ADVERTISEMENT

ಕೋಕೋ ಬೆಳೆ ಪ್ರೋತ್ಸಾಹಕ್ಕೆ ಸುಕೋಬ್ಯಾಂಕ್ ಅಭಿಯಾನ: ಆನ್ ಲೈನ್ ಸಭೆ ನಾಳೆ

​ಪ್ರಜಾವಾಣಿ ವಾರ್ತೆ
Published 17 ಮೇ 2022, 13:54 IST
Last Updated 17 ಮೇ 2022, 13:54 IST
ಮನೋಹರ ಮಸ್ಕಿ
ಮನೋಹರ ಮಸ್ಕಿ   

ರಾಯಚೂರು: ಭತ್ತಕ್ಕೆ ಪರ್ಯಾಯವಾಗಿ ಕೆಲವು ಕ್ಷೇತ್ರದಲ್ಲಿ ವಾಣಿಜ್ಯ ಮತ್ತು ಪ್ಲಾಂಟೇಷನ್ ಬೆಳೆಯಾದ ಕೋಕೋ ಬೆಳೆಯನ್ನು ಉತ್ತೇಜಿಸಿ ಆರ್ಥಿಕ ಅಭಿವೃದ್ಧಿಗಾಗಿ ಸುಕೋ ಬ್ಯಾಂಕ್ ವತಿಯಿಂದ ಅಭಿಯಾನ ಆಯೋಜಿಸಿದೆ. ಮೇ 19 ರಂದು ಆನ್ ಲೈನ್ ಸಭೆ ಆಯೋಜಿಸಿದ್ದು ರೈತರು 18ರಂದು ಹೆಸರು ನೊಂದಾಯಿಸಿಕೊಳ್ಳಬೇಕು ಎಂದು ಸುಕೋ ಬ್ಯಾಂಕ್ ಸಂಸ್ಥಾಪಕ ಅಧ್ಯಕ್ಷ ಮನೋಹರ ಮಸ್ಕಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಭತ್ತದ ಬೆಲೆ ಏರಿಕೆಯಾಗುತ್ತಿಲ್ಲ. ರಾಸಾಯನಿಕ ಗೊಬ್ಬರ, ಕೃಷಿ ಯಂತ್ರೋಪಕರಣಗಳ ಬೆಲೆ ಹೆಚ್ಚಾಗುತ್ತಿದೆ. ಆದರೆ ಭತ್ತದ ಬೆಲೆ ಏರಿಕೆಯಾಗುತ್ತಿಲ್ಲ. ರೈತರಿಗೆ ಹೆಚ್ಚಿನ ಲಾಭದಾಯಕ ಬೆಳೆಯಾಗುತ್ತಿಲ್ಲ. ಭತ್ತಕ್ಕೆ ಪರ್ಯಾಯವಾಗಿ ಒಂದಿಷ್ಟು ಕ್ಷೇತ್ರದಲ್ಲಿ ವಾಣಿಜ್ಯ ಮತ್ತು ಪ್ಲಾಂಟೇಶನ್ ಬೆಳೆಯಾದ ಕೋಕೋ ಬೆಳೆಯನ್ನಾಗಿ ಜನಪ್ರಿಯಗೊಳಿಸಲು ಅಭಿಯಾನ ಆಯೋಜಿಸಲಾಗಿದೆ.

ಅಭಿಯಾನದ ಅಂಗವಾಗಿ ಮೇ 23ಕ್ಕೆ ಸಂಸದ ಸಂಗಣ್ಣ ಕರಡಿ, ಶಾಸಕ ವೆಂಕಟರಾವ್ ನಾಡಗೌಡ ಪರಣ್ಣ ಮನವಳ್ಳಿ ಅವರ ನೇತೃತ್ವದಲ್ಲಿ ಬಿಸಿಲಿನಾಡಿನಲ್ಲಿ ಕೋಕೋ ಬೆಳೆದಿರುವ ರೈತರನ್ನು ಭೇಟಿ ಮಾಡಲಿದ್ದಾರೆ ಎಂದರು.

ADVERTISEMENT

ಮೇ 19ರಂದು ಕೋಕೋ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಹಾಗೂ ಫಾರಂ ಟಿವಿ ಪ್ರತಿನಿಧಿಗಳ ನೇತೃತ್ವದಲ್ಲಿ ಆನ್ ಲೈನ್ ಸಭೆ ನಡೆಸಲಾಗುವುದು. ಆಸಕ್ತ ರೈತರು 18ರಂದು ಹೆಸರು ನೊಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ಸುಕೋ ಬ್ಯಾಂಕ್ ಕಾಲ್ ಸೆಂಟರ್ 18001215560 ಗೆ ಕರೆ ಮಾಡಬಹುದು ಎಂದು ತಿಳಿಸಿದರು.

ದೇಶದಲ್ಲಿ ಶೇ 30 ರಷ್ಟು ಕೋಕೋ ಬೆಳೆಯಲಾಗುತ್ತಿದ್ದು ಶೇ 70 ಷ್ಟು ಆಮದು ಮಾಡಿಕೊಳ್ಳಲಾಗುತ್ತಿದೆ. ಆಂಧ್ರಪ‍್ರದೇಶದಲ್ಲಿ 1,000ಕ್ಕೂ ಹೆಚ್ಚು ಎಕರೆಯಲ್ಲಿ ಕೋಕೋ ಬೆಳೆದು ಯಶಸ್ವಿಯಾಗಿದ್ದಾರೆ. ಮಲೆನಾಡಿನಲ್ಲಿ ಕೋಕೋ ಅಂತರ ಬೆಳೆಯಾಗಿ ಬೆಳೆಯುವುದು ಸಾಮಾನ್ಯ. ಇಂತಹ ಬೆಳೆಯನ್ನು ಈ ಭಾಗದಲ್ಲಿ ಪ್ರಮುಖ ಬೆಳೆಯಾಗಿ ಕೃಷಿ ಮಾಡಲು ಸೂಚಿಸಲು ಹಾಗೂ ರೈತರನ್ನು ಪ್ರೇರೇಪಿಸಲು ಸುಕೋಬ್ಯಾಂಕ್ ನಿಂದ ಅಭಿಯಾನ ಆಯೋಜಿಸಲಾಗಿದೆ.

ಇದಕ್ಕೆ ಸಾಕಷ್ಟು ಅಧ್ಯಯನ ಹಾಗೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸಕ್ತ ರೈತರಿಗೆ ಅಗತ್ಯ ಮಾಹಿತಿ, ತಾಂತ್ರಿಕ ನೆರವು, ಮಾರುಕಟ್ಟೆಯ ಮಾಹಿತಿ ಇತರೆ ರೂಪದ ಸಹಕಾರ ನೀಡಲು ಯೋಜನೆ ರೂಪಿಸಲಾಗಿದೆ ಎಂದರು.

ವಲಯ ಅಧಿಕಾರಿ ಕೃಷ್ಣಕಾಂತ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.