ADVERTISEMENT

ಬಸ್‍ಪಾಸ್ ಅವಧಿ ವಿಸ್ತರಣೆಗೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 14:49 IST
Last Updated 1 ಜುಲೈ 2022, 14:49 IST
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಡಿಎಸ್‍ಒ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ರಾಯಚೂರಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಎಐಡಿಎಸ್‍ಒ ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.   

ರಾಯಚೂರು: ಪದವಿ, ಎಂಜಿನಿಯರಿಂಗ್, ಡಿಪ್ಲೊಮಾ, ಮೆಡಿಕಲ್ ಹಾಗೂ ಇತರೆ ಕೋರ್ಸ್‍ಗಳ ವಿದ್ಯಾರ್ಥಿಗಳ ಬಸ್ ಪಾಸ್ ಅವಧಿಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ಮುಗಿಯುವರೆಗೂ ವಿಸ್ತರಿಸಬೇಕು ಎಂದು ಒತ್ತಾಯಿಸಿ ಆಲ್ ಇಂಡಿಯಾ ಸ್ಟೂಡೆಂಟ್ ಆರ್ಗನೈಸೇಶನ್ (ಎಐಡಿಎಸ್‍ಒ) ಜಿಲ್ಲಾ ಘಟಕದ ಪದಾಧಿಕಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿ ಆನಂತರ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಎರಡು ಮತ್ತು ಮೂರನೇ ವರ್ಷದ ಪದವಿ ಹಾಗೂ ಇನ್ನಿತರ ಉನ್ನತ ಶಿಕ್ಷಣದ ವಿದ್ಯಾರ್ಥಿಗಳಿಗೆ ಸೆಪ್ಟೆಂಬರ್ 2021ರಲ್ಲಿ ಬಸ್ ಪಾಸ್ ನೀಡಲಾಗಿತ್ತು. ಆದರೆ, ಅವರ ತರಗತಿಗಳು ನವೆಂಬರ್ ನಲ್ಲಿ ಆರಂಭವಾಗಿತ್ತು. ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಡಿಸೆಂಬರ್ 2021ರಲ್ಲಿ ನೀಡಲಾಗಿತ್ತು. ವಿದ್ಯಾರ್ಥಿ ಬಸ್ ಪಾಸ್‍ಗೆ ಅವರ ಶೈಕ್ಷಣಿಕ ವರ್ಷದ ಕೊನೆಯವರೆಗೂ ಮಾನ್ಯತೆ ಇರುತ್ತದೆ.

ನವೆಂಬರ್ ನಲ್ಲಿ ತರಗತಿ ಆರಂಭವಾದರೆ ಆಗಸ್ಟ್ ವರೆಗೆ ಹಾಗೂ ಡಿಸೆಂಬರ್ ನಲ್ಲಿ ಪಾಸ್ ಪಡೆದರೆ ಕೋರ್ಸ್ ಮುಗಿಯುವವರೆಗೆ ಬಸ್ ಪಾಸ್ ಉಪಯೋಗಿಸುವ ಅವಕಾಶವಿದೆ. ರಾಜ್ಯ ಸಾರಿಗೆ ನಿಗಮ ಜೂನ್ ತಿಂಗಳಿಗೆ ವಿದ್ಯಾರ್ಥಿ ಬಸ್ ಪಾಸ್‍ನ ಅವಧಿ ಕೊನೆಗೊಳ್ಳಲಿದೆ ಎಂದು ತಿಳಿಸಿದ್ದು ಮುಂದಿನ ಮೂರು ತಿಂಗಳಿನಿಂದ ಹಣ ನೀಡಿ ಓಡಾಡಬೇಕಿದೆ ಎಂದು ದೂರಿದರು.

ADVERTISEMENT

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೆಚ್ಚುವರಿ ಶುಲ್ಕ ಪಡೆಯದೆ ವಿದ್ಯಾರ್ಥಿ ಬಸ್ ಪಾಸಿನ ಅವಧಿ ಆಗಸ್ಟ್ ವರೆಗೆ ವಿಸ್ತರಣೆ ಮಾಡಿದೆ. ಎಲ್ಲಾ ಸಾರಿಗೆ ಸಂಸ್ಥೆಗಳು ಇದೇ ರೀತಿ ಅವಧಿ ಮುಂದುವರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಪೀರ್ ಸಾಬ್, ಜಿಲ್ಲಾಧ್ಯಕ್ಷ ಅಯ್ಯಾಳಪ್ಪ, ಹನುಮಂತ, ಬಸವರಾಜ, ವೀರೇಶ, ಶ್ವೇತಾ, ದೀಪಾ, ಪುಷ್ಪಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.