ADVERTISEMENT

ವಿದ್ಯಾರ್ಥಿಗಳು ಅಂಕ ಉತ್ಪಾದಿಸುವ ಯಂತ್ರಗಳು

ಜಿಲ್ಲಾ ಮಟ್ಟದ ಪ್ರಥಮ ಚಿಕಿತ್ಸೆ ಹಾಗೂ ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 13:39 IST
Last Updated 28 ಡಿಸೆಂಬರ್ 2019, 13:39 IST
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು
ರಾಯಚೂರಿನ ಪಂ.ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು   

ರಾಯಚೂರು: ವಿದ್ಯಾರ್ಥಿಗಳು ಅಂಕ ಉತ್ಪಾದಿಸುವ ಯಂತ್ರಗಳಂತಾಗಿದ್ದಾರೆ. ಅವರಿಗೆ ನೈತಿಕತೆ ಹಾಗೂ ನೈಸರ್ಗಿಕ ಬೋಧನೆ ಮಾಡದೇ ನಾಲ್ಕು ಗೋಡೆಗಳ ಮಧ್ಯೆ ಬಂಧಿಸಿ ಬೆಳೆಸುತ್ತಿದ್ದೇವೆ ಎಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ನಾಗಣ್ಣ ಕಳವಳ ವ್ಯಕ್ತಪಡಿಸಿದರು.

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಭಾರತ ಸೇವಾದಳ, ಜಿಲ್ಲಾ ಸಹಕಾರ ಒಕ್ಕೂಟ, ನೆಹೆರು ಯುವ ಕೇಂದ್ರ, ಆಶೀರ್ವಾದ ಪೌಂಡೇಷನ್, ರಿಮ್ಸ್ ಆಸ್ಪತ್ರೆ, ಎ.ಎಮ್.ಇ ಶಿಕ್ಷಣ ಸಂಸ್ಥೆ, ಸುಭಾಷ್ ರೆಡ್ಡಿ ಪಾಟೀಲ್ ಶಾವಂತಗೇರಾ ಅಭಿಮಾನಿ ಬಳಗದಿಂದ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಮಕ್ಕಳು ಪಂಜರದ ಗಿಳಿಯಾಗಬಾರದು. ಪ್ರಕೃತಿಯಲ್ಲಿ ಮುಕ್ತವಾಗಿ ಬೆಳೆಯಬೇಕು. ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವಂತೆ ಮಾಡಬೇಕು. ಅದಕ್ಕೆ ರೆಡ್ ಕ್ರಾಸ್, ಸೇವಾದಳ ಸೇರಿದಂತೆ ಇನ್ನಿತರ ಸಮಾಜ ಸೇವಾ ಸಂಘಗಳಲ್ಲಿ ಸೇರಿಕೊಂಡು ಸಕ್ರೀಯವಾಗಿ ತೊಡಗುವಂತೆ ತಿಳಿಸಬೇಕು ಎಂದರು.

ADVERTISEMENT

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ ವೇದಮೂರ್ತಿ ಮಾತನಾಡಿ, ಸ್ವಾರ್ಥಕ್ಕಾಗಿ ಜೀವನ ಮಾಡುವುದು ಬೇಡ. ನಿಸ್ವಾರ್ಥ ಸೇವಾ ಮನೋಭಾವನೆ ಎಲ್ಲರೂ ಬೆಳೆಸಿಕೊಳ್ಳಬೇಕು. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿಗಳು ವರ್ಷಕ್ಕೆ ಮೂರು ಬಾರಿ ರಕ್ತದಾನ ಮಾಡಬೇಕು. ಸಮಾಜ ಸೇವಾ ಮನೋಭಾವನೆ ಮೈಗೂಡಿಕೊಳ್ಳಬೇಕು ಎಂದು ತಿಳಿಸಿದರು.

ರಾಜ್ಯ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಎನ್.ಗಂಗಣ್ಣ ಮಾತನಾಡಿ,ಮಾನವ ಹುಟ್ಟಿನಿಂದ ಸಾಯುವರೆಗೂ ಸಮಾಜ ಸೇವೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸೋಮವಾರ ಪೇಟೆ ಹಿರೇಮಠದ ಅಭಿನವ ರಾಚೋಟಿ ವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ’ಅಳಿಯುವುದು ಕಾರ್ಯ ಉಳಿಯುವುದು ಕೀರ್ತಿ ಎಂಬಂತೆ ಎಷ್ಟು ವರ್ಷ ಬದುಕುತ್ತೇವೆ ಎಂಬುದು ಮುಖ್ಯವಲ್ಲ. ಬದುಕಿದ್ದಾಗ ಸಮಾಜಕ್ಕೆ ನಾವೇನು ಸೇವೆಅರ್ಪಿಸಿದ್ದೇವೆಎನ್ನುವುದು ಮುಖ್ಯವಾಗಿದೆ’ ಎಂದರು.

ಭಾರತ ಸೇವಾದಳ ಕೇಂದ್ರ ಸಮಿತಿ ಅಧ್ಯಕ್ಷ ಎಚ್.ಎಂ.ಗುರುಸಿದ್ಧಸ್ವಾಮಿ, ಶೇಖರಗೌಡ ಪಾಟೀಲ ಹಾಗೂ ರೆಡ್‌ಕ್ರಾಸ್‌ ಸಂಸ್ಥೆಯ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಸನಗೌಡ ಪಿ.ಪಾಟೀಲ ಮಾತನಾಡಿದರು. ರೆಡ್‌ಕ್ರಾಸ್‌ ಸಂಸ್ಥೆಯ ವಿಪತ್ತು ನಿರ್ವಹಣೆ ನಿರ್ದೇಶಕ ಶಕೀಬ್ ಎಂ.ಎ., ಇವರು ಪ್ರಥಮ ಚಿಕಿತ್ಸೆ ಮತ್ತು ವಿಪತ್ತು ನಿರ್ವಹಣೆ ತರಬೇತಿ ಕಾರ್ಯಾಗಾರ ನಡೆಸಿಕೊಟ್ಟರು.

ದಿ.ಸುಭಾಷ್ ರೆಡ್ಡಿ ಪಾಟೀಲ ಶಾವಂತಗೇರಾ ಅವರ ಪುಣ್ಯಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸಲಾಯಿತು. ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.

ರವಿ ಬೋಸರಾಜು, ವಿಜಯಕುಮಾರ ಪಾಟೀಲ,ಅನಿರುದ್ಧ ಕುಲಕರ್ಣಿ,ದರೂರ್ ಬಸವರಾಜ, ಡಾ.ಸುರೇಂದ್ರ, ಜಿ.ಎಸ್.ಹಿರೇಮಠ, ಕಲ್ಲಯ್ಯಸ್ವಾಮಿ, ಗಧಾರ ಬೆಟ್ಟಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.