ADVERTISEMENT

ಕಥೆಗಾರರಿಗೆ ನೆಲೆಯ ತಿಳಿವಳಿಕೆ ಅಗತ್ಯ

ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿ ದಸ್ತಗೀರಸಾಬ್ ದಿನ್ನಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2019, 13:17 IST
Last Updated 11 ಏಪ್ರಿಲ್ 2019, 13:17 IST
ರಾಯಚೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಸುತ್ತಮುತ್ತಲ ಕಥೆಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿ ದಸ್ತಗೀರಸಾಬ್ ದಿನ್ನಿ ಮಾತನಾಡಿದರು
ರಾಯಚೂರಿನಲ್ಲಿ ಬುಧವಾರ ಆಯೋಜಿಸಿದ್ದ ‘ಸುತ್ತಮುತ್ತಲ ಕಥೆಗಳು’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಾಹಿತಿ ದಸ್ತಗೀರಸಾಬ್ ದಿನ್ನಿ ಮಾತನಾಡಿದರು   

ರಾಯಚೂರು: ಜೀವನಾನುಭವಗಳನ್ನು ಕಲಾತ್ಮಕವಾಗಿ ಕಟ್ಟಿಕೊಡಲು ಕಥೆಗಾರರಿಗೆ ಭಾಷೆಯ ಸೂಕ್ಷ್ಮ ಚಹರೆ, ತಂತ್ರಗಾರಿಕೆ, ವಿಶಿಷ್ಟ ಒಳನೋಟ ಹಾಗೂ ಕುತೂಹಲ ಹುಟ್ಟಿಸುವ ಕಥನಕಲೆಯ ನೆಲೆಗಳು ತಿಳಿದಿರಬೇಕು ಎಂದು ಸಾಹಿತಿ ದಸ್ತಗೀರಸಾಬ್ ದಿನ್ನಿ ಹೇಳಿದರು.

ನಗರದ ಕನ್ನಡ ಭವನದಲ್ಲಿ ಲೋಹಿಯಾ ಪ್ರತಿಷ್ಠಾನ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಬುಧವಾರ ಆಯೋಜಿಸಿದ್ದ ಸಮಾರಂಭದಲ್ಲಿ ಓಂಪ್ರಕಾಶ ನಾಯಕ ಬರೆದ ‘ಸುತ್ತಮುತ್ತಲ ಕಥೆಗಳು’ ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದರು.

ಓಂಪ್ರಕಾಶ್ ಅವರ ಕಥೆಗಳಲ್ಲಿ ನಗರ ಕೇಂದ್ರಿತ ಜಗತ್ತು ವಿಶಿಷ್ಟವಾಗಿ ತೆರೆದುಕೊಂಡಿದೆ. ನಗರದಲ್ಲಿನ ಶೋಷಣೆ, ಮೋಸ, ವಿಲಾಸಿ ಬದುಕು, ಸಂಬಂಧಗಳ ವಿಘಟನೆ, ಆಧುನಿಕ ಜಗತ್ತಿನ ತಲ್ಲಣಗಳನ್ನು ಎಳೆ ಎಳೆಯಾಗಿ ಅನಾವರಣಗೊಳಿಸಲಾಗಿದೆ ಎಂದರು.

ADVERTISEMENT

ಮಾನವೀಯತೆ ಹಾಗೂ ಮನುಷ್ಯನ ಘನತೆ ಎತ್ತಿಯುವ ಗುಣವನ್ನು ಕಥೆಗಳು ಒಳಗೊಂಡಿವೆ. ಸಹಜ ಹಾಗೂ ಸರಳವಾಗಿ ಕಥೆಗಳು ಅರಳಿಕೊಂಡಿವೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಾಹಿತಿ ವೀರಹನುಮಾನ್ ಮಾತನಾಡಿ, ಓಂಪ್ರಕಾಶ್ ಕಥೆಗಳಲ್ಲಿ ಮಾನವ ಸಂಬಂಧಗಳ ಶೋಧ, ಸಾಮಾಜಿಕ ನಿಲುವುಗಳಿವೆ. ಬರಗಾರರು ಬರವಣಿಗೆಯ ಜೊತೆಗೆ ಹೋರಾಟದ ಮನೋಭಾವನೆ ಮೈಗೂಡಿಸಿಕೊಂಡರೆ ಬರವಣಿಗೆಗೆ ಇನ್ನಷ್ಟು ಶಕ್ತಿ, ಸಾಮರ್ಥ್ಯ ಬರಲಿದೆ ಎಂದು ತಿಳಿಸಿದರು.

ಲೇಖಕ ಓಂ ಪ್ರಕಾಶ ಮಾತನಾಡಿ, ಬೆಂಗಳೂರಿನಲ್ಲಿ ನೆಲೆ ನಿಂತರೂ ಹುಟ್ಟಿ ಬೆಳೆದ ರಾಯಚೂರಿನ ಪರಿಸರ ತುಂಬಾ ಕಾಡುತ್ತಿದೆ. ಇಲ್ಲಿನ ನೈಜ ಪ್ರಸಂಗಗಳನ್ನು ಕಥೆಯಾಗಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಕಥೆಗಳಲ್ಲಿ ಜೀವನೋತ್ಸಾಹವಿದೆ ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಜೆ.ಎಲ್.ಈರಣ್ಣ ಪ್ರಾಸ್ತಾವಿಕ ಮಾತನಾಡಿದರು. ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಭೀಮನಗೌಡ ಇಟಗಿ ಸ್ವಾಗತಿಸಿದರು. ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕೆ.ಗಿರಿಜಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.