ಕವಿತಾಳ: ಸಾರ್ವಜನಿಕರ ಅನುಕೂಲಕ್ಕಾಗಿ ಹಳ್ಳಿಗಳಲ್ಲಿ ನಿರ್ಮಿಸಿದ ಬಹುತೇಕ ಬಸ್ ಶೆಲ್ಟರ್‌ಗಳು ಕಿಡಿಗೇಡಿಗಳ ಕೈ ಚಳಕಕ್ಕೆ ಬಲಿಯಾಗಿ ವಿರೂಪಗೊಂಡಿವೆ. ಪ್ರಯಾಣಿಕರು, ವಾಹನ ಸವಾರರು ಮಳೆ, ಗಾಳಿಯಿಂದ ಆಶ್ರಯ ಪಡೆಯಲು ಪರದಾಡುವಂತಾಗಿದೆ.
ಶಾಸಕರು, ಸಂಸದರ ಅನುದಾನಲ್ಲಿ ಲಕ್ಷಾಂತರ ಹಣ ಖರ್ಚು ಮಾಡಿ ನಿರ್ಮಿಸಿದ ಆಕರ್ಷಕ ಶೆಲ್ಟರ್‌ಗಳು ಕೆಲ ವರ್ಷಗಳಲ್ಲೇ ಅಂದ ಕಳೆದುಕೊಂಡಿವೆ. ಎಲ್‌ಇಡಿ ವಾಲ್‌ಗಳು, ಆಸನ, ನೆಲಹಾಸು, ಸ್ಟೇನ್ ಲೆಸ್ ಸ್ಟೀಲ್ ಗ್ರಿಲ್ಸ್‌ಗಳನ್ನು ಕಿತ್ತು ಹಾಕಿರುವುದು ಕಂಡು ಬರುತ್ತದೆ.
ಸಮೀಪದ ಪಾಮನಕಲ್ಲೂರು ಸರ್ಕಾರಿ ಆಸ್ಪತ್ರೆ ಎದುರು ನಿರ್ಮಿಸಿದ ಶೆಲ್ಟರ್ ಬಹುತೇಕ ಹಾನಿಗೊಂಡಿದೆ, ಒಳಗೆ, ಎರಡೂ ಬದಿಯಲ್ಲಿಅಳವಡಿಸಿದ ಎಲ್ ಇ ಡಿ ವಾಲ್ ಗಳು ಮುರಿದಿವೆ. ಆಸನಗಳು ಮಾಯವಾಗಿವೆ, ಕಬ್ಬಿಣದ ಸರಳುಗಳನ್ನು ಹಾಳು ಮಾಡಲಾಗಿದೆ, ಸುತ್ತಲೂ ಗಿಡ, ಮರಗಳು ಬೆಳೆದು ಒಳ ನುಗ್ಗಿವೆ, ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ವಾಹನ ಸವಾರರು ಅದರಲ್ಲಿ ಹೋಗಿ ನಿಂತರೆ ರಕ್ಷಣೆ ಇಲ್ಲದಂತಾಗಿದೆ.
ವಟಗಲ್, ಬಸಾಪುರ ಮತ್ತು ಚಿಲ್ಕರಾಗಿ ಗ್ರಾಮದಲ್ಲಿ ನಿರ್ಮಿಸಿದ ಶೆಲ್ಟರ್ ಗಳ ಪರಿಸ್ಥಿತಿ ಭಿನ್ನವಾಗಿಲ್ಲ. ಊರಿಗೆ ಹತ್ತಿರದಲ್ಲಿರುವ ಕಾರಣ ಅಮೀನಗಡದಲ್ಲಿ ಶೆಲ್ಟರ್ ಸುಸ್ಥಿಯಲ್ಲಿದೆ.
‘ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ಹಣದಲ್ಲಿ ನಿರ್ಮಿಸಿದ ಶೆಲ್ಟರ್ ರಕ್ಷಣೆಗೆ ಸ್ಥಳೀಯರು, ಸ್ಥಳೀಯ ಆಡಳಿತ, ಸಂಘ, ಸಂಸ್ಥೆಗಳು ಕಾಳಜಿ ವಹಿಸಬೇಕು, ಶೆಲ್ಟರ್‌ಗಳನ್ನು ಕಿತ್ತು ಹಾಳು ಮಾಡುವ ಕಿಡಿಗೇಡಿಗಳ ವಿರುದ್ದ ಕ್ರಮ ಕೈಗೊಂಡಲ್ಲಿ ಅಂತವರಲ್ಲಿ ಭಯ ಮೂಡುತ್ತದೆ, ಈ ಬಗ್ಗೆ ಅಧಿಕಾರಿಗಳೂ ನಿಗಾ ವಹಿಸಬೇಕು’ ಎಂದು ಕರವೇ ಮುಖಂಡ ವೆಂಕಟೇಶ ಶಂಕ್ರಿ ಹೇಳಿದರು.
ಶೆಲ್ಟರ್‌ಗಳಲ್ಲಿದ್ದ ಶಾಸಕ ಸಂಸದರ ಭಾವಚಿತ್ರದ ಎಲ್‌ಇಡಿ ಫ್ರೇಮ್‌ಗಳನ್ನು ನೀತಿ ಸಂಹಿತೆ ಹಿನ್ನೆಲೆಯಲ್ಲಿ ತೆರವುಗೊಳಿಸಲಾಗಿದೆ. ಮತ್ತೆ ಅಳವಡಿಸುವ ಬಗ್ಗೆ ಅಧಿಕಾರಿಗಳು ಕಾಳಜಿ ತೋರಿಲ್ಲರಮೇಶ ಗಂಟ್ಲಿ ಪಾಮನಕಲ್ಲೂರು ಕರವೇ ಹೋಬಳಿ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.