ADVERTISEMENT

‘ಬೀದಿನಾಯಿ, ದನಗಳ‌ ನಿಯಂತ್ರಣಕ್ಕೆ ತಂಡ ರಚನೆ’

ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 6:15 IST
Last Updated 8 ಜುಲೈ 2025, 6:15 IST
ಜುಬಿನ್ ಮೊಹಾಪಾತ್ರ
ಜುಬಿನ್ ಮೊಹಾಪಾತ್ರ   

ರಾಯಚೂರು: ನಗರದಲ್ಲಿ ಬೀ‌ದಿ ನಾಯಿ, ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇವುಗಳ ಕಡಿವಾಣಕ್ಕೆ ಈಗಾಗಲೇ ತಂಡ ರಚನೆ ಮಾಡಲಾಗಿದೆ ಎಂದು ಮಹಾನಗರ ಪಾಲಿಕೆಯ ಆಯುಕ್ತ ಜುಬಿನ್ ಮೊಹಾಪಾತ್ರ ತಿಳಿಸಿದರು.

ಈಚೆಗೆ ಬೀದಿ ನಾಯಿಗಳ ಗುಂಪು ಸೇರಿ ಮಕ್ಕಳ, ಮಹಿಳೆಯರ, ವೃದ್ಧರ ಮೇಲೆ ಎರಗಿ ಕಚ್ಚಿ ಗಂಭೀರ ಗಾಯಗೊಳಿಸಿದ ಪ್ರಕರಣಗಳು ನಡೆದಿವೆ. ಭಾನುವಾರ ಸಹ ನಾಲ್ಕು ವರ್ಷದ ಮಗುವಿಗೆ ಎರಡು ನಾಯಿಗಳು ಕಚ್ಚಿವೆ. ಇದನ್ನು ನಿಯಂತ್ರಣ ಮಾಡಲಿಕ್ಕೆ ಮಹಾನಗರ ಪಾಲಿಕೆ, ಪೊಲೀಸ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡಿ ಕಡಿವಾಣ ಹಾಕುತ್ತೇವೆ ಎಂದು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.

ಶ್ವಾನಗಳಿಗೆ ಸಂತಾನ ಶಕ್ತಿಹರಣ ಚಿಕಿತ್ಸೆ ಮಾಡಲಿಕ್ಕೆ ಡಾ.ದರ್ಶನ್ ಅವರನ್ನು ಕರೆಸಿದ್ದೇವೆ. ಪಾಲಿಕೆಯ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸಲು ₹24.75 ಲಕ್ಷ ಮೊತ್ತದ ಟೆಂಡರ್ ಕರೆದು, ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಕ್ರಮವಹಿಸಲಾಗುತ್ತಿದೆ ಎಂದರು.

ADVERTISEMENT

ಸಾರ್ವಜನಿಕರು ತಮ್ಮ ಮಕ್ಕಳನ್ನು ಒಬ್ಬಂಟಿಯಾಗಿ ಹೊರಗಡೆ ಬೀಡದೇ ಜಾಗೃತಿ ವಹಿಸಬೇಕು. ಜೊತೆಗೆ ನಾಯಿಗಳಿಗೆ ಸಾರ್ವಜನಿಕ ಉದ್ಯಾನ, ರೆಸ್ಟೋರೆಂಟ್, ಹೋಟೆಲ್, ಮನೆಯ ಮುಂದೆ ಹಾಗೂ ಜನ ಇರುವ ಸ್ಥಳಗಳಲ್ಲಿ ಆಹಾರವನ್ನು ಹಾಕಬಾರದು ಎಂದು ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶದಂತೆ ಕಡಿವಾಣ ಹಾಕಬೇಕು ಎಂದು ನಿರ್ಧಾರ ಮಾಡಲಾಗಿದೆ. ಜುಲೈ 8ರಿಂದ ಕಾರ್ಯಾಚರಣೆ ಮಾಡುತ್ತೇವೆ. ಪಾಲಿಕೆ ವ್ಯಾಪ್ತಿಯಲ್ಲಿ ನೈರ್ಮಲ್ಯ ನಿರೀಕ್ಷಕರು ಹಾಗೂ ಮೇಲ್ವಿಚಾರಕರನ್ನು ಒಳಗೊಂಡಂತೆ ಸುಮಾರು 10 ತಂಡಗಳನ್ನು ರಚಿಸಿ ಪ್ರತಿನಿತ್ಯ ವಿವಿಧ ಬಡಾವಣೆಗಳಲ್ಲಿ ಗಸ್ತಿ ನಡೆಸಿ ಬೀದಿ ನಾಯಿಗಳನ್ನು ಬೇರೆಡೆ ಸಾಗಿಸಲು ಕ್ರಮ ವಹಿಸಲಾಗುತ್ತಿದೆ. ಮಂಡ್ಯ ಜಿಲ್ಲೆಯ ಸಂಸ್ಥೆಯೊಂದಕ್ಕೆ ಟೆಂಡರ್ ನೀಡಲಾಗಿದ್ದು, 1,375 ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಪಡಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.

ಈಗಾಗಲೇ ಬಿಡಾಡಿ ದನಗಳ ಕಾರ್ಯಾಚರಣೆ ಪ್ರಾರಂಭವಾಗಿದೆ. 60ರಿಂದ 70 ದನಗಳನ್ನು ವಶಪಡಿಕೊಳ್ಳಲಾಗಿದೆ. 11 ಜನ ಮಾಲೀಕರಿಗೆ ದಂಡವನ್ನು ಹಾಕಲಾಗಿದೆ. ಒಂದು ದನಕ್ಕೆ ₹1000 ದಂಡವನ್ನು ವಿಧಿಸಲಾಗುತ್ತಿದೆ. 11 ಸಾವಿರ ದಂಡ ವಿಧಿಸಿ ದನಗಳ ಮಾಲೀಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಘನತ್ಯಾಜ್ಯವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪಾಲಿಕೆಯ ಆರೋಗ್ಯಾಧಿಕಾರಿ ಡಾ.ಶಾಕೀರ್, ಬಿ.ವೈ.ವಾಲ್ಮೀಕಿ, ಪಶು ವೈದ್ಯಾಧಿಕಾರಿ ಬಸವರಾಜ ಪಾಟೀಲ, ಪಾಲಿಕೆಯ ಪರಿಸರ ಎಂಜಿನಿಯರ್ ಜೈಪಾಲ ರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.