ADVERTISEMENT

ಪ್ರಯತ್ನಶೀಲರಾಗದಿದ್ದರೆ ಸಾಧಿಸಲಾಗದು: ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2025, 7:41 IST
Last Updated 1 ಸೆಪ್ಟೆಂಬರ್ 2025, 7:41 IST
ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಕುರುಬರ ಸಂಘ ಮತ್ತು ಕನಕ ನೌಕರರ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು
ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಕುರುಬರ ಸಂಘ ಮತ್ತು ಕನಕ ನೌಕರರ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು   

ಸಿಂಧನೂರು: ‘ನಿರಂತರ ಅಧ್ಯಯನ, ಸಮಯಪ್ರಜ್ಞೆ, ಕಠಿಣ ಪರಿಶ್ರಮವಿದ್ದರೆ ವಿದ್ಯಾರ್ಥಿಗಳ ಜೀವನದಲ್ಲಿ ಸಾಧನೆ ಸಾಧ್ಯ. ಮುಖ್ಯವಾಗಿ ಪ್ರಯತ್ನಶೀಲರಾಗಿರಬೇಕು. ಇದು ಇಲ್ಲದಿದ್ದರೆ ಸಾಧಿಸಲಾಗದು’ ಎಂದು ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಹೇಳಿದರು.‌

ಇಲ್ಲಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಕುರುಬರ ಸಂಘ ಮತ್ತು ಕನಕ ನೌಕರರ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘371(ಜೆ) ಕಲಂ ಜಾರಿಯಾದ ನಂತರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆ ಪಡೆದಿರುವುದು ಆಶಾದಾಯಕ ಬೆಳವಣಿಗೆ. ಐಎಎಸ್, ಕೆಎಎಸ್ ಗುರಿ ಹೊಂದಿ ಛಲದಿಂದ ಅಭ್ಯಾಸ ಮಾಡಬೇಕು. ಕುರುಬ ಸಮಾಜವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ದೊರೆಯಲಿದೆ. ಅದಕ್ಕಾಗಿ ಶ್ರೀಗಳ ನೇತೃತ್ವದಲ್ಲಿ ಹೋರಾಟ ರೂಪಿಸಲಾಗುವುದು’ ಎಂದು ಹೇಳಿದರು.

ADVERTISEMENT

ಬೆಂಗಳೂರಿನ ಇನ್‌ಸೈಟ್ಸ್ ಐಎಎಸ್ ಮತ್ತು ಕೆಎಎಸ್ ಅಕಾಡೆಮಿ ಸಂಸ್ಥಾಪಕ ನಿರ್ದೇಶಕ ಜಿ.ಬಿ. ವಿನಯಕುಮಾರ ಮಾತನಾಡಿ, ‘ನಮ್ಮ ಜೀವನವನ್ನು ನಾವೇ ಉದ್ಧಾರ ಮಾಡಿಕೊಳ್ಳಬೇಕು. ನಿರಂತರ ಓದುವಿಕೆ ಉನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತದೆ’ ಎಂದು ಹೇಳಿದರು.

ಚಿಂತಕ ಚಿದಾನಂದಯ್ಯ ಗುರುವಿನ ಮಾತನಾಡಿದರು. ಬಿಜೆಪಿ ಮುಖಂಡ ಕೆ.ಕರಿಯಪ್ಪ ಡೊಳ್ಳು ಬಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕನಕದಾಸ, ಸಂಗೊಳ್ಳಿರಾಯಣ್ಣ ಮತ್ತು ಅಹಲ್ಯಬಾಯಿ ಹೊಳ್ಕರ್ ಭಾವಚಿತ್ರಕ್ಕೆ ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಹಾಗೂ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ ಮಾಲಾರ್ಪಣೆ ಮಾಡಿದರು.

ಎಸ್‍ಎಸ್‍ಎಲ್‍ಸಿ, ದ್ವಿತೀಯ ಪಿಯುಸಿ ಹಾಗೂ ಪದವಿಯ ಸಾಧಕ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

ತಿಂಥಿಣಿ ಬ್ರಿಜ್ ಕನಕ ಗುರುಪೀಠದ ಸಿದ್ಧರಮಾನಂದಪುರಿ ಸ್ವಾಮೀಜಿ, ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಮಾದಯ್ಯ ಗುರುವಿನ, ಬೀರಪ್ಪ ಪೂಜಾರಿ ರೌಡಕುಂದಾ ಸಾನ್ನಿಧ್ಯ ವಹಿಸಿದ್ದರು.

ಸಿಂಧನೂರಿನ ಕನಕದಾಸ ಕಲ್ಯಾಣ ಮಂಟಪದಲ್ಲಿ ಕುರುಬರ ಸಂಘ ಮತ್ತು ಕನಕ ನೌಕರರ ಸಂಘ ತಾಲ್ಲೂಕು ಘಟಕದಿಂದ ಭಾನುವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ತಾಲ್ಲೂಕು ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ ಮಾತನಾಡಿದರು

ಕುರುಬರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಬಸವಂತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಭೀಮಣ್ಣ, ಮಾಜಿ ಅಧ್ಯಕ್ಷ ವಿ.ಬಸವರಾಜ, ಚಿಂತಕ ನಿರುಪಾದೆಪ್ಪ ಗುಡಿಹಾಳ ವಕೀಲ, ಮಸ್ಕಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ತುರ್ವಿಹಾಳ ಪ.ಪಂ ಅಧ್ಯಕ್ಷ ಬಾಪುಗೌಡ ದೇವರಮನಿ, ಕನಕ ನೌಕರರ ಸಂಘದ ಅಧ್ಯಕ್ಷ ಗ್ಯಾನಪ್ಪ ಕನ್ನಾಂಪೇಟೆ, ನಗರಸಭೆ ಸದಸ್ಯ ಚಂದ್ರಶೇಖರ ಮೈಲಾರ, ಬಿಇಒ ಬಸಲಿಂಗಪ್ಪ, ಅಕ್ಷರ ದಾಸೋಹ ಯೋಜನೆ ಸಹಾಯಕ ನಿರ್ದೇಶಕ ಸಾಬಣ್ಣ ವಗ್ಗರ, ಸಿಂಧನೂರು ವಿಎಸ್‍ಎಸ್‍ಎನ್ ಅಧ್ಯಕ್ಷ ಅಮರೇಶ ಅಂಗಡಿ, ಮುಖ್ಯಶಿಕ್ಷಕಿ ರಮಾದೇವಿ ಶಂಭೋಜಿ ಉಪಸ್ಥಿತರಿದ್ದರು. ಹುಚ್ಚಪ್ಪ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.