ಕವಿತಾಳ: ‘ಮಕ್ಕಳಲ್ಲಿ ಶಿಸ್ತು, ಸಂಯಮ ಸೇರಿ ಸಾಮಾಜಿಕ ಬದ್ಧತೆ ಕುರಿತು ಅರಿವು ಮೂಡಿಸುವುದು, ತುರ್ತು ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ಕಠಿಣ ನಿರ್ಧಾರಗಳ ಕುರಿತು ಮಕ್ಕಳನ್ನು ಅಣಿಗೊಳಿಸುವುದು ಸ್ಕೌಟ್ಸ್ ಆಂಡ್ ಗೈಡ್ಸ್‌ನ ಪ್ರಮುಖ ಉದ್ದೇಶವಾಗಿದೆ’ ಎಂದು ಸ್ಕೌಟ್ಸ್ ಆಂಡ್ ಗೈಡ್ಸ್‌ನ ಕ್ಯಾಪ್ಟನ್ ಪುಷ್ಪಾ ಪತ್ತಾರ ಹೇಳಿದರು.
ಸಮೀಪದ ವಟಗಲ್ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರತ ಸ್ಕೌಟ್ಸ್ ಆಂಡ್ ಗೈಡ್ಸ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಮೂರು ದಿನಗಳ ಬೇಸಿಗೆ ಶಿಬಿರ ಉದ್ಘಾಟಿಸಿ ಮಾತನಾಡಿದರು.
‘ಯೋಗ, ಧ್ಯಾನದ ಮೂಲಕ ಏಕಾಗ್ರತೆ ಹೆಚ್ಚಿಸಿ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಸುವುದು, ಸ್ವಚ್ಛತೆ ಹಾಗೂ ಪರಿಸರದ ಬಗ್ಗೆ ಕಾಳಜಿ ಮೂಡಿಸುವುದು ಮತ್ತು ಸಾಹಸ ಕ್ರೀಡೆಗಳ ಕುರಿತು ಮಕ್ಕಳಿಗೆ ತರಬೇತಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.
ಎಸ್‌ಡಿಎಂಸಿ ಅಧ್ಯಕ್ಷ ಅಂಬರೀಶ, ಗ್ರಾಮ ಪಂಚಾಯಿತಿ ಸದಸ್ಯ ಆದನಗೌಡ, ಮುಖಂಡರಾದ ಮಲ್ಲನಗೌಡ ಅಂಗಡಿ, ವಿಜಯಕುಮಾರ, ಸ್ಕೌಟ್ಸ್ ಆಂಡ್ ಗೈಡ್ಸ್‌ನ ತರಬೇತುದಾರ, ಶಿಕ್ಷಕ ಹನುಮೇಶ ಮಡಿವಾಳ, ಯೋಗ ಶಿಕ್ಷಕ ದೇವರಾಜ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.