ADVERTISEMENT

ರಾಯಚೂರಿನಲ್ಲಿ ಅಪಾರ ಶಿಷ್ಯಬಳಗ

ನಾಗರಾಜ ಚಿನಗುಂಡಿ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ರಾಯಚೂರಿನಲ್ಲಿ 60 ವರ್ಷಗಳ ಹಿಂದೆ ಮಾಧ್ವ ಮಹಾಮಂಡಳದಿಂದ ಪೇಜಾವರ ಶ್ರೀಗಳು ಸ್ಥಾಪಿಸಿದ ರಾಘವೇಂದ್ರ ವಿದ್ಯಾರ್ಥಿ ನಿಲಯ
ರಾಯಚೂರಿನಲ್ಲಿ 60 ವರ್ಷಗಳ ಹಿಂದೆ ಮಾಧ್ವ ಮಹಾಮಂಡಳದಿಂದ ಪೇಜಾವರ ಶ್ರೀಗಳು ಸ್ಥಾಪಿಸಿದ ರಾಘವೇಂದ್ರ ವಿದ್ಯಾರ್ಥಿ ನಿಲಯ   

ರಾಯಚೂರು: ಪೇಜಾವರ ಶ್ರೀಗಳ ಆಧ್ಯಾತ್ಮಿಕತೆಗೆ, ವ್ಯಕ್ತಿತ್ವಕ್ಕೆ ಮಾರುಹೋದ ಶಿಷ್ಯರು ಹಾಗೂ ರಾಘವೇಂದ್ರ ವಿದ್ಯಾರ್ಥಿ ನಿಲಯದ ಆಶ್ರಯ ಪಡೆದು ಬದುಕು ರೂಪಿಸಿಕೊಂಡಿರುವ ಅಪಾರ ಶಿಷ್ಯವೃಂದ ರಾಯಚೂರು ಜಿಲ್ಲೆಯಲ್ಲಿದೆ.

ಮಂತ್ರಾಲಯದಲ್ಲಿ ನಡೆಯುವ ಕಾರ್ಯಕ್ರಮಕ್ಕಾಗಿ ಬಂದಾಗೊಮ್ಮೆ ರಾಯಚೂರಿಗೆ ಭೇಟಿ ನೀಡುವುದು ಅವರ ವಾಡಿಕೆಯಾಗಿತ್ತು. ಶ್ರೀಗಳ ಅನುಗ್ರಹ ಸಂದೇಶ ಕೇಳಲು ಹಾತೊರೆಯುತ್ತಿದ್ದ ಶಿಷ್ಯರೆಲ್ಲರ ಬಗ್ಗೆ ಅಪಾರ ಕಾಳಜಿ ಅವರಲ್ಲಿತ್ತು.

ಅನೇಕ ಶಿಷ್ಯರು ನೆಮ್ಮದಿಯನ್ನು ಅರಸಿಕೊಂಡು ಆಗಾಗ ರಾಯಚೂರಿನಿಂದ ಉಡುಪಿಗೆ ಹೋಗಿ ಶ್ರೀಗಳ ದರ್ಶನ ಪಡೆದು ಬರುತ್ತಿದ್ದರು. ರಾಯಚೂರಿಗೆ ಬಂದಾಗ ಪೇಜಾವರ ಶ್ರೀಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿತ್ತು. ಉಡುಪಿ ಮಠದಲ್ಲಿ ಕೃಷ್ಣನ ಪೂಜಾ ಪರ್ಯಾಯ ನಡೆಯುವ ಪೂರ್ವದಲ್ಲಿ ಶ್ರೀಗಳು ರಾಯಚೂರಿಗೆ ಭೇಟಿ ನೀಡುವುದು ವಿಶೇಷವಾಗಿತ್ತು.

ADVERTISEMENT

ಶ್ರೀಗಳು ಪರ್ಯಾಯವಿದ್ದ ಸಂದರ್ಭದಲ್ಲಿ ಅನ್ನಪ್ರಸಾದ ವ್ಯವಸ್ಥೆಗಾಗಿ ರಾಯಚೂರಿನಿಂದ ತಪ್ಪದೇ 200 ಕ್ವಿಂಟಾಲ್‌ ಅಕ್ಕಿ ಮೂಟೆಗಳನ್ನು ಶಿಷ್ಯರು ಕೃಷ್ಣ ಮಠಕ್ಕೆ ಕಳುಹಿಸುತ್ತಿದ್ದರು.

60 ವರ್ಷಗಳ ವಸತಿ ನಿಲಯ: ನಗರದ ಮಾಣಿಕಪ್ರಭು ದೇವಸ್ಥಾನ ಮಾರ್ಗದಲ್ಲಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥರು 60 ವರ್ಷಗಳ ಹಿಂದೆ ಆರಂಭಿಸಿದ್ದ ರಾಘವೇಂದ್ರ ವಿದ್ಯಾರ್ಥಿ ನಿಲಯ ಈಗಲೂ ಸಕ್ರಿಯವಾಗಿದೆ.

ಇತ್ತೀಚೆಗೆ ಡಿಸೆಂಬರ್‌ 16 ರಂದು ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ್ದರು. ನಿಲಯದ ‘ಕೃಷ್ಣ ಕುಟೀರ’ ಕೋಣೆಯಲ್ಲಿ ಕುಳಿತು ನಿಲಯದ ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದರು. ಊಟ, ವಸತಿ ಹಾಗೂ ಇನ್ನಿತರೆ ಸೌಲಭ್ಯಗಳನ್ನು ಪರಿಶೀಲಿಸಿದರು.

‘ಸದ್ಯ ಅವಸರದಲ್ಲಿದ್ದೇನೆ. ಬರುವ ಜನವರಿ 24 ರಂದು ಮತ್ತೆ ವಿದ್ಯಾರ್ಥಿ ನಿಲಯಕ್ಕೆ ಭೇಟಿಕೊಟ್ಟು, ಪ್ರತಿಯೊಬ್ಬರನ್ನು ಮಾತನಾಡಿಸುತ್ತೇನೆ. ತಪ್ಪದೇ ಅಧ್ಯಯನ ಹಾಗೂ ಸಂಧ್ಯಾವಂಧನೆಗಳನ್ನು ಮಾಡಬೇಕು’ ಎಂದು ನಿಲಯದಲ್ಲಿರುವ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.