ADVERTISEMENT

ರಾಯಚೂರಿನಿಂದ ನಾಪತ್ತೆಯಾಗಿದ್ದ ಎಫ್‌ಡಿಸಿ ಬೆಂಗಳೂರಿನಲ್ಲಿ ನೇಣಿಗೆ ಶರಣು

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 13:46 IST
Last Updated 31 ಆಗಸ್ಟ್ 2021, 13:46 IST
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶಬಾಬು ಮಾನ್ವೆಕರ್‌
ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಪ್ರಕಾಶಬಾಬು ಮಾನ್ವೆಕರ್‌    

ರಾಯಚೂರು: ನಗರದಲ್ಲಿರುವ ರಾಯಚೂರು ಉಪವಿಭಾಗಾಧಿಕಾರಿ ಕಚೇರಿಯ ಪ್ರಥಮ ದರ್ಜೆ ಸಹಾಯಕ (ಎಫ್‌ಡಿಸಿ) ಪ್ರಕಾಶಬಾಬು ಮಾನ್ವೆಕರ್‌ (44) ನಾಪತ್ತೆಯಾಗಿ ಒಂದು ವಾರದ ಬಳಿಕ ಬೆಂಗಳೂರಿನ ಲಾಡ್ಜ್‌ವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮಂಗಳವಾರ ಶವ ಪತ್ತೆಯಾಗಿದೆ.

ಉಪ್ಪಾರ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ಆಗಸ್ಟ್‌ 23 ರಂದು ರಾಯಚೂರಿನಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಮೃತ ಪ್ರಕಾಶಬಾಬು ಅವರ ಪತ್ನಿ ಪ್ರಕರಣ ದಾಖಲಿಸಿದ್ದರು.

ಆಗಸ್ಟ್‌ 23 ರಂದು ಕಚೇರಿ ಅವಧಿ ಪೂರ್ವದಲ್ಲೇ ಕಚೇರಿಗೆ ಹಾಜರಾಗಿ 10 ನಿಮಿಷ ಉಳಿದು, ಪ್ಲಾಸ್ಟಿಕ್‌ ಚೀಲವೊಂದನ್ನು ಕೈಯಲ್ಲಿ ಹಿಡಿದುಕೊಂಡು ಹೊರ ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಚೇರಿ ಎದುರಿನಲ್ಲೇ ಬೈಕ್‌ ಬಿಟ್ಟು ಹೋಗಿದ್ದರು. ಆನಂತರ ಯಾವುದೇ ಸುಳಿವು ಸಿಕ್ಕಿರಲಿಲ್ಲ. ರಾಯಚೂರು ಪೊಲೀಸರು ಪತ್ತೆ ಕಾರ್ಯದಲ್ಲಿ ತೊಡಗಿದ್ದರು.

ADVERTISEMENT

ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಳದಲ್ಲಿ ಮರಣಪತ್ರವೊಂದು ಸಿಕ್ಕಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಅದರಲ್ಲಿ ಏನಿದೆ ಎಂಬುದು ಗೊತ್ತಾಗಿಲ್ಲ. ಆತ್ಮಹತ್ಯೆ ಕಾರಣ ಏನೆಂಬುದು ನಿಗೂಢವಾಗಿದೆ.

ರಾಯಚೂರು ತಾಲ್ಲೂಕಿನ ಆಶಾಪುರ ಗ್ರಾಮದ ಪ್ರಕಾಶ್‌ಬಾಬು ಅವರಿಗೆ ಪತ್ನಿ ಹಾಗೂ ಮೂವರು ಪುತ್ರಿಯರು ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.