾಲ್ಲೂಕು ನೋಡಲ್ ಅಧಿಕಾರಿ ಅಮರೇಶ ಉಪಸ್ಥಿತರಿದ್ದರು.
ಉತ್ತಮ ಫಲಿತಾಂಶ ಪಡೆದು ದಾಖಲೆ ನಿರ್ಮಿಸಿ ವಸತಿ ಶಾಲೆಗಳ ಮುಖ್ಯಶಿಕ್ಷಕರೊಂದಿಗೆ ಪ್ರತ್ಯೇಕ ಸಭೆ ವಿಷಯವಾರು ಮಾದರಿ ಪ್ರಶ್ನೆ ಪತ್ರಿಕೆ ಬಳಸಿಕೊಳ್ಳಿ
ಶೇ 50ಕ್ಕಿಂತ ಕಡಿಮೆ ಫಲಿತಾಂಶ ಪಡೆದ ಶಾಲೆಗಳ ಮುಖ್ಯಶಿಕ್ಷಕರು ಹಾಗೂ ಶಿಕ್ಷಕರ ವಿರುದ್ಧ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದುಬಸವಣೆಪ್ಪ ಕಲಶೆಟ್ಟಿ ಸಹಾಯಕ ಆಯುಕ್ತ ಲಿಂಗಸುಗೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.