ADVERTISEMENT

ಮಳೆಯಿಂದಾದ ಹಾನಿಯ ಸಮೀಕ್ಷೆ: ಜಿಲ್ಲಾಧಿಕಾರಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2019, 15:34 IST
Last Updated 25 ಸೆಪ್ಟೆಂಬರ್ 2019, 15:34 IST
ಆರ್‌.ವೆಂಕಟೇಶಕುಮಾರ್‌
ಆರ್‌.ವೆಂಕಟೇಶಕುಮಾರ್‌   

ರಾಯಚೂರು: ಮಳೆಯಿಂದಾಗಿರುವ ಹಾನಿಯ ಬಗ್ಗೆ ಸಮೀಕ್ಷೆಗೆ ಸೂಚನೆ ನೀಡಲಾಗಿದ್ದು, ವರದಿ ಪಡೆದ ಬಳಿಕ ಪರಿಹಾರ ವಿತರಣೆಗೆ ಕ್ರಮ ವಹಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ ಕುಮಾರ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆಗಳ ಸಿಬ್ಬಂದಿ ಸಮೀಕ್ಷೆ ನಡೆಸಲಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಂದಾಯ ಇಲಾಖೆಯ ಸಿಬ್ಬಂದಿ ಸಮೀಕ್ಷೆ ನಡೆಸಿ ವರದಿ ನೀಡಲಿದ್ದಾರೆ ಎಂದರು.

ನಗರದ ಹರಿಜನವಾಡ, ಸಿಯಾತಲಾಬ್ ಸೇರಿದಂತೆ ನಗರದ ಹಲವೆಡೆ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಆನಂತರ ಹಾನಿಯ ಬಗ್ಗೆ ವರದಿ ನೀಡಲಿದ್ದಾರೆ ಎಂದು ತಿಳಿಸಿದರು.

ADVERTISEMENT

ಈಚೆಗೆ ಸಂಭವಿಸಿದ ನೆರೆಯಿಂದ ಜಿಲ್ಲೆಯಲ್ಲಿ ಎಂಟು ಮನೆಗಳು ಶೇ 75ಕ್ಕಿಂತ ಹೆಚ್ಚು ಹಾನಿಯಾಗಿವೆ. ಮನೆ ನಿರ್ಮಿಸಿಕೊಳ್ಳಲು ಸಂತ್ರಸ್ತರಿಗೆ ₹ 5ಲಕ್ಷ ನೀಡಲಾಗುತ್ತದೆ. ಶೇ 25ಕ್ಕಿಂತ ಕಡಿಮೆ ಪ್ರಮಾಣದ ಹಾನಿಗೊಳಗಾದ ಮನೆಗಳಿಗೆ ₹ 1ಲಕ್ಷ ನೀಡಲಾಗುತ್ತಿದೆ. ಎನ್‌ಡಿಆರ್‌ಎಫ್‌ ನಿಯಮದ ಪ್ರಕಾರ ಜಿಲ್ಲೆಯಲ್ಲಿ ₹ 18.5 ಕೋಟಿ ಬೆಳೆ ಹಾನಿಯಾಗಿದೆ. ಸರ್ಕಾರದಿಂದಲೇ ನೇರವಾಗಿ ಸಂತ್ರಸ್ತರ ಖಾತೆಗೆ ಪರಿಹಾರ ಜಮಾ ಮಾಡಲಾಗುತ್ತದೆ ಎಂದರು.

ತಾಲ್ಲೂಕಿನ ಗೋನಾಳ ಹತ್ತಿರ ಎನ್‌ಆರ್‌ಬಿಸಿ ಕಾಲುವೆ ಕೊಚ್ಚಿಹೋಗಿರುವ ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಎಂಜಿನಿಯರ್ ವರದಿ ನೀಡಿದ ಬಳಿಕ ತಪ್ಪು ಕಂಡುಬಂದರೆ ಕ್ರಮ ಜರುಗಿಸಲಾಗುತ್ತದೆ. ಕಾಲುವೆ ನೀರಿನಿಂದ ಜಮೀನು ಹಾಳಾಗಿದ್ದರಿಂದ ಅತೀವೃಷ್ಟಿ ನಿಯಮದಡಿ ಸಂತ್ರಸ್ತರಿಗೆ ಪರಿಹಾರ ದೊರಕಿಸಲಾಗುತ್ತದೆ. 2009ರಲ್ಲಿ ಪ್ರವಾಹಕ್ಕೀಡಾದ ಗ್ರಾಮಗಳನ್ನು ಸ್ಥಳಾಂತರಿಸಿದರೂ, ಜನರು ಹೋಗಿಲ್ಲ. ಆದ್ದರಿಂದ, ಸ್ಥಳಾಂತರ ಗ್ರಾಮಗಳ ಆಸರೆ ಮನೆಗಳ ಸ್ಥಿತಿಗತಿಯ ಬಗ್ಗೆ ವರದಿ ತರಿಸಿಕೊಂಡು ಮುಂದೆ ಏನು ಮಾಡಬೇಕು ಎಂಬುದನ್ನು ಸರ್ಕಾರಕ್ಕೆ ವರದಿ ಕೊಡಲಾಗುತ್ತದೆ ಎಂದು ವಿವರಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮೀಕಾಂತರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.